2026 ರ ಏಷ್ಯನ್ ಗೇಮ್ಸ್ಗೆ ತೆರೆ; 85 ಪದಕಗಳೊಂದಿಗೆ ಪಯಣ ಮುಗಿಸಿದ ಭಾರತ
20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿತು. 21 ಚಿನ್ನ, 27 ಬೆಳ್ಳಿ, 37 ಕಂಚು ಗೆಲ್ಲುವ ಮೂಲಕ, ಇದು ಭಾರತದ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ. ಕಳೆದ ಆವೃತ್ತಿಗೆ ಹೋಲಿಸಿದರೆ ಪದಕಗಳ ಸಂಖ್ಯೆ ಕಡಿಮೆಯಾಗಿದ್ದರೂ, ಅಥ್ಲೆಟಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳು ಬಂದಿವೆ. 2030ರ ಏಷ್ಯನ್ ಗೇಮ್ಸ್ ದೋಹಾದಲ್ಲಿ ನಡೆಯಲಿದೆ.

ಜಪಾನ್‌ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19, 2026 ರಂದು ಪ್ರಾರಂಭವಾದ 20 ನೇ ಏಷ್ಯನ್ ಕ್ರೀಡಾಕೂಟಕ್ಕೆ ಇಂದು ಅಂದರೆ ಅಕ್ಟೋಬರ್ 4 ರಂದು ಅಧಿಕೃತವಾಗಿ ತೆರೆಬಿದ್ದಿದೆ. ದೋಹಾ 2030 ರ ಏಷ್ಯನ್ ಕ್ರೀಡಾಕೂಟವನ್ನು ಆಯೋಜಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ಜ್ಯೋತಿಯನ್ನು ಕತಾರಿ ನಿಯೋಗಕ್ಕೆ ಹಸ್ತಾಂತರಿಸಲಾಗಿದೆ. ಈ ಕ್ರೀಡಾಕೂಟಗಳಲ್ಲಿ ಭಾರತ ಒಟ್ಟು 85 ಪದಕಗಳನ್ನು ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿತು. ಆದಾಗ್ಯೂ ಕಳೆದ ಆವೃತ್ತಿಗೆ ಹೋಲಿಸಿಕೊಂಡರೆ ಈ ಆವೃತ್ತಿಯಲ್ಲಿ ಭಾರತದ ಪದಕಗಳ ಸಂಖ್ಯೆ ಕಡಿಮೆಯಾಗಿದೆ.
ಭಾರತದ 2ನೇ ಅತ್ಯುತ್ತಮ ಪ್ರದರ್ಶನ
2022 ರಲ್ಲಿ ಹ್ಯಾಂಗ್‌ಝೌನಲ್ಲಿ ನಡೆದ ಹಿಂದಿನ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 107 ಪದಕಗಳನ್ನು ಗೆದ್ದಿತ್ತು. ಆದರೆ ಈ ಬಾರಿ 85 ಪದಕಗಳನ್ನು ಗೆದ್ದಿದ್ದು, ಕಳೆದ ಆವೃತ್ತಿಗೆ ಹೋಲಿಸಿಕೊಂಡರೆ ಒಟ್ಟು 22 ಪದಕಗಳು ಕಡಿಮೆಯಾಗಿವೆ. ಆದಾಗ್ಯೂ ಇದು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಕ್ರೀಡಾಕೂಟಗಳಲ್ಲಿ ಭಾರತ 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚಿನ ಪದಕಗಳನ್ನು ಗೆದ್ದುಕೊಂಡಿತು.
ಚೀನಾ ಅತಿ ಹೆಚ್ಚು ಪದಕಗಳೊಂದಿಗೆ (169 ಚಿನ್ನ, 89 ಬೆಳ್ಳಿ ಮತ್ತು 83 ಕಂಚು) ಮೊದಲ ಸ್ಥಾನದಲ್ಲಿದ್ದರೆ, ಆತಿಥೇಯ ಜಪಾನ್ 269 ಪದಕಗಳೊಂದಿಗೆ (83 ಚಿನ್ನ, 95 ಬೆಳ್ಳಿ, 91 ಕಂಚು) ಎರಡನೇ ಸ್ಥಾನ ಗಳಿಸಿತು. ದಕ್ಷಿಣ ಕೊರಿಯಾ 39 ಚಿನ್ನ, 43 ಬೆಳ್ಳಿ ಮತ್ತು 68 ಕಂಚು ಸೇರಿದಂತೆ ಒಟ್ಟು 150 ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿತು.
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಭಾರತೀಯ ವೈಭವ್ ಸೂರ್ಯವಂಶಿ
ಈ ಕ್ರೀಡೆಗಳಲ್ಲಿ ಭಾರತದ ಪ್ರಾಬಲ್ಯ
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕಗಳು ಅಥ್ಲೆಟಿಕ್ಸ್‌ನಲ್ಲಿ ಬಂದವು. ಅಥ್ಲೆಟಿಕ್ಸ್‌ನಲ್ಲಿ ಭಾರತ ಅತ್ಯಧಿಕ 24 ಪದಕಗಳನ್ನು ಗೆದ್ದುಕೊಂಡಿತು. ಆದಾಗ್ಯೂ 2022 ರ ಆವೃತ್ತಿಗೆ ಹೋಲಿಸಿದರೆ, ಈ ಬಾರಿ ಭಾರತಕ್ಕೆ 5 ಪದಕಗಳು ಕಡಿಮೆ ಸಿಕ್ಕಿವೆ. ಅಂದರೆ 2022 ರಲ್ಲಿ ಭಾರತ 29 ಪದಕಗಳನ್ನು ಗೆದ್ದಿತ್ತು. ಈ ವರ್ಷ ಭಾರತ ಶೂಟಿಂಗ್‌ನಲ್ಲಿ 15 ಪದಕಗಳನ್ನು ಗೆದ್ದರೆ, ಆರ್ಚರಿಯಲ್ಲಿ ಒಂಬತ್ತು, ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ತಲಾ ಆರು ಪದಕಗಳನ್ನು ಗೆದ್ದುಕೊಂಡಿತು. ಭಾರತವು ಸ್ಕ್ವಾಶ್‌ನಲ್ಲಿ ಐದು, ಸೇಲಿಂಗ್‌ನಲ್ಲಿ ಮೂರು ಮತ್ತು ಕ್ರಿಕೆಟ್, ಹಾಕಿ, ಕಬಡ್ಡಿ ಮತ್ತು ಗಾಲ್ಫ್‌ನಂತಹ ಕ್ಷೇತ್ರ ಕ್ರೀಡೆಗಳಲ್ಲಿ ತಲಾ ಎರಡು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Sun, 4 October 26




