ಮೂರು ತಿಂಗಳ ಹಿಂದೆ ಟೀಮ್ ಇಂಡಿಯಾದ ಐತಿಹಾಸಿಕ ಸಾಧನೆಯ ಖುಷಿಯಲ್ಲಿ, ಉದ್ಯಮಿಯೊಬ್ಬರು ಭಾರಿ ಉಡುಗೊರೆ ನೀಡೋದಾಗಿ ಹೇಳಿ ಸುದ್ದಿಯಾಗಿದ್ರು. ಆದ್ರೀಗ ತಾವಾಡಿದ ಮಾತಿನಂತೆ ಸದ್ದಿಲ್ಲದೇ ಆ ಉಡುಗೊರೆ ನೀಡಿ ಕ್ರಿಕೆಟ್ ಮೇಲೆ ತಮ್ಮ ಪ್ರೀತಿ ಎಂತಹದ್ದು ಅನ್ನೋದನ್ನ ತೋರಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲೇ 2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಲ್ಲದೆಯೂ ಅಜಿಂಕ್ಯಾ ರಹಾನೆ ನಾಯಕತ್ವದ ಯುವಕರ ತಂಡ, ಬಲಿಷ್ಟ ಆಸ್ಟ್ರೇಲಿಯಾವನ್ನು ಬಗ್ಗು ಬಡಿದಿತ್ತು. ಯುವ ಸೈನ್ಯದ ಸಾಧನೆಯನ್ನ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಕೊಂಡಾಡಿದ್ದ.
ಟೀಮ್ ಇಂಡಿಯಾದ ಈ ಸಾಧನೆ ಮಹಿಂದ್ರಾ ಗ್ರುಪ್ ಚೇರ್ಮನ್ ಆನಂದ್ ಮಹಿಂದ್ರಾ ಸಂಭ್ರಮಕ್ಕೆ ಪಾರವೇ ಇಲ್ಲದಂತೆ ಮಾಡಿತ್ತು. ಇದೇ ಖುಷಿಗೆ ಆನಂದ್ ಮಹಿಂದ್ರಾ, ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಟೀಮ್ ಇಂಡಿಯಾ 6 ಯುವ ಆಟಗಾರರಿಗೆ ಥಾರ್ ಎಸ್ಯುವಿ ಕಾರ್ಗಳನ್ನ ಉಡುಗೊರೆ ನೀಡುವದಾಗಿ ತಿಳಿಸಿದ್ರು. ಆದ್ರೀಗ ಆನಂದ್ ಮಹಿಂದ್ರಾ ಟೀಮ್ ಇಂಡಿಯಾ ವೇಗಿ ಟಿ ನಟರಾಜನ್ಗೆ ಥಾರ್ ಎಸ್ಯುವಿ ಕಾರ್ ಅನ್ನ ಉಡುಗೊರೆಯಾಗಿ ನೀಡಿದ್ದಾರೆ. ಎಸ್ಯುವಿ ಕಾರ್ನೊಂದಿಗೆ ಫೋಸ್ ನೀಡಿರುವ ನಟರಾಜನ್, ಆನಂದ್ ಮಹಿಂದ್ರಾಗೆ ಕೃತಜ್ಞತೆಗಳನ್ನ ತಿಳಿಸಿದ್ದಾರೆ. ಅಷ್ಟೇ ಅಲ್ಲ.. ಗಾಬ್ಬಾ ಟೆಸ್ಟ್ ಪಂದ್ಯದಲ್ಲಿ ತಾವು ಧರಿಸಿದ ಟೀಮ್ ಇಂಡಿಯಾ ಜೆರ್ಸಿ ಮೇಲೆ ಸಹಿ ಮಾಡಿ, ಆನಂದ್ ಮಹಿಂದ್ರಾಗೆ ಕಳುಹಿಸಿಕೊಟ್ಟಿದ್ದಾರೆ.
ನಾನು ಕೃತಜ್ಞನಾಗಿದ್ದೇನೆ ಸರ್.
ನಾನು ಸುಂದರವಾಗಿರುವ ಮಹಿಂದ್ರಾ ಥಾರ್ ಕಾರ್ ಅನ್ನು ಓಡಿಸಿದೆ. ನನ್ನ ಪ್ರಯಾಣವನ್ನು ಗುರುತಿಸಿ, ನೀವು ನೀಡಿರುವ ಉಡುಗೊರೆಗೆ ನಾನು ಕೃತಜ್ಞನಾಗಿದ್ದೇನೆ. ಸರ್ ಇದು ನೀವು ಕ್ರಿಕೆಟ್ ಮೇಲಿನ ಪ್ರೀತಿಯಿಂದ ನೀಡಿದ್ದೀರಿ ಎಂದು ನಾನು ನಂಬುತ್ತೇನೆ. ಹೀಗಾಗಿ ನಾನು ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿ ಮೇಲೆ ನನ್ನ ಸಹಿ ಹಾಕಿ ಕಳುಹಿಸಿಕೊಟ್ಟಿದ್ದೇನೆ. ಅರ್ಥಪೂರ್ಣವಾಗಿ ಅಂದುಕೊಳ್ಳುತ್ತೇನೆ.
-ಟಿ. ನಟರಾಜನ್, ಟೀಮ್ ಇಂಡಿಯಾ ವೇಗಿ
ಕಷ್ಟದ ಹಾದಿಯಲ್ಲೇ ಸಾಗಿ ಬಂದ ತಮಿಳುನಾಡಿನ ಟಿ. ನಟರಾಜನ್, ಟೀಮ್ ಇಂಡಿಯಾದಲ್ಲಿ ಗುರುತಿಸಿಕೊಂಡ ಪರಿ ಅದ್ಭುತವಾದದ್ದು. ಆದ್ರೀಗ ಆನಂದ್ ಮಹಿಂದ್ರಾ ನೀಡಿದ ಅದ್ದೂರಿ ಉಡುಗೊರೆ, ನಟರಾಜನ್ನ ಸಂಭ್ರಮಕ್ಕೆ ಪಾರವೇ ಇಲ್ಲದಂತೆ ಮಾಡಿದೆ. ಟಿ ನಟರಾಜನ್ ಜೊತೆಯಲ್ಲೇ ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ಶುಬ್ಮನ್ ಗಿಲ್, ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ಗೂ ಕೂಡ ಆನಂದ್ ಮಹಿಂದ್ರಾ, ಎಸ್ಯುವಿ ಕಾರ್ ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ:ಮಿಂಚಿದ ಚಹಲ್ ಮತ್ತು ನಟರಾಜನ್, ಈ ಶುಭಾರಂಭವನ್ನು ಭಾರತ ಕಾಯ್ದುಕೊಳ್ಳಬೇಕಿದೆ!