ಉಡುಪಿ ಹೋಟೆಲ್ ಮಾಣಿಯೊಬ್ಬರು ಅಂತಾರಾಷ್ಟ್ರೀಯ ಮ್ಯಾರಥಾನ್ ಓಟಗಾರರಾದ ಕಥೆಯಿದು..!

| Updated By: ಪೃಥ್ವಿಶಂಕರ

Updated on: Nov 07, 2022 | 3:08 PM

ಇದುವರೆಗೆ ಶಿವಾನಂದ್ ಶೆಟ್ಟಿಯವರು 3000, 1500 ಮತ್ತು 800 ಮೀಟರ್‌ ಮ್ಯಾರಥಾನ್​ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಹೋಟೆಲ್ ಮಾಣಿಯೊಬ್ಬರು ಅಂತಾರಾಷ್ಟ್ರೀಯ ಮ್ಯಾರಥಾನ್ ಓಟಗಾರರಾದ ಕಥೆಯಿದು..!
Shivanand Shetty
Follow us on

ಅಕ್ಟೋಬರ್ 10 ರಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷಕ್ಕೆ ಚುನಾವಣಾ ಚಿಹ್ನೆಯಾಗಿ ಉರಿಯುತ್ತಿರುವ ಜ್ಯೋತಿಯನ್ನು (ಪಂಜು) ಚುನಾವಣಾ ಆಯೋಗ ನೀಡಿತ್ತು. ಈ ವೇಳೆ ತಮ್ಮ ಪಕ್ಷದ ಹೊಸ ಚಿಹ್ನೆಯ ಪ್ರಚಾರಕ್ಕಿಳಿದಿದ್ದ ಶಿವಸೇನಾ ಕಾರ್ಯಕರ್ತರು ಮರುದಿನ ಸಂಜೆ ದಕ್ಷಿಣ ಮುಂಬೈನ ಮುಂಬಾದೇವಿ ದೇವಸ್ಥಾನದಿಂದ ಮೋಟಾರ್ ಬೈಕ್‌ ರ್ಯಾಲಿ ಆಯೋಜನೆ ಮಾಡಿದ್ದರು. ಈ ವೇಳೆ ಪಕ್ಷದ ಲಾಂಛನವಾದ ಪಂಜನ್ನು ಹಿಡಿದು ವಿಶೇಷ ವ್ಯಕ್ತಿಯೊಬ್ಬರು ಓಡಲಾರಂಭಿಸಿದರು. ಅವರ ಹಿಂದೆ ಪಕ್ಷದ ಕಾರ್ಯಕರ್ತರು ಕೂಡ ತಮ್ಮ ಬೈಕ್​ಗಳಲ್ಲಿ ದೇವಸ್ಥಾನದಿಂದ ಹುತಾತ್ಮ ಚೌಕದವರೆಗೆ ಹಿಂಬಾಲಿಸುತ್ತಾ ಸಾಗಿದರು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಪಂಜನ್ನು ಹಿಡಿದು ಓಡಿದ ಆ ವ್ಯಕ್ತಿ ಯಾವುದೇ ಸೆಲೆಬ್ರಿಟಿ ಅಥವಾ ತರಬೇತಿ ಪಡೆದ ಅಥ್ಲೀಟ್ ಆಗಿರಲಿಲ್ಲ. ಬದಲಿಗೆ ಮುಂಬೈನ ಝವೇರಿ ಬಜಾರ್‌ನಲ್ಲಿರುವ ಉಡುಪಿ ಟು ಮುಂಬೈ ಎಂಬ ಹೆಸರಿನ ಉಡುಪಿ ರೆಸ್ಟೋರೆಂಟ್‌ನಲ್ಲಿ ಮಾಣಿಯಾಗಿ ಕೆಲಸ ಮಾಡುವ ನೌಕರನಾಗಿದ್ದರು. ಅವರ ಹೆಸರು ಶಿವಾನಂದ್ ಶೆಟ್ಟಿ.

450 ಕ್ಕೂ ಹೆಚ್ಚು ಮ್ಯಾರಥಾನ್‌

ಮ್ಯಾರಥಾನ್​ನಲ್ಲಿ ಓಡುವ ಮೂಲಕ ಸಾಕಷ್ಟು ಹೆಸರು ಮಾಡಿರುವ 46 ವರ್ಷ ವಯಸ್ಸಿನ ಶಿವಾನಂದ್ ಶೆಟ್ಟಿ ಇದುವರೆಗೂ 450 ಕ್ಕೂ ಹೆಚ್ಚು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಪೋಡಿಯಂ ಫಿನಿಶ್‌ನೊಂದಿಗೆ 150 ರೇಸ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಕಳೆದ 15 ವರ್ಷಗಳಿಂದ ಮ್ಯಾರಥಾನ್​ನಲ್ಲಿ ಭಾಗವಹಿಸುತ್ತಿರುವ ಶೆಟ್ಟಿ ಅವರು, ತಮಗೆ ಸಿಗುವ 15 ಸಾವಿರ ಸಂಬಳದಲ್ಲಿಯೇ ಕುಟುಂಬ ನಿರ್ವಾಹಣೆಯೊಂದಿಗೆ ತಮ್ಮ ಆಸಕ್ತಿಯನ್ನು ಸಹ ಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ. ಕೇವಲ ಭಾರತ ಮಾತ್ರವಲ್ಲದೆ ಬ್ರೂನಿ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಡೋನೇಷ್ಯಾದಲ್ಲಿ ಆಯೋಜನೆಗೊಂಡಿರುವ ಅಂತರರಾಷ್ಟ್ರೀಯ ಮ್ಯಾರಥಾನ್​ನಲ್ಲೂ ಶೆಟ್ಟಿ ಭಾಗವಹಿಸಿದ್ದಾರೆ.

ಬ್ಯಾಗ್ ಹಿಡಿದುಕೊಂಡೆ ಇಡೀ ಮ್ಯಾರಥಾನ್ ಓಡಿದ್ದರು

ತಮ್ಮ ಮ್ಯಾರಥಾನ್ ಮೇಲಿನ ಆಸಕ್ತಿಯ ಬಗ್ಗೆ ಸವಿವರವಾಗಿ ಶೆಟ್ಟಿಯವರು ವಿವರಿಸಿದ್ದು ಹೀಗೆ. 1993 ರಲ್ಲಿ ಕರ್ನಾಟಕದಿಂದ ಉದ್ಯೋಗ ಹರಸಿ ಮುಂಬೈಗೆ ಬಂದ ಶೆಟ್ಟಿಯವರು ಕೆಲವು ವರ್ಷಗಳ ಕಾಲ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಆ ಬಳಿಕ ಉಡುಪಿ ಟು ಮುಂಬೈ ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕೆ ಸೇರಿದ ಶೆಟ್ಟಿಯವರ ಮ್ಯಾರಥಾನ್ ಪಯಣ ಇಲ್ಲಿಂದಲೇ ಪ್ರಾರಂಭವಾಗಿದ್ದು. ಆ ಬಳಿಕ  ಸ್ಟ್ಯಾಂಡರ್ಡ್ ಚಾರ್ಟರ್ಡ್ ಮ್ಯಾರಥಾನ್ ಬಗ್ಗೆ ತಿಳಿದುಕೊಂಡ ಶೆಟ್ಟಿಯವರಿಗೆ ಅದರಲ್ಲಿ ತಾನೂ ಭಾಗವಹಿಸಬೇಕೆಂಬ ಆಸಕ್ತಿ ಹುಟ್ಟಿತು.

