ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಏನಾದರು ಸಾಧಿಸಬೇಕು ಎಂದು ಸದಾ ಹಂಬಲಿಸುತ್ತಲೇ ಇರುತ್ತಾನೆ. ಆದರೆ ಅದೆಷ್ಟೋ ಜನ ದಾರಿ ಕಾಣದೇ ಏನೇನೋ ಮಾಡುತ್ತಾರೆ. ಯಾವುದೋ ತಪ್ಪಿಗೆ ಯಾರನ್ನೋ ಗುರಿಯಾಗಿಸುತ್ತಾರೆ. ಭಗವಂತನ ಸೃಷ್ಟಿ ವೈವಿಧ್ಯತೆಯನ್ನು ಗಮನಿಸಿ ಅದರ ಕುರಿತಾಗಿ ಸತ್ಯಾಂಶ ಕಂಡು ಸತ್ಯಾಸತ್ಯತೆಗಳನ್ನು ಮನಗಂಡು ದಾರಿ ಸರಿಪಡಿಸಿಕೊಳ್ಳೂವುದೇ ಇಲ್ಲ. ಇದೆಕ್ಕೇನು ಕಾರಣ? ಅಂತ ಸಂದೇಹ ಬರಬಹುದು. ಇದಕ್ಕುತ್ತರ ನಮ್ಮಲ್ಲೇ ಇದೆ. ಅದೇ ನಮ್ಮ ನಿಜವಾದ ಶತ್ರುವನ್ನು ನಾವು ತಿಳಿಯದೇ ಇರುವುದು ಎಂಬುದು.
ಜಗತ್ತಿನಲ್ಲಿ ಮುಖ್ಯವಾಗಿ ನಾಲ್ಕು ಯುಗಗಳು. 1.ಸತ್ಯ ಯುಗ 2.ತ್ರೇತಾಯುಗ 3. ದ್ವಾಪರಯುಗ ಮತ್ತು 4. ಕಲಿಯುಗ ಎಂಬುದಾಗಿ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಯುಗಗಳಿಗೆ ಅನುಗುಣವಾಗಿ ಸತ್ಯ ಅಸತ್ಯ, ಧರ್ಮ ಅಧರ್ಮ, ಶತ್ರು ಮಿತ್ರ ಎಂಬ ವಿಭಾಗಗಳು ಒಂದೊಂದು ರೀತಿಯಲ್ಲಿತ್ತು.
ಮೊದಲನೇಯದ್ದು ಸತ್ಯ ಯುಗ: ಇಲ್ಲಿ ಕೇವಲ ವೇದ ಅಂದರೆ ಜ್ಞಾನ ಮಾತ್ರ ಇತ್ತು. ಈ ಯುಗದಲ್ಲಿ ಅಧರ್ಮವೆಂಬುದೇ ಇರಲಿಲ್ಲ ಆದ ಕಾರಣ ಇಲ್ಲಿ ಶತ್ರು ಮಿತ್ರ ಎಂಬ ವ್ಯವಸ್ಥೆಯೇ ಕಾಣಲು ಸಾಧ್ಯವಿಲ್ಲ.
ಎರಡನೇಯದ್ದು ತ್ರೇತಾಯುಗ: ಇಲ್ಲಿ ಧರ್ಮ ಅಧರ್ಮ ಎಂಬುದು ಇತ್ತು. ಇದು ಸಮುದ್ರದ ಆಕಡೆ ಈಕಡೆ ಆಗಿ ಇತ್ತು. ಧರ್ಮ ಸಂರಕ್ಷನಾಗಿ ರಾಮನಿದ್ದ ಅಧರ್ಮ ಪೋಷಕನಾಗಿ ರಾವಣನಿದ್ದ. ಆ ಕಾಲದಲ್ಲಿ ಜನರಿಗೆ ತಮ್ಮ ಶತ್ರುವಿನ ಕುರಿತಾಗಿ ಸ್ಪಷ್ಟ ಅರಿವಿತ್ತು.
ಮೂರನೇಯದ್ದು ದ್ವಾಪರಯುಗ: ಇಲ್ಲಿಯೂ ಧರ್ಮ ಅಧರ್ಮಗಳು ಇತ್ತು. ಒಂದೇ ಕುಟುಂಬದಲ್ಲಿ ಅಣ್ಣ ತಮ್ಮಂದಿರಲ್ಲೇ ಅತ್ಯಂತ ನೇರವಾಗಿ ಕಂಡುಬಂದಿತ್ತು. ಆಗಲೂ ಜನರಿಗೆ ತಮ್ಮ ಶತ್ರುವಿನ ಕುರಿತಾದ ಜ್ಞಾನ ಇತ್ತು.
