
ಕಳೆದ ವರ್ಷ ಜಿನೀವಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21ನ್ನು ಪ್ರಥಮ ‘ವಿಶ್ವ ಧ್ಯಾನ ದಿನ’ವಾಗಿ ಘೋಷಿಸಿತು. ಈ ಐತಿಹಾಸಿಕ ದಿನದಂದೇ, ಜಗತ್ತಿನಾದ್ಯಂತ 8.5 ಮಿಲಿಯನ್‌ಕ್ಕಿಂತ ಹೆಚ್ಚು ಜನರು ಒಂದೇ ಸಮಯದಲ್ಲಿ ಧ್ಯಾನದಲ್ಲಿ ಭಾಗವಹಿಸಿದ್ದರು. ಇದು ಇತಿಹಾಸದಲ್ಲೇ ಅತಿದೊಡ್ಡ ಸಾಮೂಹಿಕ ಧ್ಯಾನ ಸಮಾಗಮವಾಗಿ ದಾಖಲೆ ನಿರ್ಮಿಸಿತು.
ಈ ಸಂದರ್ಭದಲ್ಲಿ ಜಾಗತಿಕ ಆಧ್ಯಾತ್ಮಿಕ ನಾಯಕ ಹಾಗೂ ಮಾನವತಾವಾದಿ ಗುರುದೇವ್ ಶ್ರೀ ಶ್ರೀ ರವಿ ಶಂಕರರು, ಬುಧವಾರ ಜಿನೀವಾದಲ್ಲಿನ ವಿಶ್ವಸಂಸ್ಥೆಯ ಸಭಾಂಗಣದಿಂದ ಮಾತನಾಡುತ್ತಾ, ಅಶಾಂತಿ, ಸಂಘರ್ಷ ಮತ್ತು ಒತ್ತಡದಿಂದ ಬಳಲುತ್ತಿರುವ ಇಂದಿನ ಜಗತ್ತಿಗೆ ಧ್ಯಾನ ಅತ್ಯವಶ್ಯಕ ಎಂದು ಹೇಳಿದರು. ಧ್ಯಾನವನ್ನು ಜೀವನದ ಅವಿಭಾಜ್ಯ ಭಾಗವನ್ನಾಗಿ ಮಾಡಿಕೊಳ್ಳುವಂತೆ ಅವರು ವಿಶ್ವದ ಜನತೆಗೆ ಕರೆ ನೀಡಿದರು.
ಅದರಂತೆ ಈ ಡಿಸೆಂಬರ್ 19ರಂದು ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮುಖ್ಯ ಭಾಷಣ ನೀಡಲಿದ್ದು, ಡಿಸೆಂಬರ್ 21ರಂದು ವರ್ಲ್ಡ್ ಟ್ರೇಡ್ ಸೆಂಟರ್‌ನಿಂದ (ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ) ಜಾಗತಿಕ ಧ್ಯಾನವನ್ನು ನಡೆಸಲಿದ್ದಾರೆ.
ಧ್ಯಾನವು ಕೇವಲ ವೈಯಕ್ತಿಕ ಸುಖ–ಶಾಂತಿಗಷ್ಟೇ ಸೀಮಿತವಲ್ಲ, ದಣಿವು, ಒತ್ತಡ, ಘರ್ಷಣೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಂಕಟಗಳಿಂದ ಬಳಲುತ್ತಿರುವ ಸಂಪೂರ್ಣ ಸಮಾಜಕ್ಕೂ ಧ್ಯಾನ ಅತ್ಯಂತ ಪ್ರಸ್ತುತವಾಗಿದೆ ಎಂದು ಎಂದು ಗುರುದೇವ ತಮ್ಮ ಭಾಷಣದಲ್ಲಿ ಹೇಳಿದರು.
‘ಜಾಗತಿಕ ಶಾಂತಿಗಾಗಿ ವಿಶ್ವವು ಧ್ಯಾನ ಮಾಡುತ್ತದೆ’ ಎಂಬ ಶೀರ್ಷಿಕೆಯಡಿ, ಎರಡನೇ ವಿಶ್ವ ಧ್ಯಾನ ದಿನದ ಶುಭಾರಂಭ ಕಾರ್ಯಕ್ರಮ ಜಿನೀವಾದಲ್ಲಿನ ಯುಎನ್ ಕಚೇರಿಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜಿನೀವಾದಲ್ಲಿನ ಭಾರತದ ಶಾಶ್ವತ ಮಿಷನ್ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿತ್ತು.
ಎಲ್ಲಾ ವಯೋಮಾನದವರಲ್ಲೂ ಮತ್ತು ಎಲ್ಲಾ ದೇಶಗಳಲ್ಲೂ ಆತಂಕ, ದೈಹಿಕ–ಮಾನಸಿಕ ದಣಿವು ಹಾಗೂ ಏಕಾಂಗಿತನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಬಾಹ್ಯ ಪರಿಹಾರಗಳಷ್ಟೇ ಸಾಕಾಗುವುದಿಲ್ಲ; ಮಾನವ ಮನಸ್ಸಿನ ಸ್ಥಿರತೆಯೂ ಅಗತ್ಯ ಎಂಬ ಸಂದೇಶವನ್ನು ಗುರುದೇವರು ನೀಡಿದರು.
“ಧ್ಯಾನ ಇಂದು ಜಗತ್ತಿಗೆ ಐಶಾರಾಮಿ ವಿಷಯವಲ್ಲ. ಜನಸಂಖ್ಯೆಯ ಮೂರನೇ ಒಂದು ಭಾಗ ಒಂಟಿತನದಿಂದ ಬಳಲುತ್ತಿದ್ದು, ಅರ್ಧದಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಮನಸ್ಸನ್ನು ಶಾಂತಗೊಳಿಸುವ ಮಾರ್ಗ ನಮಗೆ ಬೇಕಾಗಿದೆ. ಇಲ್ಲಿ ಧ್ಯಾನವೇ ಪ್ರಮುಖ ಪಾತ್ರ ವಹಿಸುತ್ತದೆ,” ಎಂದು ಅವರು ಹೇಳಿದರು.