ಮರುದಿನವೇ ಶೆಟ್ಟಿ ಅವರು 300 ರೂ ಪ್ರವೇಶ ಶುಲ್ಕವನ್ನು ಪಾವತಿಸಿ, ಮ್ಯಾರಥಾನ್​ಗೆ ಹೆಸರು ನೊಂದಾಯಿಸಿದ್ದಾರೆ. ಮ್ಯಾರಥಾನ್ ದಿನ ತಡವಾಗಿ ಸ್ಥಳವನ್ನು ತಲುಪಿದ ಶೆಟ್ಟಿಯವರಿಗೆ, ಮ್ಯಾರಥಾನ್ ಆಯೋಜಕರು ಕೈಚೀಲವೊಂದನ್ನು ನೀಡಿದ್ದಾರೆ. ಈ ಮೊದಲು ಮ್ಯಾರಥಾನ್​ನಲ್ಲಿ ಭಾಗಿಯಗಿದ್ದ ಅನುಭವ ಹೊಂದಿರದ ಶೆಟ್ಟಿಯವರಿಗೆ ಇದನ್ನು ಏನು ಮಾಡಬೇಕೆಂದು ತಿಳಿಯದ ಕಾರಣ, ಆ ಬ್ಯಾಗನ್ನು ತನ್ನ ಎಡಗೈಯಲ್ಲಿ ಹಿಡಿದುಕೊಂಡು ಇಡೀ ಮ್ಯಾರಥಾನ್ ಓಡಿದ್ದಾಗಿ ಶೆಟ್ಟಿ ಹೇಳಿಕೊಂಡಿದ್ದಾರೆ.

ಅಲ್ಲದೆ ಈ ಮ್ಯಾರಥಾನ್​ನಲ್ಲಿ ಉದ್ಯಮಿ ಅನಿಲ್ ಅಂಬಾನಿ ಓಡುತ್ತಿರುವುದನ್ನು ಕಂಡ ಶೆಟ್ಟಿಯವರು, ಮರುದಿನ ಪತ್ರಿಕೆಗಳಲ್ಲಿ ಬರುವ ಫೋಟೋಕ್ಕಾಗಿ ಅಂಬಾನಿ ಸಮೀಪದಲ್ಲಿ ಓಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಈ ಸಾಧನೆಯಿಂದ ಹಿಗ್ಗಿದ ಅವರು ಪ್ರತಿ ವರ್ಷ ಹಾಫ್ ಮ್ಯಾರಥಾನ್​ನಲ್ಲಿ ಭಾಗವಹಿಸಲಾರಂಭಿಸಿದರು. ನಂತರ ಟಾಟಾ ಮುಂಬೈ ಮ್ಯಾರಥಾನ್, ದೆಹಲಿ ಹಾಫ್ ಮ್ಯಾರಥಾನ್, ಬೆಂಗಳೂರಿನಲ್ಲಿ TCS ವರ್ಲ್ಡ್ 10K ರನ್ ಮತ್ತು ಟಾಟಾ ಸ್ಟೀಲ್ ಕೋಲ್ಕತ್ತಾ 25K ಮ್ಯಾರಥಾನ್​ಗಳು ಶೆಟ್ಟಿಯವರು ಭಾಗವಹಿಸಿದ್ದಾರೆ.

ಕಳ್ಳರು ನನ್ನ ದೋಚಿದ್ದರು

ತಮ್ಮ ಮ್ಯಾರಥಾನ್ ಪಯಣದಲ್ಲಿ ಎದುರಾಗಿರುವ ಸವಾಲುಗಳ ಬಗ್ಗೆ ಶೆಟ್ಟಿಯವರು ಮಾತನಾಡಿದ್ದು, 2019 ರಲ್ಲಿ ದೆಹಲಿಯಲ್ಲಿ ನಡೆದ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಲು ನಾನು ದೆಹಲಿಗೆ ಪ್ರಯಾಣ ಬೆಳೆಸಿದ್ದೆ. ಈ ವೇಳೆ ಮ್ಯಾರಥಾನ್ ನಡೆಯುವ ಜಾಗಕ್ಕೆ ಹೋಗಲು ನಾನು ಆಟೋ ಏರಿದೆ. ಆಗ ನನ್ನೊಂದಿಗೆ ಮ್ಯಾರಥಾನ್ ಸ್ಪರ್ಧಿಗಳ ಸೋಗಿನಲ್ಲಿ ಕೆಲವರು ಆಟೋ ಹತ್ತಿಕೊಂಡರು. ಸ್ವಲ್ಪ ದೂರದ ನಂತರ, ಅವರಲ್ಲೊಬ್ಬರು ಗಾಳಿಯಲ್ಲಿನ ದುರ್ವಾಸನೆಯನ್ನು ಹೊಗಿಸುಲು ಗಾಳಿಯಲ್ಲಿ ಯಾವುದೋ ದ್ರಾವಣವನ್ನು ಸಿಂಪಡಿಸಿದರು. ಇದರಿಂದ ನಾನು ಕೆಮ್ಮಲು ಪ್ರಾರಂಭಿಸಿದೆ, ಆಗ ಅವರು ನನಗೆ ಕುಡಿಯಲು ನೀರನ್ನು ನೀಡಿದರು.

