ರಾಮ ನವಮಿ (Ram Navami) ಹಬ್ಬ ದೇಶದಲ್ಲಿ ಬಹಳ ಪ್ರಸಿದ್ಧವಾಗಿದ್ದು, ಭಗವಾನ್ ರಾಮನ ಜನ್ಮದಿನದ ನೆನಪಿನಲ್ಲಿ ಭಕ್ತರು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್ (Hindu Calender) ಪ್ರಕಾರ ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ದಿನವನ್ನು ರಾಮ ನವಮಿಯನ್ನಾಗಿ ಆಚರಿಸಲಾಗುತ್ತದೆ. ಅಂದರೆ ಚೈತ್ರ ನವರಾತ್ರಿಯ 9ನೇ ದಿನ ರಾಮ ನವಮಿ ಆಚರಿಸಲ್ಪಡುತ್ತದೆ. ಪಾಶ್ಚಾತ್ಯ ಕ್ಯಾಲೆಂಡರ್ ಪ್ರಕಾರ ಇದು ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುತ್ತದೆ. ಈ ವರ್ಷ ಮಾರ್ಚ್ 22ರಂದು ಚೈತ್ರ ನವರಾತ್ರಿ ಆರಂಭವಾಗಿದೆ. ದುರ್ಗೆಯ, ಶಕ್ತಿ ದೇವತೆಯ ಆರಾಧನೆ ದೇಶದ ಹಲವೆಡೆ ನಡೆಯುತ್ತಿದೆ. ಹಬ್ಬವು ಮಾರ್ಚ್ 30, ಗುರುವಾರದಂದು ಕೊನೆಗೊಳ್ಳಲಿದ್ದು, ಅದೇ ದಿನ ರಾಮನವಮಿ ಆಚರಣೆ ನಡೆಯಲಿದೆ.
ಭಗವಾನ್ ರಾಮ ಅಯೋಧ್ಯೆಯಲ್ಲಿ ಜನಿಸಿದ ದಿನವೇ ರಾಮ ನವಮಿ. ಇದರ ನೆನೆಪಿಗಾಗಿ ಭಕ್ತರು ಪ್ರತಿ ವರ್ಷ ರಾಮ ನವಮಿ ಆಚರಣೆ ಆರಂಭಿಸಿದರು. ಕೆಲವು ಇತಿಹಾಸಕಾರರು ರಾಮನು ಭಗವಾನ್ ವಿಷ್ಣುವಿನ ಅವತಾರ ಎಂದು ನಂಬುತ್ತಾರೆ, ಅವರನ್ನು ರಕ್ಷಣೆಯ ದೇವರು ಎಂದು ಕರೆಯಲಾಗುತ್ತದೆ. ವಿಷ್ಣುವು ಹಿಂದೂ ಧರ್ಮದ ಪ್ರಮುಖ ಮೂವರು ದೇವರುಗಳಾದ ತ್ರಿಮೂರ್ತಿಗಳಲ್ಲಿ ಒಬ್ಬ. ಈ ಪೈಕಿ ಬ್ರಹ್ಮ ಸೃಷ್ಟಿಕರ್ತ, ವಿಷ್ಣು ರಕ್ಷಕ ಮತ್ತು ಶಿವ ಲಯ ಕಾರಕ ಎಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಯುಗಯುಗಾಂತರಗಳಿಂದ ಆಚರಿಸಲಾಗಿದ್ದರೂ, ಯಾವಾಗ ಆರಂಭಿಸಲಾಗಿತ್ತು ಎಂಬ ನಿಖರವಾದ ವರ್ಷವನ್ನು ಲೆಕ್ಕಹಾಕಲು ಯಾವುದೇ ಬಲವಾದ ಪುರಾವೆಗಳಿಲ್ಲ. ಆದಾಗ್ಯೂ, ವೈದಿಕ ಕಾಲಗಣನೆಯ ಪ್ರಕಾರ ಭಗವಾನ್ ರಾಮನು ಸುಮಾರು ಒಂದು ಮಿಲಿಯನ್ ವರ್ಷಗಳ ಹಿಂದೆ ತ್ರೇತಾಯುಗದಲ್ಲಿ ಜನಿಸಿದ್ದ ಎಂದು ಭಾವಿಸಲಾಗಿದೆ.
ಪ್ರತಿ ವರ್ಷ, ಗ್ರಹಗಳು ಮತ್ತು ನಕ್ಷತ್ರಗಳ ಚಲನೆಗೆ ಅನುಗುಣವಾಗಿ ರಾಮ ನವಮಿಯ ದಿನಾಂಕ ಮತ್ತು ಸಮಯ ಬದಲಾಗುತ್ತದೆ. ಈ ವರ್ಷ, ಪವಿತ್ರವಾದ ರಾಮ ನವಮಿಯ ಹಬ್ಬವನ್ನು ಮಾರ್ಚ್ 30ರಂದು, ಅಂದರೆ ಗುರುವಾರ ಆಚರಿಸಲಾಗುತ್ತದೆ. ರಾಮ ನವಮಿಯ ಮುಹೂರ್ತ ಅಂದು ಬೆಳಗ್ಗೆ 11.11ಕ್ಕೆ ಆರಂಭವಾಗಿ 1.40ಕ್ಕೆ ಕೊನೆಗೊಳ್ಳಲಿದೆ.
ಮಾರ್ಚ್ 29ರ ರಾತ್ರಿ 9.07ರಿಂದ ನವಮಿ ತಿಥಿ ಆರಂಭವಾಗಲಿದ್ದು, ಮಾರ್ಚ್ 30ರ ರಾತ್ರಿ 11.30ಕ್ಕೆ ಕೊನೆಗೊಳ್ಳಲಿದೆ.
ರಾಮ ನವಮಿಯ ಶುಭ ಸಂದರ್ಭದಲ್ಲಿ ಭಕ್ತರು ಸಾಮಾನ್ಯವಾಗಿ ಭಗವಾನ್ ರಾಮನ ಜೀವನ ಮತ್ತು ಜೀವಿತಾವಧಿಯಲ್ಲಿ ಮಾಡಿದ ಸಾಧನೆಗಳ ಕಥೆಯನ್ನು ಪಠಿಸುತ್ತಾರೆ ಮತ್ತು ದೇವಾಲಯಗಳು ಮತ್ತು ಮನೆಗಳಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾರೆ. ರಾಕ್ಷಸ ರಾವಣನನ್ನು ಕೊಲ್ಲುವ ಮೂಲಕ ರಾಮನು ಕೆಟ್ಟ ಶಕ್ತಿಯ ವಿರುದ್ಧ ಒಳಿತು ವಿಜಯ ಸಾಧಿಸುವಂತೆ ಮಾಡಿದ್ದರ ಸಂದೇಶ ಹರಡುವ ನಿಟ್ಟಿನಲ್ಲಿಯೂ ಈ ಹಬ್ಬವನ್ನು ಮಹತ್ವದ್ದೆಂದು ಪರಿಗಣಿಸಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 am, Tue, 28 March 23