ಆತ್ಮವಿಶ್ವಾಸ ಮರಳಿ ಗಿಟ್ಟಿಸಿರುವ ಪಂಜಾಬ್​ಗೆ ಇಂದು ಆತ್ಮವಿಶ್ವಾಸದ ಪ್ರತೀಕವಾಗಿರುವ ಡೆಲ್ಲಿ ಎದುರಾಳಿ

| Updated By: ಸಾಧು ಶ್ರೀನಾಥ್​

Updated on: Oct 20, 2020 | 4:58 PM

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತಿಯ 38ನೇ ಪಂದ್ಯ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಹೆಚ್ಚು ಕಡಿಮೆ ಪ್ಲೇ ಆಫ್ ಹಂತವನ್ನು ತಲುಪಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 7 ಗೆದ್ದು 2ರಲ್ಲಿ ಮಾತ್ರ ಸೋಲುಂಡಿರುವ ಅದು 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ಗೆಲ್ಲಲೇಬೇಕಾದ ಸ್ಥಿತಿಯಲ್ಲಿರುವ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್ ಟೀಮು ಆಡಿರುವ […]

ಆತ್ಮವಿಶ್ವಾಸ ಮರಳಿ ಗಿಟ್ಟಿಸಿರುವ ಪಂಜಾಬ್​ಗೆ ಇಂದು ಆತ್ಮವಿಶ್ವಾಸದ ಪ್ರತೀಕವಾಗಿರುವ ಡೆಲ್ಲಿ ಎದುರಾಳಿ
Follow us on

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತಿಯ 38ನೇ ಪಂದ್ಯ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಹೆಚ್ಚು ಕಡಿಮೆ ಪ್ಲೇ ಆಫ್ ಹಂತವನ್ನು ತಲುಪಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 7 ಗೆದ್ದು 2ರಲ್ಲಿ ಮಾತ್ರ ಸೋಲುಂಡಿರುವ ಅದು 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ಗೆಲ್ಲಲೇಬೇಕಾದ ಸ್ಥಿತಿಯಲ್ಲಿರುವ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್ ಟೀಮು ಆಡಿರುವ 9 ಪಂದ್ಯಗಳಲ್ಲಿ 6ರಲ್ಲ್ಲಿ ಸೋತಿದ್ದು, 3ರಲ್ಲಿ ಜಯಗಳಿಸಿ 6 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

[yop_poll id=”16″]

ಅಂಕಗಳಿಕೆಯಲ್ಲಿ ಬಹಳ ಹಿಂದಿದ್ದರೂ ರವಿವಾರದಂದು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ, ಪಂದ್ಯದ ಎರಡನೇ ಸೂಪರ್ ಒವರ್​ನಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ರಾಹುಲ್ ಪಡೆಯ ಸ್ವರೂಪ, ಕ್ರಿಸ್ ಗೇಲ್​ಗೆ ಆಡುವ ಇಲೆವೆನ್​ನಲ್ಲಿ ಸ್ಥಾನ ಕಲ್ಪಸಿದ ನಂತರ ಬದಲಾಗಿಬಿಟ್ಟಿದೆ. ಗೇಲ್ ಸಹ ತನ್ನನ್ನು ಟೂರ್ನಿಯ ಮೊದಲಾರ್ಧದ ಪಂದ್ಯಗಳಿಗೆ ಕೈಬಿಟ್ಟು ಟೀಮ್ ಮ್ಯಾನೇಜ್ಮೆಂಟ್ ದೊಡ್ಡ ತಪ್ಪು ಮಾಡಿತು ಎನ್ನುವಂತೆ ಆಡುತ್ತಿದ್ದಾರೆ.

ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಸೋತ ಪಂಜಾಬ್ ಈಗಿರುವ ಸ್ಥಿತಿಗೆ ತನ್ನನ್ನು ತಾನು ದೂಷಿಸಿಕೊಳ್ಳಬೇಕು. ಹಾಗೆ ನೋಡಿದರೆ ರಾಹುಲ್, ಮಾಯಾಂಕ್ ಅಗರ್​ವಾಲ್ ಮತ್ತು ಮೊಹಮ್ಮದ್ ಶಮಿ ಮಾತ್ರ ಪರ್ಫಾರ್ಮ್ ಮಾಡುತ್ತಿದ್ದಾರೆ. ನಿಕೊಲಾಸ್​ ಪೂರನ್ ಬ್ಯಾಟ್​ನಿಂದ ರನ್ ಬರುತ್ತಿವೆಯಾದರೂ ಅವರ ಪ್ರದರ್ಶನಗಳಲ್ಲಿ ಸ್ಥಿರತೆಯಿಲ್ಲ. ‘ಬ್ಲಾಕ್-ಹೋಲ್ ಬಸ್ಟರ್’ ಸೂಪರ್ ಓವರನ್ನು ರವಿವಾರದಂದು ಶಮಿ ಬೌಲ್ ಮಾಡದೇ ಹೋಗಿದ್ದರೆ, ಪಂಜಾಬ್ ಸಹ ಚೆನೈ ಸೂಪರ್ ಕಿಂಗ್ಸ್​ನಂತೆ ನಿರ್ಗಮನದ ದ್ವಾರದೆಡೆ ಮುಖಮಾಡಿ ನಿಂತಿರುತಿತ್ತು.

ಪಂಜಾಬ್ ಮತ್ತು ಡೆಲ್ಲಿ ನಡೆದ ಮೊದಲ ಸುತ್ತಿನ ಪಂದ್ಯವೂ ಸೂಪರ್ ಓವರ್​ನಲ್ಲಿ ಕೊನೆಗೊಂಡು, ಡೆಲ್ಲಿ ಜಯಗಳಿಸಿದ್ದು ಓದುಗರಿಗೆ ನೆನಪಿರಬಹುದು. ಆದರೆ 2017ರ ಐಪಿಎಲ್ ಪಂದ್ಯವನ್ನು ಪಂಜಾಬ್ ನೆನಪಿಸಿಕೊಂಡರೆ ಅದರ ಆತ್ಮವಿಶ್ವಾಸ ನಿಶ್ಚಿತವಾಗಿಯೂ ಇಮ್ಮಡಿಗೊಳ್ಳುತ್ತದೆ. ಆ ಪಂದ್ಯದಲ್ಲಿ ಪ್ರೀಟಿ ಜಿಂಟಾಳ ಟೀಮು, ಡೆಲ್ಲಿಯನ್ನು (ಆಗಿನ ಡೆಲ್ಲಿ ಡೇರ್ ಡೆವಿಲ್ಸ್) 10 ವಿಕೆಟ್​ಗಳಿಂದ ಬಗ್ಗು ಬಡಿದಿತ್ತು. ಆಗ ಪಂಜಾಬ್​ಗೆ ಆಡುತ್ತಿದ್ದ ಸಂದೀಪ್ ಶರ್ಮ 20ರನ್​ಗಳಿಗೆ 4 ವಿಕೆಟ್ ಪಡೆದು ಡೆಲ್ಲಿಯ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದಿದ್ದರಿಂದ ಅದು ಕೇವಲ 67ರನ್​ಗಳಿಗೆ ಆಲೌಟ್ ಆಗಿತ್ತು. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಅಯ್ಯರ್​ನ ಟೀಮು ಸರ್ವಶಕ್ತವಾಗಿದೆ, ಅದನ್ನು ಸೋಲಿಸುವುದು ಸುಲಭದ ಮಾತಲ್ಲ. 

ಟೀಮಿನಲ್ಲಿ ಗೇಲ್ ಉಪಸ್ಥಿತಿಯಿಂದಾಗಿ ಬ್ಯಾಟಿಂಗ್ ಪ್ರಬಲವೆನಿಸುತ್ತಿರುವುದು ಸತ್ಯ; ಆದರೆ, ಒಂದು ಪಕ್ಷ ಅವರು ವಿಫಲರಾದರೆ ಮತ್ತೊಮ್ಮೆ ರನ್ ಗಳಿಸುವ ಭಾರವೆಲ್ಲ ರಾಹುಲ್ ಮತ್ತು ಮಾಯಾಂಕ್ ಹೆಗೆಲಿಗೆ ಬೀಳುತ್ತದೆ. ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್ ಸ್ಥಾನದಲ್ಲಿ ಅವಕಾಶ ಗಿಟ್ಟಿಸಿರುವ ಅಜಿಂಕ್ಯಾ ರಹಾನೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಗ್ಲೆನ್ ಮ್ಯಾಕ್ಸ್​ವೆಲ್ ಸತತವಾಗಿ ವಿಫಲರಾಗಿ ನಿರಾಶೆಗೊಳಿಸಿದ್ದಾರೆ. ದೀಪಕ್ ಹೂಡಾರಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದುಕಾಣುತ್ತಿದೆ.