ಧ್ಯಾನ ಹಾಗೂ ಪ್ರಜ್ಞಾಪೂರ್ವಕ ಸ್ಥಿತಿ (ಮೈಂಡ್‌ಫುಲ್‌ನೆಸ್) ಕುರಿತು ಮಾತನಾಡಿದ ಗುರುದೇವರು,
“ಮೈಂಡ್‌ಫುಲ್‌ನೆಸ್ ದಾರಿಯಾದರೆ, ಧ್ಯಾನವು ಮನೆ ಇದ್ದಂತೆ. ಧ್ಯಾನ ನಿಮ್ಮನ್ನು ನಿಮ್ಮ ಅಂತರಾಳಕ್ಕೆ ಕೊಂಡೊಯ್ದು ಆಳವಾದ ನೆಮ್ಮದಿಯನ್ನು ನೀಡುತ್ತದೆ. ಕಂಪ್ಯೂಟರ್‌ನಲ್ಲಿ ಅನಾವಶ್ಯಕ ಕಡತಗಳನ್ನು ಡಿಲೀಟ್ ಮಾಡುವಂತೆ, ಧ್ಯಾನ ಮನಸ್ಸಿನಲ್ಲಿರುವ ಅನಗತ್ಯ ಒತ್ತಡವನ್ನು ದೂರಮಾಡುತ್ತದೆ,” ಎಂದು ವಿವರಿಸಿದರು.
“ನಾವೆಲ್ಲರೂ ಚೈತನ್ಯಮಯವಾಗಿದ್ದೇವೆ. ನಮ್ಮ ಚೈತನ್ಯ ಶಕ್ತಿ ಸಾಮರಸ್ಯಪೂರ್ಣವಾಗಿದೆಯೇ ಎಂಬುದನ್ನು ಗಮನಿಸಬೇಕು. ಇದಕ್ಕೆ ಉತ್ತರವೇ ಧ್ಯಾನ. ಅದು ನಮ್ಮ ಸುತ್ತಲೂ ಏಕತೆ ಮತ್ತು ಶುದ್ಧತೆಯನ್ನು ತರುತ್ತದೆ,” ಎಂದು ಗುರುದೇವರು ಹೇಳಿದರು.
ಕಳೆದ ವರ್ಷ ‘ಗುರುದೇವರೊಂದಿಗೆ ವಿಶ್ವ ಧ್ಯಾನ ಮಾಡುತ್ತದೆ’ ಕಾರ್ಯಕ್ರಮದಲ್ಲಿ 8.5 ಮಿಲಿಯನ್‌ಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದು, ಆರು ಗಿನ್ನಿಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿತು. ಮನೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಸಂಘರ್ಷಪೀಡಿತ ಪ್ರದೇಶಗಳಲ್ಲೂ ಸೇರಿದಂತೆ ವಿವಿಧ ಸಮಾಜ–ಸಮುದಾಯಗಳಿಂದ ಜನರು ಇದರಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪ ದೇವಾಲಯದ 18 ಪವಿತ್ರ ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಜಿನೀವಾದಲ್ಲಿನ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಸನ್ಮಾನ್ಯ ಅರಿಂದಮ್ ಬಾಗ್ಚಿ ಮಾತನಾಡುತ್ತಾ,
“ಸಂಕೀರ್ಣ ಸಂಘರ್ಷಗಳಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ, ಧ್ಯಾನವು ಕೇವಲ ವೈಯಕ್ತಿಕ ಅಭ್ಯಾಸವಲ್ಲ; ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಶಕ್ತಿಶಾಲಿ ಸಾಧನವಾಗಿದೆ,” ಎಂದರು.
ಒಮ್ಮೆ ಪಾಶ್ಚಾತ್ಯ ಜಗತ್ತಿನಲ್ಲಿ ವಿಚಿತ್ರವೆಂದು ಪರಿಗಣಿಸಲಾಗುತ್ತಿದ್ದ ಧ್ಯಾನವನ್ನು, ಗುರುದೇವ್ ಶ್ರೀ ಶ್ರೀ ರವಿ ಶಂಕರರು ಜಾಗತಿಕ ಚಳವಳಿಯಾಗಿ ರೂಪಿಸಿದ್ದಾರೆ. ಶಿಕ್ಷಣ, ಸಂಘರ್ಷ ಪರಿಹಾರ, ರೈತ ಕಲ್ಯಾಣ, ಕಾರಾಗೃಹ ಪುನರ್ವಸತಿ, ಯುವ ನಾಯಕತ್ವ ಮತ್ತು ಕಾರ್ಪೊರೇಟ್ ಒತ್ತಡ ನಿರ್ವಹಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರು 182ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಶಾಂತ ಮತ್ತು ಅನಿಶ್ಚಿತತೆಯಿಂದ ತುಂಬಿರುವ ಇಂದಿನ ಕಾಲಘಟ್ಟದಲ್ಲಿ, ಶಾಂತಿಯ ನಿಜವಾದ ಕೀಲಿಕೈ ಮಾನವ ಮನಸ್ಸಿನಲ್ಲೇ ಇದೆ ಎಂಬುದನ್ನು ಜಗತ್ತಿಗೆ ನೆನಪಿಸುವ ಕ್ಷಣ ಇದಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Thu, 18 December 25