IND vs BAN: ಏಷ್ಯನ್ ಗೇಮ್ಸ್ನಲ್ಲಿ ಫೈನಲ್ಗೆ ಲಗ್ಗೆಯಿಟ್ಟ ಭಾರತ ಕ್ರಿಕೆಟ್ ತಂಡ: ಒಂದು ಪದಕ ಖಚಿತ
Team India enters Asian Games Mens T20I 2023 Final: ಏಷ್ಯನ್ ಗೇಮ್ಸ್ ಪುರುಷರ ಮೊದಲ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಫೈನಲ್ ತಲುಪಿದೆ. ಬ್ಯಾಟಿಂಗ್ - ಬೌಲಿಂಗ್ನಲ್ಲಿ ಮಿಂಚಿದ ಭಾರತ 9 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ಭಾರತ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತ ಪಡಿಸಿಕೊಂಡಿದೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಫೈನಲ್ಗೆ ಪ್ರವೇಶ ಪಡೆದಿದೆ. ಇಂದು ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆದ ಪುರುಷರ ಮೊದಲ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಸೈಫ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಫೈನಲ್ ತಲುಪಿತು. ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿದ ಭಾರತ 9 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ಭಾರತ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತ ಪಡಿಸಿಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರುತುರಾಜ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ 50 ರನ್ಗು ಮೊದಲೇ 5 ವಿಕೆಟ್ ಕಳೆದುಕೊಂಡಿತು. ಮೊಹಮ್ಮದುಲ್ ಹಸನ್ 5, ನಾಯಕ ಸೈಫ್ ಹಸನ್ 1 ರನ್ ಗಳಿಸಿದರೆ ಜಾಕಿರ್ ಹಸನ್ ಸೊನ್ನೆ ಸುತ್ತಿದರು. ಪರ್ವೇಜ್ ಹೊಸೈನ್ ಎಮನ್ 23 ರನ್ಗಳ ಕೊಡುಗೆ ನೀಡಿದರು. ಜೇಕರ್ ಅಲಿ 14 ರನ್ ಗಳಿಸಿದರು. ಉಳಿದ ಬ್ಯಾಟರ್ಗಳೆಲ್ಲ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಬಾಂಗ್ಲಾ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್ಗಳಿಸಿತಷ್ಟೆ. ಭಾರತ ಪರ ಸಾಯಿ ಕಿಶೋರ್ 3 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಮೊದಲ ಓವರ್ನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದ ಜೈಸ್ವಾಲ್ ಈ ಬಾರಿ ಸೊನ್ನೆ ಸುತ್ತಿದರು. ಆದರೆ, ಎರಡನೇ ವಿಕೆಟ್ಗೆ ಜೊತೆಯಾದ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಬೊಂಬಾಟ್ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. 9 ಓವರ್ಗಳಲ್ಲೇ ಭಾರತ 1 ವಿಕೆಟ್ ನಷ್ಟಕ್ಕೆ 97 ರನ್ ಬಾರಿಸಿ ಜಯ ಸಾದಿಸಿತು. ತಿಲಕ್ ಕೇವಲ 26 ಎಸೆತಗಳಲ್ಲಿ 2 ಫೋರ್, 6 ಸಿಕ್ಸರ್ನೊಂದಿಗೆ ಅಜೇಯ 55 ರನ್ ಚಚ್ಚಿದರೆ, ಗಾಯಕ್ವಾಡ್ ಅಜೇಯ 40 ರನ್ ಗಳಿಸಿದರು.
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿತ್ತು. ಆವೇಶ್ ಖಾನ್ ಬದಲು ಶಹ್ಬಾಜ್ ಅಹ್ಮದ್ ಸ್ಥಾನ ಪಡೆದುಕೊಂಡಿದ್ದರು. ಈ ಮೂಲಕ ಶಹ್ಬಾಜ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. 1 ವಿಕೆಟ್ ಕೂಡ ಪಡೆದುಕೊಂಡರು. ಈ ಪಂದ್ಯದಲ್ಲಿ ಸೋತ ಬಾಂಗ್ಲಾದೇಶ ತಂಡ ಸೆಮಿ ಫೈನಲ್-2 ನಲ್ಲಿ ಸೋತ ತಂಡದ ವಿರುದ್ಧ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:18 am, Fri, 6 October 23