Breaking: ಏಷ್ಯನ್ ಗೇಮ್ಸ್‌ನಲ್ಲಿ ಜಪಾನ್ ಮಣಿಸಿ ಐತಿಹಾಸಿಕ ಚಿನ್ನ ಗೆದ್ದ ಭಾರತ ಹಾಕಿ ತಂಡ..!

|

Updated on: Oct 06, 2023 | 6:08 PM

Asian Games 2023: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ, ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

Breaking: ಏಷ್ಯನ್ ಗೇಮ್ಸ್‌ನಲ್ಲಿ ಜಪಾನ್ ಮಣಿಸಿ ಐತಿಹಾಸಿಕ ಚಿನ್ನ ಗೆದ್ದ ಭಾರತ ಹಾಕಿ ತಂಡ..!
ಭಾರತ ಹಾಕಿ ತಂಡ
Follow us on

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಭಾರತ ಹಾಕಿ ತಂಡ, ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಭಾರತದ ಪರ ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ಮತ್ತು ರೋಹಿದಾಸ್ ಅಮಿತ್ ಗೋಲು ಗಳಿಸುವ ಮೂಲಕ ಜಪಾನ್‌ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಲ್ಲದೆ ಈ ಗೆಲುವಿನೊಂದಿಗೆ ಭಾರತ ಹಾಕಿ ತಂಡ (Men’s hockey team) 2024ರಲ್ಲಿ ನಡೆಯಲ್ಲಿರುವ ಪ್ಯಾರಿಷ್ ಒಲಿಂಪಿಕ್ಸ್‌ಗೆ (Paris Olympics 2024) ಅರ್ಹತೆಯನ್ನು ಸಹ ಖಚಿತಪಡಿಸಿಕೊಂಡಿದೆ.

ಈ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪೂಲ್ ಎ ಪಂದ್ಯದಲ್ಲಿ ಇದೇ ಜಪಾನ್ ತಂಡವನ್ನು 4-2 ಅಂತರದಿಂದ ಸೋಲಿಸಿದ್ದ ಭಾರತ, ಇದೀಗ ಫೈನಲ್‌ನಲ್ಲಿಯೂ ಅದೇ ರೀತಿಯ ಆಲ್‌ರೌಂಡರ್ ಪ್ರದರ್ಶನ ನೀಡಿದೆ. ಇನ್ನು ಈ ಪಂದ್ಯದ ಮೊದಲಾರ್ಧದಲ್ಲಿ ಜಪಾನ್ ಅದ್ಭುತ ಹೋರಾಟವನ್ನು ನೀಡಿತು. ಹೀಗಾಗಿ ಭಾರತಕ್ಕೆ ಹೆಚ್ಚು ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ನಿಜವಾದ ಆಟ ಪ್ರದರ್ಶಿಸಿದ ಭಾರತ ಹಾಕಿ ತಂಡ ಬರೋಬ್ಬರಿ ನಾಲ್ಕು ಗೋಲು ಬಾರಿಸುವುದರೊಂದಿಗೆ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.

IND vs BAN: ಏಷ್ಯನ್ ಗೇಮ್ಸ್​ನಲ್ಲಿ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಕ್ರಿಕೆಟ್ ತಂಡ: ಒಂದು ಪದಕ ಖಚಿತ

5-1 ಅಂತರದ ಜಯ

ಮೊದಲ ಕ್ವಾರ್ಟರ್ ಗೋಲುರಹಿತವಾಗಿತ್ತು. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ತಂಡದ ಪರ ಲಲಿತ್ ಮೊದಲು ಗೋಲ್ ದಾಖಲಿಸಿದರು. ಬಳಿಕ ಜಪಾನ್ ತಲೆ ಎತ್ತುವ ಮುನ್ನವೇ ಭಾರತ 4-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಆದರೆ ಅಂತಿಮ ಕ್ವಾರ್ಟರ್ ಆರಂಭದಲ್ಲಿ ಜಪಾನ್ 1 ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ವಿಜಯಲಕ್ಷ್ಮೀ ಭಾರತದ ಪರ ವಾಲಿದ್ದಳು. ಅಂತಿಮವಾಗಿ ಇನ್ನೇನು ಪಂದ್ಯ ಮುಗಿಯುವ ಹಂತದಲ್ಲಿದ್ದಾಗ ಪೆನಾಲ್ಟಿ ಕಾರ್ನರ್ ಪಡೆದ ಭಾರತ ಅದನ್ನೂ ಸಹ ಗೋಲಾಗಿ ಪರಿವರ್ತಿಸಿತು.

ನಾಲ್ಕನೇ ಚಿನ್ನ

1958ರಲ್ಲಿ ಭಾರತ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಚಿನ್ನ ಗೆದ್ದಿತ್ತು. ಆ ಬಳಿಕ ಪದಕಗಳ ಬರ ಎದುರಿಸಿದ್ದ ಭಾರತ ಹಾಕಿ ತಂಡ 2014 ರಲ್ಲಿ ಚಿನ್ನಕ್ಕೆ ಮುತ್ತಿಟ್ಟಿತ್ತು. ಇದೀಗ ಬರೋಬ್ಬರಿ 8 ವರ್ಷಗಳ ನಂತರ ಭಾರತದ ಮಡಿಲಿಗೆ ಮತ್ತೆ ಚಿನ್ನದ ಪದಕ ಬಂದು ಬಂದಿದೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಹಾಕಿ ತಂಡ ನಾಲ್ಕನೇ ಚಿನ್ನವನ್ನು ತನ್ನದಾಗಿಸಿಕೊಂಡಿದೆ. ಹಾಕಿಯಲ್ಲಿ ಭಾರತ ಒಟ್ಟು 15 ಪದಕಗಳನ್ನು ಗೆದ್ದಿದ್ದು, ಇದರಲ್ಲಿ ನಾಲ್ಕು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿವೆ. ಇದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 22 ನೇ ಚಿನ್ನದ ಪದಕವಾಗಿದೆ. ಹಿಂದೊಮ್ಮೆ ಭಾರತ ಹಾಕಿ ತಂಡ ಒಂದರ ಹಿಂದೆ ಒಂದರಂತೆ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿತ್ತು. ಇದೀಗ ಏಷ್ಯನ್ ಗೇಮ್ಸ್​ನಲ್ಲೂ ಅದೇ ಇತಿಹಾಸ ಮರುಕಳಿಸುವ ಎಲ್ಲಾ ಸಾಧ್ಯತೆಗಳಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Fri, 6 October 23