ಈ ಮೇಲಿನ ಎರಡು ಯುಗಗಳಲ್ಲಿ ಅಸುರರು ದುಷ್ಟರು ನಾಸ್ತಿಕರು ಎಂಬ ಪಂಗಡಗಳು ತಮ್ಮ ಪ್ರಭಾವನ್ನು ಸಾಕಷ್ಟು ಜನರ ಮೇಲೆ ಹೇರಿದರೂ ಕೊನೆಗೆ ಧರ್ಮವೇ ಅರಳಿ ಬಂತು ಎಂಬುದನ್ನು ನಾವು ಓದಿ ತಿಳಿದಿದ್ದೇವೆ. ಸಾತ್ವಿಕನಿಗೆ ಒಳ್ಳೆಯದಾಗುತ್ತದೆ. ರಜೋಗುಣವುಳ್ಳವನಿಗೆ ಶ್ರೇಯಸ್ಸಿಲ್ಲ. ತಮೋಗುಣದವನು ಅವಸಾನವನ್ನು ಹೊಂದುವುದಲ್ಲದೇ ತನ್ನವರ ನಾಶಕ್ಕೂ ಕಾರಣನಾಗುವನು ಎಂಬ ಸ್ಥಿತಿಯನ್ನು ಆಧಾರ ಸಹಿತವಾಗಿ ನಾವು ಓದಿದ್ದೇವೆ ಮತ್ತು ತಿಳಿದಿದ್ದೇವೆ ಅಲ್ಲವೇ?
ಈಗ ನಾಲ್ಕನೇ ಯುಗ ಕಲಿಯುಗದ ಸ್ಥಿತಿ ನೋಡೋಣ. ಇಲ್ಲಿ ಧರ್ಮ ಅಧರ್ಮಗಳು ಎಲ್ಲಿವೇ? ನಮ್ಮ ಶತ್ರುವಿನ ಅರಿವು ನಮಗಿದೆಯೇ? ಎಂದು ಕೇಳಿದಾಗ ಧರ್ಮ ಅಧರ್ಮಗಳ ಕುರಿತಾಗಿ ನಾವು ಹೇಳುತ್ತೇವೆ ಹೊರತು ಎಲ್ಲಿದೆ ಅನ್ನುವುದಕ್ಕೆ ಉತ್ತರ ಕೊಡಲು ತಡವರಿಸುತ್ತೇವೆ ಅಲ್ಲವೇ?
ಕಲಿಯುಗದಲ್ಲಿ ಯಾವ ಅಸುರರೂ ಇಲ್ಲ. ಧರ್ಮವೂ ಅಧರ್ಮವೂ ಎರಡೂ ನಮ್ಮಲ್ಲೇ ಇದೆ. ಮೂರೂ ಗುಣಗಳೇನಿವೆ ಅದು ಸದಾ ನಮ್ಮಲ್ಲೇ ಇದೆ. ರಜೋಗುಣ ತಮೋಗುಣಗಳಿಗೆ ಆಶ್ರಯವಾಗಿರುವ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳನ್ನು ಒಡಗೂಡಿ ಬದುಕುವವನೇ ಅಧರ್ಮಿ. ಈ ಆರು ವರ್ಗವೇನಿದೆ ಅದುವೇ ಕಲಿಯುಗದ ಅಸುರ.
ಈ ಆರು ವೈರಿಗಳ ದಾಸನಾಗಿ ಕಾರ್ಯ ಮಾಡುವವನು ಹೆಚ್ಚಾಗಿ ತನಗೇ ತಿಳಿಯದಂತೆ ಅಧರ್ಮವನ್ನು ಆಚರಿಸುತ್ತಾನೆ. ಹಾಗದರೇ ನಮ್ಮ ನಿಜವಾದ ಶತ್ರು ಯಾರು ಎಂಬ ಪ್ರಶ್ನೆಗುತ್ತರ ಗೀತೆಯಲ್ಲಿ ಭಗವಂತ ಹೇಳಿದಂತೆ ನಮಗೆ ನಾವೇ ಮಿತ್ರರು ಮತ್ತು ಶತ್ರುಗಳು. ಅದು ಹೇಗೆ ಎನ್ನಬಹುದು ನೀವು.
ಇದನ್ನೂ ಓದಿ:Spirituality: ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಆಧ್ಯಾತ್ಮಿಕತೆ ಉತ್ತಮ
ನಮ್ಮ ಅಂತರಂಗ ಆಲಸ್ಯದಿಂದಲೋ ಅಥವಾ ಇನ್ನೀತರ ಕಾರಣಗಳಿಂದ ತನ್ನ ಉದ್ಧಾರಕ್ಕೆ ಕಾರಣವಾದ ಕಾರ್ಯ ಮಾಡಲಿಲ್ಲ ಎಂದಾದರೆ ಅದು ನಮ್ಮ ಅವನತಿಗೆ ಕಾರಣವಾಗುತ್ತದೆ. ಅವನತಿ ಅಂದರೆ ಸೋಲು. ಸೋಲು ಬಯಸುವವನು ಯಾವತ್ತೂ ಮಿತ್ರನಾಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಶತ್ರು ಯಾವುತ್ತೂ ನಾವೇ ಆಗಿರುತ್ತೇವೆ. ಇದನ್ನರಿತು ಸಾಗಿದರೆ ಗೆಲುವು ಸಾಧ್ಯ. ಇಲ್ಲದೇ ಇದ್ದಲ್ಲಿ ಓದದೇ ಅನುತ್ತೀರಣವಾದ ವಿದ್ಯಾರ್ಥಿಯ ಸ್ಥಿತಿ ನಮ್ಮದು ಎಂಬುದು ಸದಾ ನೆನಪಿರಲಿ.
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತರು