India vs Australia Test Series | 5 ವಿಕೆಟ್​ ಪಡೆದ ಸಿರಾಜ್​ ಅಪರೂಪದ ಸಾಧನೆಗೆ ಅಪ್ಪನ ನೆನಪೇ ಆಸರೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 18, 2021 | 9:42 PM

ಸಾಂಪ್ರದಾಯಿಕ ಕ್ರಿಕೆಟ್ ಅವೃತ್ತಿಗೆ ಕಾಲಿಟ್ಟ ಮೆಲ್ಬರ್ನ್ ​ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್​ ಪಡೆದು ಅತ್ಯುತ್ತಮ ನೋಟ್​ನೊಂದಿಗೆ ಕರೀಯರ್​ ಆರಂಭಿಸಿದ ಸಿರಾಜ್ ಅದಕ್ಕೆ ಮೊದಲು ಅನುಭವಿಸಿದ ಯಾತನೆ ಸಾಮಾನ್ಯವಾದುದಲ್ಲ.

India vs Australia Test Series | 5 ವಿಕೆಟ್​ ಪಡೆದ ಸಿರಾಜ್​ ಅಪರೂಪದ ಸಾಧನೆಗೆ ಅಪ್ಪನ ನೆನಪೇ ಆಸರೆ
ಬ್ರಿಸ್ಬೇನ್​ನಲ್ಲಿ ಇಂದು ಸ್ಮಿತ್​ರನ್ನು ಸಿರಾಜ್ ಔಟ್​ ಮಾಡಿದ ಕ್ಷಣ
Follow us on

ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಮೊದಲಾದ ಪ್ರಮುಖ ಬೌಲರ್​ಗಳು ಗಾಯಗೊಂಡು ಸರಣಿಯಿಂದ ಹೊರನಡೆದ ಕಾರಣ ಟೀಮಿನಲ್ಲಿ ಸ್ಥಾನ ಗಿಟ್ಟಿಸಿದ ಹೈದರಾಬಾದಿನ 26 ವರ್ಷದ ಮೊಹಮ್ಮದ್ ಸಿರಾಜ್, ಕೇವಲ ತನ್ನ ಮೂರನೇ ಟೆಸ್ಟ್​ನಲ್ಲಿ ಇನ್ನಿಂಗ್ಸ್​ ಒಂದರಲ್ಲಿ 5 ವಿಕೆಟ್​ ಪಡೆಯುವ ಸಾಧನೆ ಮಾಡಿದ್ದಾರೆ. ನಿಮಗೆ ಗೊತ್ತಿರಲಿ, ಭಾರತೀಯ ಬೌಲರ್​ನೊಬ್ಬ 17 ವರ್ಷಗಳ ನಂತರ ಬ್ರಿಸ್ಬೇನ್​ನಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾನೆ. ಎಡಗೈ ವೇಗದ ಬೌಲರ್ ಜಹೀರ್​ ಖಾನ್ 2003ರಲ್ಲಿ 93 ರನ್​ಗಳಿಗೆ 5 ವಿಕೆಟ್​ ಪಡೆದಿದ್ದರು.

ಟೆಸ್ಟ್ ಕ್ರಿಕೆಟ್ ಆಡಿರದ ಇಬ್ಬರು (ನಟರಾಜನ್ ಮತ್ತು ಸುಂದರ್) ಮತ್ತು ತನ್ನ ಪಾದಾರ್ಪಣೆಯ ಟೆಸ್ಟ್​ನಲ್ಲಿ ಕೇವಲ 10 ಎಸೆತಗಳನ್ನು ಬೌಲ್ ಮಾಡಿದ ನಂತರ ಗಾಯಗೊಂಡು ನೇಫಥ್ಯಕ್ಕೆ ಸರಿದ ಒಬ್ಬ ಬೌಲರ್ (ಠಾಕೂರ್) ಮತ್ತು ಕೇವಲ ಎರಡನೇ ಟೆಸ್ಟ್​ ಆಡುತ್ತಿರುವ (ನವದೀಪ್ ಸೈನಿ) ಬೌಲರ್​ಗಳ ಪಡೆಯ ನೇತೃತ್ವವಹಿಸಿದ ಸಿರಾಜ್ ಸೋಮವಾರದಂದು ನೀಡಿರುವ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಬಹಳ ದಿನ ಉಳಿಯಲಿದೆ.

ಮೆಲ್ಬರ್ನ್​ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್​ ಪಡೆದು ಅತ್ಯುತ್ತಮ ನೋಟ್​ನೊಂದಿಗೆ ಟೆಸ್ಟ್​ ಬದುಕು ಆರಂಭಿಸಿದ ಸಿರಾಜ್ ಪಾದಾರ್ಪಣೆಗೆ ಮೊದಲು ಅನುಭವಿಸಿದ ಯಾತನೆ ಸಾಮಾನ್ಯವಾದುದಲ್ಲ. ಸರಣಿ ಆರಂಭಕ್ಕೆ ಕೆಲವೇ ದಿನಗಳ ಮೊದಲು ಅವರ ತಂದೆ ತೀರಿಕೊಂಡರು. ಕೊವಿಡ್​-19ಗೆ ಸಂಬಂಧಿಸಿದ ಶಿಷ್ಟಾಚಾರಗಳಿಂದಾಗಿ ಅವರು ಅಪ್ಪನನ್ನು ಕೊನೆಯ ಬಾರಿ ನೋಡಲೂ ಸಾಧ್ಯವಾಗಲಿಲ್ಲ. ಒತ್ತರಿಸಿಕೊಂಡು ಬರುತ್ತಿದ್ದ ದುಃಖದೊಂದಿಗೆ ಅಮ್ಮನೊಂದಿಗೆ ಮಾತಾಡಿದಾಗ ಆಕೆಯೇ ಮಗನಲ್ಲಿ ಧೈರ್ಯ ತುಂಬಿದರು.