ಅದನ್ನು ಕುಡಿದ ನಂತರ ನನಗೆ ಏನಾಯಿತು ಎಂಬುದು ಗೊತ್ತಾಗಲಿಲ್ಲ. ಮರುದಿನ ನನಗೆ ಎಚ್ಚರವಾದಾಗ ನಾನು ಫುಟ್​ಪಾತ್​ನಲ್ಲಿದ್ದೆ. ಎದ್ದ ಮೇಲೆಯೇ ತಿಳಿಯಿತು ನಾನು ಕಳೆದ 24 ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಈ ಫುಟ್​ಪಾತ್​ ಮೇಲೆ ಮಲಗಿದ್ದೆ ಎಂಬುದು. ನನ್ನನ್ನು ಪ್ರಜ್ಞಾಹೀನಗೊಳಿಸಿದ ಅವರು, ನನ್ನಲಿದ್ದ 30 ಸಾವಿರ ನಗದು, ಎಟಿಎಂ ಕಾರ್ಡ್, ಫೋನ್ ಮತ್ತು ನಾನು ಹಾಕಿದ್ದ ಶೂಗಳನ್ನು ಬಿಡದೆ ಕದ್ದುಕೊಂಡು ಪರಾರಿಯಾಗಿದ್ದರು. ನನ್ನಲಿದ್ದ ಹಣ ಹೋಯಿತು ಎಂಬುದು ನನಗೆ ಬೇಸರ ತರಲಿಲ್ಲ. ಆದರೆ ಮುಖ್ಯವಾಗಿ ಓಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬುದು ನನಗೆ ನೋವುಂಟು ಮಾಡಿತು ಎಂದು ಶೆಟ್ಟಿ ಹೇಳಿಕೊಂಡಿದ್ದಾರೆ.

ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿ

ಇದುವರೆಗೆ ಶಿವಾನಂದ್ ಶೆಟ್ಟಿಯವರು 3000, 1500 ಮತ್ತು 800 ಮೀಟರ್‌ ಮ್ಯಾರಥಾನ್​ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೋಟೆಲ್‌ನಲ್ಲಿ ದಿನವಿಡೀ ಕೆಲಸ ಮಾಡುವ ಶೆಟ್ಟಿಯವರು, ರಾತ್ರಿಯಿಡೀ ಮೇಲ್ ರೈಲಿನ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣ ಬೆಳೆಸ ಮರುದಿನ ಮ್ಯಾರಥಾನ್ ಓಡುತ್ತಾರೆ. ಅವರಿಗೆ ಇದುವರೆಗೆ ಯಾವುದೇ ಪ್ರಾಯೋಜಕರು ಸಿಕ್ಕಿಲ್ಲ. ಜೊತೆಗೆ ಮ್ಯಾರಥಾನ್​ನಲ್ಲಿ ಭಾಗವಹಿಸಲು ಬೇಕಾಗುವಷ್ಟು ಹಣವೂ ಇಲ್ಲ ಆದರೆ ಅವರಲ್ಲಿ ಸಾಕಷ್ಟು ದೃಢಸಂಕಲ್ಪವಿದೆ ಎಂದು ಮ್ಯಾರಥಾನ್​ನಲ್ಲಿ ಹಲವಾರು ದಾಖಲೆಗಳನ್ನು ಹೊಂದಿರುವ ವೆಸ್ಟರ್ನ್ ರೈಲ್ವೇಸ್ ಉದ್ಯೋಗಿ ಸತ್ಯಭಾಮಾ ರೊನಾಲ್ಡ್ ಹೇಳಿದ್ದಾರೆ.

Published On - 2:59 pm, Mon, 7 November 22