ಟೆಸ್ಟ್ ಪಂದ್ಯಗಳಲ್ಲಿ ಬಾಂಗ್ಲಾದೇಶದ ನಾಯಕತ್ವ ನಿಭಾಯಿಸುವ ಮೊಮಿನುಲ್ ಹಕ್ ಕೊವಿಡ್-10 ಸೋಂಕಿಗೊಳಗಾಗಿರುವುದನ್ನು ಆ ದೇಶದ ಕ್ರಿಕೆಟ್ ಸಂಸ್ಥೆ ದೃಢೀಕರಿಸಿದೆ.
ಬಾಂಗ್ಲಾದೇಶ ಪರ 40 ಟೆಸ್ಟ್ಗಳನ್ನಾಡಿರುವ 29 ವರ್ಷ ವಯಸ್ಸಿನ ಹಕ್ ಅವರಲ್ಲಿ ತೀವ್ರವಲ್ಲದ ರೋಗ ಲಕ್ಷಣಗಳು ಕಾಣಿಸಿಕೊಂಡ ನಂತರ ಸೋಮವಾರದಂದು ಟೆಸ್ಟ್ ಮಾಡಿಸಿಕೊಂಡಿದ್ದರು. ಅದರ ರಿಸಲ್ಟ್ ಲಭ್ಯವಾಗಿದ್ದು ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆಯೆಂದು ಬಿಸಿಬಿಯ ಮುಖ್ಯ ವೈದ್ಯ ದೇಬಶೀಷ್ ಇಂದು ಮಾಧ್ಯಮಗಳಿಗೆ ತಿಳಿಸಿದರು.
‘ಮೊಮಿನುಲ್ ಅವರ ಕೊರೊನಾ ಟೆಸ್ಟ್ ಪಾಸಿಟಿವ್ ಬಂದಿದೆ. ಸಮಾಧಾನಕರ ಅಂಶವೆಂದರೆ ಅಷ್ಟೇನೂ ಗಂಭೀರವಲ್ಲದ ಲಕ್ಷಣಗಳು ಅವರಲ್ಲಿ ಗೋಚರಿಸಿವೆ,’ ಎಂದು ದೇಬಶೀಷ್ ಹೇಳಿದರು.
ಸೋಂಕು ತಗುಲಿರುವ ಬಗ್ಗೆ ಖಚಿತವಾದ ನಂತರ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮೊಮಿನ್, ‘ನಿನ್ನೆ ನನಗೆ ಸೋಂಕು ತಗುಲಿರುವುದು ಗೊತ್ತಾದ ನಂತರ ಮನೆಯಲ್ಲಿ ನನ್ನನ್ನು ನಾನು ಪ್ರತ್ಯೇಕಿಸಿಕೊಂಡಿದ್ದೇನೆ. ರೋಗ ಲಕ್ಷಣಗಳು ಮೈಲ್ಡ್ ಅಗಿವೆಯೆಂದು ರಿಪೋರ್ಟ್ನಿಂದ ಗೊತ್ತಾಗಿದೆ. ಜ್ವರದಿಂದ ಬಳಲುತ್ತಿದ್ದೇನೆ, ಇವತ್ತು ಕೂಡ ಮೈ ಬಿಸಿಯಾಗಿದೆ,’ ಎಂದಿದ್ದಾರೆ.
ನವೆಂಬರ್ ಮೂರನೇ ವಾರದಲ್ಲಿ ಆರಂಭವಾಗಲಿರುವ ಬಂಗಬಂಧು ಟಿ20 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಮೊಮಿನ್ ಆಡುವುದು ಅನುಮಾನಾಸ್ಪದ ಎಂದು ಹೇಳಲಾಗುತ್ತಿದೆ.