ತಂದೆಯೊಂದಿಗೆ ಸಿರಾಜ್

‘ನಾನು ಬಿಳಿಯುಡುಗೆ ತೊಟ್ಟು ಭಾರತಕ್ಕಾಗಿ ಟೆಸ್ಟ್​ ಆಡುವುದನ್ನು ನೋಡುವ ಮಹತ್ವಾಕಾಂಕ್ಷೆ ನನ್ನ ತಂದೆ ಇಟ್ಟುಕೊಂಡಿದ್ದರು. ಆದರೆ ಅವರಿಗದು ಸಾಧ್ಯವಾಗಲಿಲ್ಲ. ನಾವು ಏನೋ ಅಂದುಕೊಳ್ಳುತ್ತೇವೆ, ಆದರೆ ವಿಧಿ ತನ್ನ ಆಟವನ್ನು ನಮ್ಮ ಬದುಕಿನಲ್ಲಿ ಆಡಿಬಿಡುತ್ತದೆ’ ಎಂದು ತಂದೆ ಸಾವಿನ ನಂತರ ಸಿರಾಜ್ ಹೇಳಿದ್ದರು.

ಬ್ರಿಸ್ಬೇನ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 77ರನ್​ಗಳಿಗೆ 1 ವಿಕೆಟ್​ ಪಡೆದಿದ್ದ ಸಿರಾಜ್ ಎರಡನೆ ಇನ್ನಿಂಗ್ಸ್​​ನಲ್ಲಿಂದು, ಮೊದಲ ಇನ್ನಿಂಗ್ಸ್​ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಲಬುಶೇನ್ ಅವರ ವಿಕೆಟ್ ಮೊದಲು ಕಬಳಿಸಿದರು. ಮೂರು ಎಸೆತಗಳ ನಂತರ ಎಡಚ ಮ್ಯಾಥ್ಯೂ ವೇಡ್ ಅವರ ವಿಕೆಟ್ ಕಿತ್ತರು. ಲಂಚ್​ ವಿರಾಮದ ನಂತರ ಅತ್ಯಂತ ಬೆಲೆಬಾಳುವ ವಿಕೆಟ್ ಅವರಿಗೆ ದೊರಕಿತು. 55 ರನ್​ ಗಳಿಸಿ ಸೆಟ್ಲ್​ ಆಗಿದ್ದ ಆಸ್ಸೀಗಳ ರನ್ ಮಶೀನ್ ಸ್ಟೀವ್ ಸ್ಮಿತ್ ಅವರನ್ನು ಹೈದರಾಬಾದಿ ಔಟ್​ ಮಾಡಿದರು. ಆಮೇಲೆ ಕಾಂಗರೂಗಳ ಬಾಲವನ್ನೂ ಕತ್ತರಿಸಿ 5 ವಿಕಟ್​ ಪಡೆಯುವ ಸಾಧನೆ ಮಾಡಿದರು.

ಸಿರಾಜ್ ಮತ್ತು ಜಹೀರ್​ ಅವರನ್ನು ಬಿಟ್ಟರೆ ಕೇವಲ ಮೂವರು ಭಾರತೀಯ ಬೌಲರ್​ಗಳು ಬ್ರಿಸ್ಬೇನ್​ನಲ್ಲಿ ಇನ್ನಿಂಗ್ಸೊಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ. 1968ರಲ್ಲಿ ಕರ್ನಾಟಕದ ಇಎಎಸ್ ಪ್ರಸನ್ನ (6/104), ಬಿಷನ್ ಸಿಂಗ್ ಬೇಡಿ (5/55) ಈ ಸಾಧನೆ ಮಾಡಿದ್ದರು. 1977ರ ಸರಣಿಯಲ್ಲಿ, ಅದೇ ಸರಣಿ ಮತ್ತು ಅದೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಮದನ್ ಲಾಲ್ (5/72) ಐದು ವಿಕೆಟ್​ ಪಡೆದಿದ್ದರು.

ಗಬ್ಬಾ ಮೈದಾನದಲ್ಲಿ 5 ವಿಕೆಟ್ ಪಡೆದ ಪ್ರವಾಸಿ ತಂಡಗಳ ವೇಗದ ಬೌಲರ್​ಗಳಲ್ಲಿ ಇಂಗ್ಲೆಂಡಿನ ಹೆರಾಲ್ಟ್ ಲಾರ್​ವುಡ್​ 1928ರಲ್ಲಿ, ಅದೇ ದೇಶದವರಾದ ಕೆನ್ ಶಟ್ಲ್​ವರ್ತ್ 1970ರಲ್ಲಿ, ಗ್ರಹಾಂ ಡಿಲ್ಲಿ 1986ರಲ್ಲಿ, ಆಲನ್ ಮುಲ್ಲಾಲಿ 1998ರಲ್ಲಿ ಮತ್ತು ಶ್ರೀಲಂಕಾದ ಗ್ರೀಮ್ ಲ್ಯಾಬ್ರಾಯ್ (1998) ಕೂಡ ಈ ಸಾಧನೆ ಮಾಡಿದ್ದರು.

Published On - 7:21 pm, Mon, 18 January 21