ಬೌಲಿಂಗ್ ವಿಭಾಗದಲ್ಲಿ ಪಂಜಾಬ್ ಸಮಸ್ಯೆಗಳೇನೂ ಇದ್ದಂತಿಲ್ಲ. ಶಮಿಯೊಂದಿಗೆ ಅರ್ಷ್​ದೀಪ್ ಸಿಂಗ್ ಮತ್ತು ಸ್ಪಿನ್ನರ್ ರವಿ ಬಿಷ್ಣೊಯಿ ಉತ್ತಮವಾಗಿ ಬೌಲ್ ಮಾಡುತ್ತಿದ್ದಾರೆ.

ಮತ್ತೊದೆಡೆ, ಡೆಲ್ಲಿ ಟೀಮಿಗೆ ಯಾವ ವಿಭಾಗದಲ್ಲೂ ಸಮಸ್ಯೆಗಳಿಲ್ಲ. ಓಪನರ್ ಶಿಖರ್ ಧವನ್ ಸತತವಾಗಿ ಎರಡು ಅರ್ಧ ಶತಕ ಮತ್ತು ಮತ್ತೊಂದು ಶತಕ ಬಾರಿಸಿ ಅತ್ಯಂತ ಸೂಕ್ತವಾದ ಸಮಯದಲ್ಲಿ ತಮ್ಮ ಸ್ಪರ್ಶ ಕಂಡುಕೊಡಿದ್ದಾರೆ. ಅವರ ಪಾರ್ಟನರ್ ಪೃಥ್ವಿ ಶಾ ಕಳೆದೆರಡು ಪಂದ್ಯಗಳಲ್ಲಿ ಸೊನ್ನೆಗೆ ಔಟಾದರೂ, ಅಯ್ಯರ್ ಚಾಂಪಿಯನ್​ನಂತೆ ಆಡಿ ಬೇರೆಯವರ ವೈಫಲ್ಯವನ್ನು ನೀಗಿಸುತ್ತಿದ್ದಾರೆ.

ಶಿಮ್ರೊನ್ ಹೆಟ್ಮೆಯರ್ ಮೇಲೆ ಡೆಲ್ಲಿ ಟೀಮು ಬಹಳ ನಿರೀಕ್ಷೆಯನ್ನಿಟ್ಟುಕೊಂಡಿದೆ. ಆದರೆ, 2019ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಆಡುವಾಗ ವಿಫಲರಾದಂತೆ ಈ ಸೀಸನ್​ನಲ್ಲೂ ಅವರು ಹೆಚ್ಚಿನ ಸಾಧನೆ ಮಾಡುತ್ತಿಲ್ಲ. ಇಂದು ಸಹ ಹೆಟ್ಮೆಯರ್ ಫೇಲಾದರೆ, ಗಾಯದಿಂದ ಚೇತರಿಸಿಕೊಂಡಿರುವ ರಿಷಬ್ ಪಂತ್ ಅವರಿಗೆ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಡೆಲ್ಲಿ ಟೀಮಿನ ಬೌಲಿಂಗ್ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಕಗಿಸೊ ರಬಾಡ ಮತ್ತು ಌನ್ರಿಖ್ ನೊರ್ಕಿಯ ಅವರಲ್ಲಿ ಟೂರ್ನಿಯ ಅತ್ಯುತ್ತಮ ವೇಗದ ಆಕ್ರಮಣವನ್ನು ಅದು ಹೊಂದಿದೆ. ಇಬ್ಬರೂ 150 ಕಿ. ಮೀ/ಗಂಟೆ ವೇಗದಲ್ಲಿ ಬೌಲ್ ಮಾಡುತ್ತಾರೆ. ಯುವ ಬೌಲರ್ ತುಷಾರ್ ದೇಶಪಾಂಡೆಯ ವೇಗ ಸಹ ಎದುರಾಳಿಗಳನ್ನು ಬೆಚ್ಚಿಸುವಂತಿದೆ. ಆಲ್​ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಡೆಲ್ಲಿಗೆ ಅದ್ಭುತವಾದ ಸಮತೋಲನ ಒದಗಿಸುತ್ತಿದ್ದಾರೆ.

ಹಾಗೆಯೇ, ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್ ತಮ್ಮಿಂದ ನಿರೀಕ್ಷಿಸಿರುವುದನ್ನು ಒದಗಿಸುತ್ತಿದ್ದಾರೆ.

Published On - 4:51 pm, Tue, 20 October 20