ಏಕಾದಶಿ ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನದಂದು ವಿಷ್ಣುವನ್ನು ಶ್ರದ್ದಾ, ಭಕ್ತಿಯಿಂದ ಪೂಜಿಸಲಾಗುತ್ತದೆ. ತಿಂಗಳಿಗೆ ಎರಡು ಬಾರಿ, ಅದೇ ರೀತಿ ಒಂದು ವರ್ಷದಲ್ಲಿ 24 ಏಕಾದಶಿಗಳನ್ನು ಆಚರಣೆ ಮಾಡಲಾಗುತ್ತದೆ. ಈ ಶುಭ ದಿನದಂದು ಭಕ್ತರು ವಿಷ್ಣು ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಉಪವಾಸ ವ್ರತವನ್ನು ಆಚರಿಸಿ ಭಗವಂತನ ಆಶೀರ್ವಾದವನ್ನು ಪಡೆಯುತ್ತಾರೆ.
ಈ ಬಾರಿ ಜನವರಿ 21 ರಂದು ಪುತ್ರದಾ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಈ ವ್ರತವನ್ನು ಪವಿತ್ರಾ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಲಕ್ಷ್ಮೀ ನಾರಾಯಣರ ಕೃಪೆಯನ್ನು ಹಾಗೂ ಸಂತಾನ ಭಾಗ್ಯ ಇಲ್ಲದವರು ಉತ್ತಮ ಸಂತಾನ ಭಾಗ್ಯವನ್ನು ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇನ್ನು ಭಗವಾನ್ ಶ್ರೀ ವಿಷ್ಣುವು ಈ ಉಪವಾಸವನ್ನು ಆಚರಿಸುವವರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಮತ್ತು ವ್ರತಧಾರಿಯು ಸಕಲ ಸುಖಗಳನ್ನು ಅನುಭವಿಸಿ ವೈಕುಂಠವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.
ಪುಷ್ಯ ಮಾಸದ (ಶುಕ್ಲ ಪಕ್ಷ) ದಲ್ಲಿ ಪುತ್ರದಾ ಏಕಾದಶಿ ವ್ರತವು ಜ. 20ರಂದು ಸಂಜೆ 07:26ಕ್ಕೆ ಆರಂಭವಾಗಿ ಜ. 21 ರಂದು ಸಂಜೆ 07:51 ಕ್ಕೆ ಮುಕ್ತಾಯವಾಗುತ್ತದೆ.
ಏಕಾದಶಿ ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಭಕ್ತರು ಈ ಶುಭ ದಿನದಂದು ಉಪವಾಸವನ್ನು ಮಾಡುವ ಮೂಲಕ, ಬಹಳ ಭಕ್ತಿ ಮತ್ತು ಸಮರ್ಪಣೆಯಿಂದ ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವ ಜನರು ಸಮೃದ್ಧಿ, ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ಪಡೆಯುತ್ತಾರೆ ಜೊತೆಗೆ ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾರೆ. ಇದೆಲ್ಲದರ ಜೊತೆಗೆ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳನ್ನು ಕ್ಷಮಿಸಿ ದೇವರು ನಿಮ್ಮನ್ನು ಹರಸುತ್ತಾನೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: ವೈಕುಂಠ ಏಕಾದಶಿಯನ್ನು ಯಾಕಾಗಿ ಆಚರಿಸಲಾಗುತ್ತದೆ? ಮಹತ್ವ ತಿಳಿದಿದೆಯಾ?
1. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.
2. ಮನೆಯನ್ನು ವಿಶೇಷವಾಗಿ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.
3. ಮಣೆ ಹಾಕಿ ವಿಷ್ಣುವಿನ ವಿಗ್ರಹ ಅಥವಾ ಫೋಟೋ ಇಟ್ಟು, ಬೇಕಾದ ಸಿದ್ಧತೆ ಮಾಡಿಕೊಳ್ಳಿ.
4. ದೇವರಿಗೆ ಅಲಂಕಾರ ಮಾಡಿ, ತುಳಸಿಯನ್ನು ಅರ್ಪಿಸಿ.
5. ಮನೆಯಲ್ಲಿ ತಯಾರಿಸಿದ ನೈವೇದ್ಯ ಮತ್ತು ಪಂಚಾಮೃತವನ್ನು ದೇವರ ಮುಂದೆ ಇಟ್ಟು ಭಕ್ತಿಯಿಂದ ಪೂಜೆ ಮಾಡಿ.
6. ಏಕಾದಶಿ ದಿನದಂದು ತುಳಸಿ ಎಲೆಗಳನ್ನು ಎಂದಿಗೂ ಕೀಳಬೇಡಿ.
7. ಈ ದಿನ ಸಂಜೆಯ ಸಮಯದಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಿ ಮತ್ತು “ಓಂ ನಮೋ ಭಗವತೇ ವಾಸುದೇವಾಯ” ಎಂಬ ಶ್ಲೋಕವನ್ನು 108 ಬಾರಿ ಪಠಣ ಮಾಡಿ.
ಈ ದಿನ ಯಾವ ಮಂತ್ರ ಪಠಣ ಮಾಡಬೇಕು?
– ಓಂ ನಮೋ ಭಗವತೇ ವಾಸುದೇವಾಯ
– ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ್ ನಾರಾಯಣ ವಾಸುದೇವ
– ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