
ಅಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಸದಸ್ಯರು ಕೊಂಚ ವಿಚಲಿತರಾಗಬಹುದಾದ ಸಂಗತಿಯೊಂದು ಮೆಲ್ಬರ್ನ್ನಲ್ಲಿ ವರದಿಯಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಿದ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ (ಎಮ್ಸಿಸಿ) ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಡಿಸೆಂಬರ್ 27ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ (ಎಮ್ಸಿಜಿ) ಭಾರತ ಮತ್ತು ಆಸ್ಟ್ರೇಲಿಯಾಗಳ ನಡುವೆ ನಡೆದ ಎರಡನೇ ಟೆಸ್ಟ್ನ ಎರಡನೇ ದಿನದಾಟವನ್ನು ನೋಡಿದವರೆಲ್ಲ ಕೊವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದೆ.
‘ಡಿಸೆಂಬರ್ 27ರ ರವಿವಾರದಂದು ಎಮ್ಸಿಜಿ ಜೋನ್ 5ರ ದಿ ಗ್ರೇಟರ್ ಸದರ್ನ್ ಸ್ಟ್ಯಾಂಡ್ನಲ್ಲಿ ಮಧ್ಯಾಹ್ನ 12.30ರಿಂದ 3.30ರ ನಡುವಿನ ಸಮಯದಲ್ಲಿ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಟೆಸ್ಟ್ ಪಂದ್ಯದ ಎರಡನೇ ದಿನದಾಟವನ್ನು ವೀಕ್ಷಿಸಿದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಆ ಸಮಯದಲ್ಲಿ ಪಂದ್ಯ ವೀಕ್ಷಿಸಿದ ವ್ಯಕ್ತಿಯೊಬ್ಬನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆ ಭಾಗದಲ್ಲಿ ಕುಳಿತು ಪಂದ್ಯ ನೋಡಿದವರು ಕೂಡಲೆ ಟೆಸ್ಟ್ ಮಾಡಿಸಿಕೊಳ್ಳಬೇಕು ಮತ್ತು ರಿಸಲ್ಟ್ ನೆಗೆಟಿವ್ ಎಂದು ಖಾತ್ರಿಯಾಗುವವರೆಗೆ ತಮ್ಮನ್ನು ಐಸೊಲೇಟ್ ಮಾಡಿಕೊಳ್ಳಬೇಕು’ ಎಂದು ಎಮ್ಸಿಸಿಯ ಅಧಿಕೃತ ಹೇಳಿಕೆ ತಿಳಿಸುತ್ತದೆ.
ಟೀಮ್ ಇಂಡಿಯಾದ ಸದಸ್ಯರು ಸಮಾಧಾನಪಟ್ಟುಕೊಳ್ಳಬಹುದಾದ ಅಂಶವೇನೆಂದರೆ ಅವರು ಮೆಲ್ಬರ್ನ್ನಿಂದ ಸಿಡ್ನಿ ತಲುಪಿದ ಮೇಲೆ ಟೆಸ್ಟ್ ಮಾಡಲಾಗಿದ್ದು ಅವರೆಲ್ಲರ ರಿಸಲ್ಟ್ ನೆಗೆಟಿವ್ ಬಂದಿದೆ.
ಎಮ್ಸಿಜಿಯಲ್ಲಿ ಸ್ಟೀವ್ ಸ್ಮಿತ್ ವಿಕೆಟ್ ಪಡೆದು ಸಂಭ್ರಮಿಸುತ್ತಿರುವ ರವಿಚಂದ್ರನ್ ಅಶ್ವಿನ್
ಕೊವಿಡ್-19 ಪಿಡುಗಿನ ಕರಾಳ ಛಾಯೆ ಆಸ್ಟ್ರೇಲಿಯಾವನ್ನು ಬೆಂಬಿಡದೆ ಕಾಡುತ್ತಿರುವಂತಿದೆ. ಅಲ್ಲಿನ ಸರ್ಕಾರಗಳು ಸಾಕಷ್ಟು ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಂಡರೂ ಅಲ್ಲಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತಲೆದೋರುತ್ತಿವೆ. ಎಮ್ಸಿಜಿಯನ್ನು ಪ್ರತಿದಿನದ ಆಟ ಕೊನೆಗೊಂಡ ನಂತರ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿತ್ತು ಎಂದು ಎಮ್ಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಸೋಂಕಿತ ವ್ಯಕ್ತಿ ಪಂದ್ಯ ನೋಡುವಾಗ ಆತನಿಗೆ ಅದರ ಅರಿವಿರಲಿಲ್ಲ. ವಿಷಯ ನಮ್ಮ ಗಮನಕ್ಕೆ ಬಂದ ನಂತರ ನಾವು ಇಡೀ ಸ್ಟೇಡಿಯಂನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿದ್ದೇವೆ ಮತ್ತ ಪ್ರತಿನಿತ್ಯ ಅ ಕೆಲಸ ಜಾರಿಯಲ್ಲಿದೆ. ಪಂದ್ಯ ನಡೆಯುವಾಗಲೂ ಸ್ಟೇಡಿಯಂನ್ನು ದಿನದಾಟ ಕೊನೆಗೊಂಡ ನಂತರ ಸ್ಯಾನಿಟೈಸ್ ಮಾಡಲಾಗುತಿತ್ತು. ಮೈದಾನದ ಸುತ್ತ 275 ಸ್ಯಾನಿಟೈಸ್ ಕೇಂದ್ರಗಳನ್ನು ನಿರ್ಮಿಸಲಾಗಿತ್ತು,’ ಅಂತ ಎಮ್ಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ, ನ್ಯೂ ಸೌತ್ ವೇಲ್ಸ್ ಸರ್ಕಾರವು ಆಸ್ಟ್ರೇಲಿಯಾ ಮತ್ತು ಇಂಡಿಯಾ ನಡುವೆ ಸಿಡ್ನಿಯಲ್ಲಿ ಆರಂಭವಾಗಲಿರುವ ಮೂರನೆ ಟೆಸ್ಟ್ ವೀಕ್ಷಿಸಲು ಎಸ್ಸಿಜಿಗೆ ಬರುವ ಪ್ರತಿಯೊಬ್ಬ ವ್ಯಕ್ತಿ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕೆಂದು ಹೇಳಿದೆ.
India vs Australia Test Series | 3ನೇ ಟೆಸ್ಟ್ಗೆ ಭಾರತ ತಂಡ ಪ್ರಕಟ; ಟೆಸ್ಟ್ ಕ್ರಿಕೆಟ್ಗೆ ಸೈನಿ ಪಾದಾರ್ಪಣೆ
Published On - 5:26 pm, Wed, 6 January 21