ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಭಾರತ ಸಾಧಿಸಿದ ಅಮೋಘ ಗೆಲುವಿನ ಹೆಚ್ಚಿನ ಶ್ರೇಯಸ್ಸೆಲ್ಲ ಶತಕ ಬಾರಿಸಿ ಟೀಮನ್ನು ಅತ್ಯುತ್ತಮವಾಗಿ ಮುನ್ನಡೆಸಿದ ಅಜಿಂಕ್ಯಾ ರಹಾನೆ ಅವರಿಗೆ ಸಲ್ಲುತ್ತಿದೆ. ಅವರ ಸಾಧನೆ ನಿಸ್ಸಂದೇಹವಾಗಿ ಶ್ಲಾಘನೀಯ, ಆದರೆ ಅ ಪಂದ್ಯದಲ್ಲಿ ಭಾರತದ ಬೌಲರ್ಗಳು ಆಸ್ಸೀ ಬ್ಯಾಟ್ಸ್ಮನ್ಗಳ ವಿರುದ್ಧ ಹಿರಿಮೆ ಮೆರೆದು ಅವರನ್ನು ಮಟ್ಟ ಹಾಕಿದ್ದನ್ನು ಮರೆಯುವಂತಿಲ್ಲ.
ಪ್ರಸ್ತುತ ವಿಶ್ವದ ಶ್ರೇಷ್ಠ ಸ್ಪಿನ್ನರ್ ಎಂದು ಗುರುತಿಸಿಕೊಳ್ಳುವ ರವಿಚಂದ್ರನ್ ಅಶ್ವಿನ್ ಮೊದಲೆರಡು ಟೆಸ್ಟ್ಗಳಲ್ಲಿ 10 ವಿಕೆಟ್ಗಳನ್ನು ಪಡೆದು ತಮ್ಮ ರೇಟಿಂಗ್ ಸಮರ್ಥಿಸಿಕೊಂಡಿದ್ದಾರೆ. ಅದಕ್ಕಿಂತಲೂ ಗಮನಾರ್ಹ ಅಂಶವೆಂದರೆ, ಅಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ಮನ್ಗಳಾಗಿರುವ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಅವರನ್ನು ಅಶ್ವಿನ್ ಕಡಿಮೆ ವೈಯಕ್ತಿಕ ಸ್ಕೋರ್ಗಳಿಗೆ ಔಟ್ ಮಾಡುತ್ತಿರುವುದು.
ಪ್ರಸಕ್ತ ಸರಣಿಯಲ್ಲಿ ಸ್ಮಿತ್ ಮತ್ತು ಲಬುಶೆನ್ರನ್ನು ಅಶ್ವಿನ್ ಎರಡೆರಡು ಬಾರಿ ಔಟ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 60ಕ್ಕೂ ಹೆಚ್ಚಿನ ಸರಾಸರಿ ಹೊಂದಿರುವ ಸ್ಮಿತ್ (ಈಗ ಆಡುತ್ತಿರುವ ಆಟಗಾರರ ಪೈಕಿ ಅತಿಹೆಚ್ಚು), ಭಾರತದ ವಿರಾಟ್ ಕೊಹ್ಲಿ, ಇಂಗ್ಲೆಂಡ್ನ ಜೋ ರೂಟ್ ಮತ್ತು ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಅವರೊಂದಿಗೆ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ, ಈಗ ನಡೆಯುತ್ತಿರುವ ಸರಣಿಯಲ್ಲಿ ಅವರು 3 ಇನ್ನಿಂಗ್ಸ್ಗಳಿಂದ 3.33 ಸರಾಸರಿಯಲ್ಲಿ ಕೇವಲ 10 ರನ್ ಗಳಿಸಿದ್ದಾರೆ. ಅಶ್ವಿನ್ರ ಸ್ಪಿನ್ ಅನ್ನು ರೀಡ್ ಮಾಡುವುದು ಅವರಿಗೆ ಸಾಧ್ಯವಾಗುತ್ತಿಲ್ಲ.
ಹಾಗೆಯೇ ಕಳೆದ ವರ್ಷವಷ್ಟೇ ಆಸ್ಟ್ರೇಲಿಯ ಪರ ಆಡಲಾರಂಭಿಸಿದ ಲಬುಶೇನ್ ಟೀಮಿನ ಪ್ರಮುಖ ಬ್ಯಾಟ್ಸ್ಮನ್ ಆಗಿ ಬೆಳೆದಿದ್ದಾರೆ. ಇದುವರೆಗೆ ಆಡಿರುವ 16 ಟೆಸ್ಟ್ಗಳಲ್ಲಿ ಲಬುಶೇನ್ 59ರ ಸರಾಸರಿಯಲ್ಲಿ ರನ್ ಗಳಿಸುತ್ತಿದ್ದಾರೆ ಅಂದರೆ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬಹುದು. ಇವರಿಬ್ಬರನ್ನು ಅಡಿಲೇಡ್ ಮತ್ತು ಮೆಲ್ಬರ್ನ್ ಪಂದ್ಯಗಳಲ್ಲಿ ಎರಡೆರಡು ಔಟ್ ಮಾಡಿರುವ ಅಶ್ವಿನ್ ಅವರಿಂದ ಎದುರಾಗಬಹುದಾಗಿದ್ದ ಅಪಾಯವನ್ನು ಮೊಟಕುಗೊಳಿಸಿದ್ದಾರೆ. ತಮ್ಮ ವಿರುದ್ಧ ಅಶ್ವಿನ್ ಮೇಲುಗೈ ಸಾಧಿಸಿರುವುದನ್ನು ಸ್ಮಿತ್ ಅಂಗೀಕರಿಸಿದ್ದಾರೆ.
