ಎಡೆಯೂರು ಸಿದ್ಧಲಿಂಗೇಶ್ವರ ಕ್ಷೇತ್ರ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ. ಎಡೆಯೂರು ರಾಷ್ಟ್ರೀಯ (ಬೆಂಗಳೂರು ಮತ್ತು ಹಾಸನ ನಡುವಿನ) ಹೆದ್ದಾರಿ 48ರಲ್ಲಿ ಕುಣಿಗಲ್ ಪಟ್ಟಣದಿಂದ 19 ಕಿ.ಮೀ. ದೂರದಲ್ಲಿದೆ. ತೋಟದ ಸಿದ್ದಲಿಂಗೇಶ್ವರರು ಇಲ್ಲಿ ಜೀವಂತ ಸಮಾಧಿಯಾಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಸಿದ್ಧಲಿಂಗೇಶ್ವರರ ಗದ್ದುಗೆ ದರ್ಶನಕ್ಕೆ ಬರುತ್ತಾರೆ. ಸಿದ್ಧಲಿಂಗೇಶ್ವರರು (15ನೇ ಶತಮಾನದಲ್ಲಿ) ಈಗಿನ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆ ದಂಪತಿಯ ಮಗನಾಗಿ ಜನಿಸಿದರು.
ಅವರು ತಮ್ಮ ಎಂಟನೇ ವಯಸ್ಸಿನಲ್ಲಿಯೇ ಗೋಸಲ ಮಠದ ಗುಬ್ಬಿ ಚನ್ನಬಸವೇಶ್ವರ ಶಿವಯೋಗಿಗಳಿಂದ ದೀಕ್ಷೆ ಪಡೆದರು. ನಂತರ 701 ವಿರಕ್ತರೊಂದಿಗೆ ಹಿಮಾಲಯ ಪ್ರದೇಶದಲ್ಲಿ ಸಂಚರಿಸಿದರು. ಅಲ್ಲಿಂದ ಬಂದ ನಂತರ ಅವರು ಕಗ್ಗೆರೆ ಬಳಿಯ ತೋಟವೊಂದರಲ್ಲಿ ಕಠಿಣ ತಪಸ್ಸು ಕೈಗೊಂಡರು. ಅವರು ನಾಗಿನಿ ನದಿಯ ಎಡದಂಡೆ ಮೇಲಿರುವ ಎಡೆಯೂರಿನಲ್ಲಿ ಸಜೀವ ಸಮಾಧಿಯಾದರು.
ಸಿದ್ದಲಿಂಗೇಶ್ವರ ಗದ್ದುಗೆ ಇರುವ ದ್ರಾವಿಡ ಶೈಲಿಯ ದೇವಸ್ಥಾನ ಕ್ಷೇತ್ರದ ಮುಖ್ಯ ಆಕರ್ಷಣೆ. ಚೆನ್ನವೀರಪ್ಪ ಒಡೆಯರು ಎಂಬ ದಾನಿ ಈ ದೇವಸ್ಥಾನ ಕಟ್ಟಿಸಿದರು ಎಂಬ ಮಾಹಿತಿ ಮಹಾದ್ವಾರದ ಬದಿಯಲ್ಲಿರುವ ಕ್ರಿ. ಶ. 1580ರ ಶಾಸನದಲ್ಲಿದೆ. ದೇವಸ್ಥಾನದ ಭಿತ್ತಿಗಳಲ್ಲಿ ಸಿದ್ಧಲಿಂಗ ಯತಿಗಳ ಜೀವನ ವೃತ್ತಾಂತ ಮತ್ತು ಪವಾಡಗಳನ್ನು ಸಾರುವ ಶಿಲ್ಪ ಚಿತ್ರಗಳಿವೆ. ಕಳೆದ ಶತಮಾನದ 60ರ ದಶಕದಲ್ಲಿ ದೇವಸ್ಥಾನಕ್ಕೆ ರಾಜಗೋಪುರ ನಿರ್ಮಿಸಲಾಯಿತು. ಶಿಥಿಲಗೊಂಡಿದ್ದ ದೇವಸ್ಥಾನದ ಸುತ್ತಲಿನ ಪೌಳಿ ತೆರವುಗೊಳಿಸಿ ಹೊಸದಾಗಿ ನಿರ್ಮಿಸಲಾಗುತ್ತಿದೆ.
