ಮುಂಬೈ: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ದಿಲಿಪ್ ವೆಂಗ್ಸರ್ಕಾರ್ ಸ್ಟ್ರೇಟ್ ಡ್ರೈವ್ಗೆ ಖ್ಯಾತರಾಗಿದ್ದಂತೆ ನೇರ ಮಾತಿಗೂ ಹೆಸರಾದವರು. ಜೇಡವನ್ನು ಜೇಡವೆಂದೇ ಕರೆಯಬಲ್ಲ ಛಾತಿಯುಳ್ಳ ಕೆಲವೇ ಮಾಜಿ ಮತ್ತು ಹಾಲಿ ಆಟಗಾರರಲ್ಲಿ ವೆಂಗ್ಸರ್ಕಾರ್ ಕೂಡ ಒಬ್ಬರು. ಸಾಮಾನ್ಯವಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿರುದ್ಧ ಯಾವುದೇ ಟೀಕೆ ಮಾಡುವುದಿಲ್ಲ. ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ ಅವರನ್ನು ಆವರಿಸಿರುತ್ತದೆ. ಈಗ ಐಪಿಎಲ್ನಿಂದಾಗಿ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಸಿಗಲಿಲ್ಲದಿದ್ದರೇನಂತೆ, ಐಪಿಎಲ್ ಇದೆಯಲ್ಲ,ಅದರಲ್ಲಿ ನನ್ನ ಪ್ರತಿಭೆ ತೋರುತ್ತೇನೆ ಅಂತ ಯುವ ಪ್ರತಿಭಾವಂತರು ಅಂದುಕೊಳ್ಳುತ್ತಾರೆ. ಆದರೆ, ತಾವಾಡುತ್ತಿದ್ದ ದಿನಗಳಲ್ಲಿ ಕರ್ನಲ್ ಎಂದು ಕರೆಸಿಕೊಳ್ಳುತ್ತಿದ್ದ ವೆಂಗ್ಸರ್ಕಾರ್ ಬಿಸಿಸಿಐನ ಧೋರಣೆ ಸರಿ ಅನಿಸದಿದ್ದರೆ ಅದನ್ನು ನೇರವಾಗಿ ಹೇಳಿಬಿಡುತ್ತಿದ್ದರು.
ಈಗ ನೋಡಿ, ಇದೇ ಕರ್ನಲ್ ಮಂಡಳಿಯು ಭಾರತದ ಇಂಗ್ಲೆಂಡ್ ಪ್ರವಾಸವನ್ನು ಪ್ಲ್ಯಾನ್ ಮಾಡಿರುವ ರೀತಿಯನ್ನು ಪ್ರಶ್ನಿಸಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳ ಗಮನಕ್ಕೂ ಬಂದಿರಲಿಲ್ಲ. ವಿಷಯ ಏನು ಗೊತ್ತಾ? ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧ 5 ದಿನಗಳ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಪಂದ್ಯವನ್ನು ಜೂನ್ 18ರಿಂದ ಆಡಿದ ನಂತರ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಆದರೆ ಗೊತ್ತಿರದ ಸಂಗತಿಯೇನೆಂದರೆ, ಈ ಡಬ್ಲ್ಯೂಟಿಸಿ ಪಂದ್ಯ ಆಡಿದ ಒಂದೂವರೆ ತಿಂಗಳ ನಂತರ ಎರಡು ರಾಷ್ಟ್ರಗಳ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದೆ! ಡಬ್ಲ್ಯೂಟಿಸಿ ಪಂದ್ಯವು ರಿಸರ್ವ್ ದಿನವನ್ನು ಹಿಡಿದು 23 ಕ್ಕೆ ಕೊನೆಗೊಂಡರೆ ಟೆಸ್ಟ್ ಸರಣಿಯು ಆಗಸ್ಟ್ 4 ರಿಂದ ಆರಂಭವಾಗಲಿದೆ!! ಅಲ್ಲಿಯವರೆಗೆ ಅಂದರೆ 45 ದಿನಗಳ ಕಾಲ ಟೀಮ್ ಇಂಡಿಯಾದ ಸದಸ್ಯರು ಇಂಗ್ಲೆಂಡ್ನಲ್ಲಿ ಸೋಂಬೇರಿಗಳಂತೆ ಅಲೆಯಲಿದ್ದಾರೆ. ಹೌದು, ನೀವು ಓದಿದ್ದು ಅಕ್ಷರಶಃ ನಿಜ.
ವೆಂಗ್ಸರ್ಕಾರ್ ಇದನ್ನೇ ಪ್ರಶ್ನಿಸುತ್ತಿದ್ದಾರೆ.
ಡಬ್ಲ್ಯೂಟಿಸಿ ನಂತರ ಇಂಗ್ಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನಗಳ ವಿರುದ್ಧ ಸೀಮಿತ ಓವರ್ ಪಂದ್ಯಗಳ ಸರಣಿಗಳನ್ನು ಹೋಸ್ಟ್ ಮಾಡಲಿದೆ. ಈ ಸರಣಿಗಳು ಜೂನ್ ಮತ್ತು ಜುಲೈನಲ್ಲಿ ನಡೆಯಲಿವೆ. ಡಬ್ಲ್ಯೂಟಿಸಿ ಮುಗಿದ ಕೂಡಲೇ ಟೆಸ್ಟ್ ಸರಣಿಯನ್ನು ಯಾಕೆ ನಿಗದಿಪಡಿಸಿಲ್ಲ ಎಂದು ವೆಂಗ್ಸರ್ಕಾರ್ ಕೇಳುತ್ತಿದ್ದಾರೆ.
