IND vs PAK: ಪಾಕಿಸ್ತಾನವನ್ನು ಮಣಿಸಿ ಅಜೇಯ ತಂಡವಾಗಿ ಸೆಮಿಫೈನಲ್‌ಗೇರಿದ ಭಾರತ ಹಾಕಿ ತಂಡ

|

Updated on: Sep 14, 2024 | 3:36 PM

Asian Champions Trophy 2024: ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ತನ್ನ ಚಾಂಪಿಯನ್ ಆಟವನ್ನು ಮುಂದುವರೆಸಿದ ಹರ್ಮನ್​ಪ್ರೀತ್ ನಾಯಕತ್ವದ ಭಾರತ ಹಾಕಿ ತಂಡ, ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಮಣಿಸಿ ಸತತ ಐದನೇ ಜಯ ದಾಖಲಿಸಿತು.

IND vs PAK: ಪಾಕಿಸ್ತಾನವನ್ನು ಮಣಿಸಿ ಅಜೇಯ ತಂಡವಾಗಿ ಸೆಮಿಫೈನಲ್‌ಗೇರಿದ ಭಾರತ ಹಾಕಿ ತಂಡ
ಭಾರತ ಹಾಕಿ ತಂಡ
Follow us on

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ತನ್ನ ಚಾಂಪಿಯನ್ ಆಟವನ್ನು ಮುಂದುವರೆಸಿದ ಹರ್ಮನ್​ಪ್ರೀತ್ ನಾಯಕತ್ವದ ಭಾರತ ಹಾಕಿ ತಂಡ, ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಮಣಿಸಿ ಸತತ ಐದನೇ ಜಯ ದಾಖಲಿಸಿತು. ಇದರೊಂದಿಗೆ ಭಾರತ ಹಾಕಿ ತಂಡ ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಚೀನಾದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿ ಸತತ ಐದನೇ ಗೆಲುವು ಸಾಧಿಸಿತು. ಈ ಟೂರ್ನಿಯಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಪೆನಾಲ್ಟಿ ಕಾರ್ನರ್ ಮೂಲಕ 2 ಗೋಲು ಗಳಿಸಿದ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರೆ, ಆರಂಭದಲ್ಲೇ ಗೋಲು ದಾಖಲಿಸಿ ಭಾರತಕ್ಕೆ ತಿರುಗೇಟು ನೀಡಿದ್ದ ಪಾಕಿಸ್ತಾನ ಅಂತಿಮವಾಗಿ ಪಂದ್ಯವನ್ನು 2-1 ಅಂತರದಿಂದ ಕಳೆದುಕೊಂಡಿತು.

ಆರಂಭದಲ್ಲೇ ಪಾಕ್ ಮೇಲುಗೈ

ಪಂದ್ಯ ಆರಂಭವಾದ ತಕ್ಷಣವೇ ದಾಳಿ ಆರಂಭಿಸಿದ ಪಾಕಿಸ್ತಾನ 7ನೇ ನಿಮಿಷದಲ್ಲಿ ಹನ್ನಾನ್ ಶಾಹಿದ್ ನೆರವಿನಿಂದ ಗೋಲು ಗಳಿಸಿ 1-0 ಮುನ್ನಡೆ ಸಾಧಿಸಿತು. ಆದರೆ, ಭಾರತ ಪುನರಾಗಮನಕ್ಕೆ ತಡ ಮಾಡಲಿಲ್ಲ. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 13ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಪಂದ್ಯವನ್ನು 1-1 ರಲ್ಲಿ ಸಮಬಲಗೊಳಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಪಂದ್ಯದ 19ನೇ ನಿಮಿಷದಲ್ಲಿ ಟೀಂ ಇಂಡಿಯಾಗೆ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಮತ್ತೊಮ್ಮೆ ಯಶಸ್ವಿಯಾದ ಹರ್ಮನ್ ಪ್ರೀತ್ 2-1 ಗೋಲುಗಳಿಂದ ಮುನ್ನಡೆ ಸಾಧಿಸಲು ನೆರವಾದರು.

ಅವಕಾಶ ಕೈಚೆಲ್ಲಿದ ಎರಡೂ ತಂಡಗಳು

ಮೂರನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ 38ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು ಬಾರಿಸುವ ಅವಕಾಶವನ್ನು ಕಳೆದುಕೊಂಡರು. ಇದಾದ ಬಳಿಕವೂ ಭಾರತ ತಂಡಕ್ಕೆ ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಗೋಲು ಬಾರಿಸುವ ಅವಕಾಶಗಳು ಸಿಕ್ಕರೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಪಾಕಿಸ್ತಾನ ತಂಡ ಕೂಡ ಪಂದ್ಯದಲ್ಲಿ ಸಮಬಲ ಸಾಧಿಸಲು ಸಿಕ್ಕ ಹಲವು ಅವಕಾಶಗಳನ್ನು ಕಳೆದುಕೊಂಡಿತು. ಪಂದ್ಯದ ವೇಳೆ ಪಾಕಿಸ್ತಾನದ ಅಬು ಮಹಮೂದ್ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಸ್ಟ್ರೆಚರ್‌ನಲ್ಲಿ ಹೊರಗೆ ಕರೆದೊಯ್ಯಬೇಕಾಯಿತು. ಇದರಿಂದಾಗಿ ಪಾಕಿಸ್ತಾನ ತಂಡಕ್ಕೆ ಭಾರಿ ಹಿನ್ನಡೆಯುಂಟಾಯಿತು.

ಮೂವರಿಗೆ ಹಳದಿ ಕಾರ್ಡ್​

ಭಾರತ ಮತ್ತು ಪಾಕಿಸ್ತಾನ ನಡುವೆ ಸ್ಪರ್ಧೆ ಇದ್ದರೆ ಅಲ್ಲಿ ಜಿದ್ದಾಜಿದ್ದಿನ ಕಾಳಗ ನಡೆಯುವುದು ಖಚಿತ. ಇದೀಗ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಈ ಪಂದ್ಯದಲ್ಲೂ ಅದೇ ನಡೆಯಿತು. ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆಯಿತು. ಆಟಗಾರರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ಹೀಗಾಗಿ ಕಠಿಣ ಕ್ರಮ ಕೈಗೊಂಡ ಅಂಪೈರ್‌ ಮೂವರು ಆಟಗಾರರಿಗೆ ಹಳದಿ ಕಾರ್ಡ್ ನೀಡಿದರು. ಹೀಗಾಗಿ ಪಾಕಿಸ್ತಾನದ ಇಬ್ಬರು ಆಟಗಾರರು ಪಂದ್ಯದಿಂದ ಹೊರಬಿದ್ದರೆ, ಭಾರತದ ಒಬ್ಬ ಆಟಗಾರ ಅಮಾನತು ಶಿಕ್ಷೆ ಅನುಭವಿಸಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Sat, 14 September 24