ಗದ್ದುಗೆಯಲ್ಲಿ ಸಿದ್ಧಲಿಂಗೇಶ್ವರರ ಬೆಳ್ಳಿ ಮುಖವಾಡವಿದೆ. ವಿಶೇಷ ದಿನಗಳಲ್ಲಿ ಮತ್ತು ಅಮಾವಾಸ್ಯೆ ಸಂದರ್ಭದ ಪೂಜೆಗೆ ಬೆಳ್ಳಿ ಮುಖವಾಡ ಇರಿಸಲಾಗುತ್ತದೆ. ದೇವಸ್ಥಾನದಲ್ಲಿ ನಿತ್ಯ ಮುಂಜಾನೆ 4.30, ಬೆಳಗ್ಗೆ 11 ಹಾಗೂ ಸಂಜೆ 6 ಗಂಟೆಗೆ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿ ಅಮಾವಾಸ್ಯೆಯಂದು ಬೆಳಿಗ್ಗೆ 10 ಗಂಟೆಗೆ ಮಹಾನ್ಯಾಸ ಪೂರ್ವಕ ಶತ ರುದ್ರಾಭಿಷೇಕ ಸೇವೆ ನಡೆಯುತ್ತದೆ.
ಯುಗಾದಿಯಂದು ಎಡೆಯೂರು ಜಾತ್ರೆ ಆರಂಭವಾಗುತ್ತದೆ. ಹಬ್ಬದ ನಂತರದ 7ನೇ ದಿನ ಮಹಾ ರಥೋತ್ಸವ ನಡೆಯುತ್ತದೆ. ಶಿವರಾತ್ರಿ, ಶ್ರಾವಣ, ಕಾರ್ತಿಕ ಮಾಸದ ಅಮಾವಾಸ್ಯೆಯಲ್ಲಿ ವಿಶೇಷ ಪೂಜೆ, ಕಡೆ ಕಾರ್ತಿಕ ಸೋಮವಾರ ಲಕ್ಷದೀಪೋತ್ಸವ ನಡೆಯುತ್ತದೆ. ಲಕ್ಷ ದೀಪೋತ್ಸವಕ್ಕೆ ಗದಗ ಜಿಲ್ಲೆಯಿಂದ 500 ಮಂದಿ ಭಕ್ತರು ಪಾದಯಾತ್ರೆಯಲ್ಲಿ ಪ್ರತಿ ವರ್ಷ ಬರುತ್ತಾರೆ. ಇದು 25 ವರ್ಷಗಳಿಂದ ನಡೆದುಕೊಂಡು ಬಂದಿದೆ.
ನಿತ್ಯ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಭಕ್ತರಿಗೆ ಉಚಿತ ದಾಸೋಹ ವ್ಯವಸ್ಥೆ ಇದೆ. ಸರಳ ವಿವಾಹಗಳಿಗೂ ಇಲ್ಲಿ ಅವಕಾಶವಿದೆ. ಅದಕ್ಕಾಗಿ ಕಲ್ಯಾಣ ಮಂಟಪವಿದೆ. ಅದಕ್ಕೆ ಮುಂಚಿತವಾಗಿಯೇ ಹೆಸರು ನೊಂದಾಯಿಸಿಕೊಳ್ಳಬೇಕು. ಭಕ್ತರ ವಾಸ್ತವ್ಯಕ್ಕೆ ಕೊಠಡಿಗಳ ಸೌಲಭ್ಯವೂ ಇದೆ.
ಕುಣಿಗಲ್-ಬೆಳ್ಳೂರು ಕ್ರಾಸ್ ಮಧ್ಯೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮುಖ್ಯರಸ್ತೆಯಿಂದ ಒಳ ರಸ್ತೆಯಲ್ಲಿ ಅರ್ಧ ಕಿ.ಮೀ. ಹೋದರೆ ಎಡೆಯೂರು ಸಿಗುತ್ತದೆ. ಬೆಂಗಳೂರು, ತುಮಕೂರು, ಕುಣಿಗಲ್, ಬೆಳ್ಳೂರು ಕ್ರಾಸ್‌ನಿಂದ ಬಸ್‌ಗಳ ಸೌಲಭ್ಯವಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಮಿನಿ ವಾಹನಗಳ ಸೌಲಭ್ಯವಿದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವವರು, ವಾಸ್ತವ್ಯಕ್ಕೆ ಕೊಠಡಿ ಮುಂಗಡ ಕಾಯ್ದಿರಿಸಲು ದೂರವಾಣಿ ಮೂಲಕ ಸಂಪರ್ಕಿಸಬಹುದು.