‘ಈ ಒಂದೂವರೆ ತಿಂಗಳ ಅವಧಿಯಲ್ಲಿ ಭಾರತದ ಆಟಗಾರರು ಏನು ಮಾಡಲಿದ್ದಾರೆ? ಈ ಶೆಡ್ಯೂಲಿಂಗ್ ನನ್ನಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ಯಾವ ರೀತಿಯ ಪ್ರವಾಸವನ್ನು ಅವರು (ಬಿಸಿಸಿಐ) ಪ್ಲ್ಯಾನ್ ಮಾಡಿದ್ದಾರೆ? ಒಂದು ಟೆಸ್ಟ್ ಪಂದ್ಯವಾಡಿದ ನಂತರ ಅವರು (ಟೀಮ್ ಇಂಡಿಯಾ ಸದಸ್ಯರು) ಅದ್ಹೇಗೆ ಒಂದೂವರೆ ತಿಂಗಳುಗಳವರೆಗೆ ಯಾವುದೇ ಕ್ರಿಕೆಟ್ ಆಡದಂತಿರುತ್ತಾರೆ?’ ಎಂದು ಸುದ್ದಿ ಮಾಧ್ಯಮವೊಂದರ ಜೊತೆ ಮಾತಾಡುತ್ತಾ ವೆಂಗ್ಸರ್ಕಾರ್ ಕೇಳಿದ್ದಾರೆ.
‘ಒಂದು ಪಕ್ಷ ಶ್ರೀಲಂಕಾ ಮತ್ತು ಪಾಕಿಸ್ತಾನ ಸೀಮಿತ ಓವರ್ಗಳ ಸರಣಿಗಳನ್ನು ಜುಲೈನಲ್ಲಿ ಆಡಲು ಇಂಗ್ಲೆಂಡ್ (ಶ್ರೀಲಂಕಾ ಮತ್ತು ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ತಲಾ 3-ಪಂದ್ಯಗಳ ಒಡಿಐ ಹಾಗೂ ಅಷ್ಟೇ ಸಂಖ್ಯೆಯ ಟಿ20ಪಂದ್ಯಗಳ ಸರಣಿಗಳನ್ನು ಆಡಲಿವೆ) ಪ್ರವಾಸಕ್ಕೆ ಹೋದರೂ ಡಬ್ಲ್ಯೂಟಿಸಿ ಮುಗಿದ ಕೂಡಲೇ ಟೆಸ್ಟ್ ಸರಣಿಯನ್ನು ಯಾಕೆ ಆಯೋಜಿಸುತ್ತಿಲ್ಲ?’ಎಂದು ಕರ್ನಲ್ ಕೇಳಿದ್ದಾರೆ
‘ಡಬ್ಲ್ಯೂಟಿಸಿ ನಂತರ ಟೀಮ್ ಇಂಡಿಯಾ ಸ್ವದೇಶಕ್ಕೆ ಮರಳಲಿದೆಯೇ? ಒಂದೂವರೆ ತಿಂಗಳು ಕಾಲ ಅವರೇನು ಮಾಡಲಿದ್ದಾರೆ? ಈ 45 ದಿನಗಳಲ್ಲಿ ವಿವಿಧ ಕೌಂಟಿಗಳ ವಿರುದ್ಧ ಟೂರ್ ಗೇಮ್ಗಳನ್ನು ಆಯೋಜಿಸಲಾಗಿದೆ ಎಂದು ಭಾವಿಸಿದರೂ ಒಂದೂವರೆ ತಿಂಗಳು ಸುದೀರ್ಘ ಅವಧಿಯಾಗಿದೆ,’ ಎಂದು 1976ರಿಂದ 1992ರವರೆಗೆ ಭಾರತದ ಪರ 116 ಟೆಸ್ಟ್ಗಳನ್ನಾಡಿದ ವೆಂಗ್ಸರ್ಕಾರ್ ಹೇಳಿದ್ದಾರೆ.
‘ಇದು ಹುಚ್ಚುತನದ ಪರಮಾವಧಿ. ಒಂದೂವರೆ ತಿಂಗಳುಗಳವರೆಗೆ ಕ್ರಿಕೆಟ್ ಇಲ್ಲದಿರುವುದು ಆಶ್ಚರ್ಯ ಹುಟ್ಟಿಸುವ ಸಂಗತಿಯಾಗಿದೆ. ಭಾರತ ಅಲ್ಲಿ ಟೆಸ್ಟ್ಗಳನ್ನಾಡಲು ಹೋಗಿದೆ ಅಂತಾದರೆ, ಅದು ಇಂಥ ಅಂತರಗಳಿಲ್ಲದೆ ಸತತವಾಗಿ ಟೆಸ್ಟ್ಗಳನ್ನಾಡಬೇಕು. ಈ ಅಂತರಗಳಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಟಿ20 ಹಾಗೂ ಒಡಿಐ ಪಂದ್ಯಗಳ ಸರಣಿಗಳನ್ನಾಡುವುದು ಮೂರ್ಖತನ ಮತ್ತು ಹಾಸ್ಯಾಸ್ಪದ,’ ಎಂದು ವೆಂಗ್ಸರ್ಕಾರ್ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್: ರೋಹಿತ್ ಜೊತೆ ಯಾರು ಇನ್ನಿಂಗ್ಸ್ ಆರಂಭಿಸಬಹುದು- ಅಗರವಾಲ್ ಅಥವಾ ಗಿಲ್?