ಇವರಿಬ್ಬರನ್ನು ಸುಲಭವಾಗಿ ಔಟ್ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಅಶ್ವಿನ್ ಗುರುವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ನಲ್ಲಿ ಸರಣಿಯಲ್ಲಿ ಮೊದಲ ಬಾರಿಗೆ ಟೀಮಿಗೆ ವಾಪಸ್ಸಾಗುತ್ತಿರುವ ಆರಂಭ ಆಟಗಾರ ಡೇವಿಡ್ ವಾರ್ನರ್ ಅವರನ್ನೂ ಮಟ್ಟ ಹಾಕುವ ಬಗ್ಗೆ ಯೋಚಿಸುತ್ತಿದ್ದಾರೆ. ಕ್ರಿಕೆಟ್ ಅಸ್ಟ್ರೇಲಿಯ ಮೂಲಗಳ ಪ್ರಕಾರ ಅತಿಥೇಯರ ಬ್ಯಾಟಿಂಗ್ ಶಿಥಿಲವೆನಿಸುತ್ತಿರುವುದರಿಂದ ವಾರ್ನರ್ ಶತ ಪ್ರತಿಶತದಷ್ಟು ಫಿಟ್ ಆಗಿರದಿದ್ದರೂ, ಸಿಡ್ನಿಯಲ್ಲಿ ಆಡಿಸಲಾಗುವುದು.
ಆದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ನ ಮಾಜಿ ಸ್ಕಿಪ್ಪರ್ ಅಲಸ್ಟೇರ್ ಕುಕ್ ಮತ್ತು ವಾರ್ನರ್ರನ್ನು ಇದುವರೆಗೆ ತಲಾ 9 ಬಾರಿ ಔಟ್ ಮಾಡಿರುವ ಅಶ್ವಿನ್ಗೆ ಈ ಬಾರಿ ಅನುಭವಿ ಎಡಚನನ್ನು ಬೇಸ್ತು ಬೀಳಿಸುವುದು ಸುಲಭವಾಗಲಿಕ್ಕಿಲ್ಲ. ಯಾಕೆಂದರೆ, 2017 ರಿಂದ ಇಲ್ಲಿಯವರೆಗೆ ಆಡಿರುವ 17 ಇನ್ನಿಂಗ್ಸ್ಗಳಲ್ಲಿ ವಾರ್ನರ್ ಕೇವಲ ಒಮ್ಮೆ ಮಾತ್ರ ಸ್ಪಿನ್ನರ್ಗೆ ಔಟ್ ಆಗಿದ್ದಾರೆ. ಅವರನ್ನು ಔಟ್ ಮಾಡಿರುವ ಕೀರ್ತಿ ಇಂಗ್ಲೆಂಡ್ನ ನಾಯಕ ಜೋ ರೋಟ್ ಅವರಿಗೆ ಸಲ್ಲುತ್ತದೆ. ಉಳಿದ 16 ಬಾರಿ ಅವರು ವೇಗದ ಬೌಲರ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.
ಅಶ್ವಿನ್ ಅವರ ದಾಖಲೆಯನ್ನು ನೋಡುವುದಾದರೆ, ಎಡಗೈ ಅಟಗಾರರನ್ನು ಔಟ್ ಮಾಡುವ ಪರಿಣಿತಿ ಅವರಿಗೆ ಸಿದ್ಧಿಯಾದಂತಿದೆ. ಹಾಗಾಗಿ, ವಾರ್ನರ್ ವಿರುದ್ಧ ಅವರು ಪುನಃ ಮೇಲುಗೈ ಸಾಧಿಸಿದರೆ ಅಚ್ಚರಿ ಪಡಬೇಕಿಲ್ಲ.
India vs Australia Test Series | ಟೀಂ ಇಂಡಿಯಾಗೆ ಮತ್ತೊಂದು ಆಘಾತ, ಸರಣಿಯಿಂದ ಹೊರಗೆ ಕೆ.ಎಲ್.ರಾಹುಲ್
Published On - 7:44 pm, Tue, 5 January 21