ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ಚಾಂಪಿಯನ್​ಗಳಿಗೆ ದಾಖಲೆಯ ಬಹುಮಾನ ಘೋಷಣೆ

|

Updated on: Sep 25, 2024 | 11:00 PM

AICF: . ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ ಎಲ್ಲ ಆಟಗಾರರನ್ನು ಸನ್ಮಾನಿಸಿದ ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್, ಚೆಸ್ ಒಲಿಂಪಿಯಾಡ್‌ನಲ್ಲಿ ವಿಜೇತ ತಂಡಗಳಿಗೆ 3 ಕೋಟಿ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದರು.

ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ಚಾಂಪಿಯನ್​ಗಳಿಗೆ ದಾಖಲೆಯ ಬಹುಮಾನ ಘೋಷಣೆ
ಭಾರತ ಚೆಸ್ ತಂಡ
Follow us on

ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಇತ್ತೀಚೆಗಷ್ಟೇ ನಡೆದಿದ್ದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ತಂಡಕ್ಕೆ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಭರ್ಜರಿ ಬಹುಮಾನ ಘೋಷಣೆ ಮಾಡಿದೆ. ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ ಎಲ್ಲ ಆಟಗಾರರನ್ನು ಸನ್ಮಾನಿಸಿದ ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್, ಚೆಸ್ ಒಲಿಂಪಿಯಾಡ್‌ನಲ್ಲಿ ವಿಜೇತ ತಂಡಗಳಿಗೆ 3 ಕೋಟಿ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು.

ಅದರಂತೆ ವಿಜೇತ ತಂಡದ ಪ್ರತಿಯೊಬ್ಬ ಸದಸ್ಯರಿಗೆ ತಲಾ 25 ಲಕ್ಷ ರೂ ಬಹುಮಾನ ಸಿಕ್ಕರೆ, ಪುರುಷ ಮತ್ತು ಮಹಿಳಾ ತಂಡದ ಕೋಚ್‌ಗಳಾದ ಅಭಿಜಿತ್ ಕುಂಟೆ ಮತ್ತು ಶ್ರೀನಾಥ್ ನಾರಾಯಣ್‌ಗೆ ತಲಾ 15 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಇದಲ್ಲದೇ ಭಾರತ ತಂಡದ ಮುಖ್ಯಸ್ಥ ಗ್ರ್ಯಾಂಡ್ ಮಾಸ್ಟರ್ ದಿವ್ಯೇಂದು ಬರುವಾ ಅವರಿಗೆ 10 ಲಕ್ಷ ರೂ., ಹಾಗೂ ಸಹಾಯಕ ಕೋಚ್‌ಗಳಿಗೆ 7.5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ಚಿನ್ನದ ಹಸಿವು ಕೊನೆಗೊಂಡಿತು- ನಿತಿನ್ ನಾರಂಗ್

ಇನ್ನು ಈಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಎಐಸಿಎಫ್ ಅಧ್ಯಕ್ಷ ನಾರಂಗ್, ‘ಹಂಗೇರಿಯಲ್ಲಿ ಚಿನ್ನದ ಹಸಿವು ಕೊನೆಗೊಂಡಿದೆ, ಆದರೆ ಯಶಸ್ಸಿನ ಆಸೆ ಇನ್ನೂ ಮುಂದುವರೆದಿದೆ. ಮುಕ್ತ ವಿಭಾಗದಲ್ಲಿ ಮೇಲುಗೈ ಸಾಧಿಸಿ ಮಹಿಳೆಯರ ವಿಭಾಗದಲ್ಲಿ ಜಯಗಳಿಸಿದೆವು. ನಮ್ಮ ಆಟಗಾರರು ಚೆಸ್ ಬೋರ್ಡ್‌ನಲ್ಲಿ ಶಾರ್ಪ್ ಶೂಟರ್ ಎಂದು ಸಾಬೀತುಪಡಿಸಿದರು. ವಿಶ್ವನಾಥನ್ ಆನಂದ್ ಬಿತ್ತಿದ ಬೀಜಗಳು ಈಗ ಮರಗಳಾಗಿ ಮಾರ್ಪಟ್ಟಿವೆ ಎಂದರು. ಈ ಸಂದರ್ಭದಲ್ಲಿ ಎಐಸಿಎಫ್ ಪ್ರಧಾನ ಕಾರ್ಯದರ್ಶಿ ದೇವ್ ಎ ಪಟೇಲ್ ಮಾತನಾಡಿ, ಐತಿಹಾಸಿಕ ಡಬಲ್ ಚಿನ್ನದ ಪದಕಗಳು ದೇಶದಲ್ಲಿ ಚೆಸ್ ಕ್ರಾಂತಿಯನ್ನು ತರಲು ಸಹಕಾರಿಯಾಗಲಿವೆ ಎಂದರು.

ಐತಿಹಾಸಿಕ ಸಾಧನೆ

97 ವರ್ಷಗಳ ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ತಂಡ ಚಿನ್ನದ ಪದಕವನ್ನು ಗೆದ್ದ ಸಾಧನೆ ಮಾಡಿದೆ. ಪುರುಷರ ತಂಡ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಸ್ಲೊವೇನಿಯಾ ತಂಡವನ್ನು 3.5- 0.5ರಿಂದ ಸೋಲಿಸಿದರೆ, ಮಹಿಳೆಯರ ತಂಡ ಅದೇ ಅಂತರದಿಂದ ಅಜರ್‌ಬೈಜಾನ್ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಡಿ.ಗುಕೇಶ್, ಅರ್ಜುನ್ ಎರಿಗೇಸಿ, ಆರ್.ಪ್ರಗ್ನಾನಂದ್, ವಿದಿತ್ ಗುಜರಾತಿ ಮತ್ತು ಪಿ.ಹರಿಕೃಷ್ಣ ಅವರಿದ್ದ ಪುರುಷರ ತಂಡ ಟೂರ್ನಿಯುದ್ದಕ್ಕೂ ಅಜೇಯರಾಗಿ ಉಳಿದು ಒಟ್ಟು 22ರಲ್ಲಿ 21 ಅಂಕ ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದಲ್ಲದೆ ಚಿನ್ನದ ಪದಕ ಗೆದ್ದುಕೊಂಡಿತು. ಉಳಿದಂತೆ ಪುರುಷರ ವಿಭಾಗದಲ್ಲಿ ಅಮೆರಿಕ ಬೆಳ್ಳಿ ಹಾಗೂ ಉಜ್ಬೇಕಿಸ್ತಾನ್ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇನ್ನು ಡಿ ಹರಿಕಾ, ಆರ್ ವೈಶಾಲಿ, ದಿವ್ಯಾ ದೇಶಮುಖ್, ವಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್ ದೇವ್ ಅವರಿದ್ದ ಮಹಿಳಾ ತಂಡ 19 ಅಂಕ ಗಳಿಸಿ ಚಿನ್ನದ ಪದಕವನ್ನು ವಶಪಡಿಸಿಕೊಂಡಿತು. ಉಳಿದಂತೆ ಕಜಕಸ್ತಾನಕ್ಕೆ ಬೆಳ್ಳಿ ಪದಕ ಸಿಕ್ಕರೆ ಅಮೆರಿಕಕ್ಕೆ ಕಂಚಿನ ಪದಕ ಲಭಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Wed, 25 September 24