ಬಿಸಿಸಿಐ ವಾರ್ಷಿಕ ಸಭೆ: ಎರಡು ಹೊಸ ಫ್ರಾಂಚೈಸಿಗಳನ್ನು ಐಪಿಎಲ್​ಗೆ ಸೇರಿಸುವ ಬಗ್ಗೆ ಚರ್ಚೆಯಾಗಲಿದೆ

|

Updated on: Dec 03, 2020 | 6:23 PM

ಇಂಡಿಯನ್ ಪ್ರಿಮೀಯರ್​ ಲೀಗ್​ಗೆ ಎರಡು ಹೊಸ ಫ್ರಾಂಚೈಸಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದು ಐಸಿಸಿ ಮತ್ತು ಎಸಿಸಿಗಳಿಗೆ ಮಂಡಳಿಯ ಪ್ರತಿನಿಧಿಯನ್ನು ನೇಮಕ ಮಾಡುವುದು ಮೊದಲಾದವು ಡಿಸೆಂಬರ್ 24 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ಸಭೆಯಲ್ಲಿ ಚರ್ಚಿಸಲ್ಪಡಲಿರುವ ಪ್ರಮುಖ ವಿಷಯಗಳಾಗಿವೆ

ಬಿಸಿಸಿಐ ವಾರ್ಷಿಕ ಸಭೆ: ಎರಡು ಹೊಸ ಫ್ರಾಂಚೈಸಿಗಳನ್ನು ಐಪಿಎಲ್​ಗೆ ಸೇರಿಸುವ ಬಗ್ಗೆ ಚರ್ಚೆಯಾಗಲಿದೆ
Follow us on

ಜಯ್ ಶಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತನ್ನ ವಾರ್ಷಿಕ ಸಭೆಯನ್ನು ಡಿಸೆಂಬರ್ 24 ರಂದು ನಡೆಸಲು ನಿಶ್ಚಯಿಸಿದ್ದು, ಮೂರು ವಾರಗಳಷ್ಟು ಮುಂಚಿತವಾಗಿಯೇ ತನ್ನ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳಿಗೆ ಸಭೆ ನಡೆಸಲಾಗುವ ದಿನಾಂಕ ಮತ್ತು ಸಭೆಯ ಅಜೆಂಡವನ್ನು ಕಳಿಸಿದೆ. ಮೂಲಗಳ ಪ್ರಕಾರ ಇಂಡಿಯನ್ ಪ್ರಿಮೀಯರ್​ ಲೀಗ್​ಗೆ ಎರಡು ಹೊಸ ಫ್ರಾಂಚೈಸಿಗಳನ್ನು ಸೇರ್ಮಡೆ ಮಾಡಿಕೊಳ್ಳುವುದು, ಬಿಸಿಸಿಐಗೆ ಹೊಸ ಉಪಾಧ್ಯಕ್ಷನ ನೇಮಕ, ರಾಷ್ಟ್ರೀಯ ಆಯ್ಕೆ ಸಮಿತಿಗೆ ಮೂವರ ಸದಸ್ಯರ ನೇಮಕಾತಿ ಮೊದಲಾದವು 23-ಅಂಶಗಳ ಅಜೆಂಡಾದಲ್ಲಿ ಪ್ರಮುಖ ವಿಷಯಗಳಾಗಿವೆ.

ಐಪಿಎಲ್​ನಲ್ಲಿ ಮತ್ತೆರಡು ಫ್ರಾಂಚೈಸಿಗಳನ್ನು ಸೇರಿಸುವುದನ್ನು ಮಂಡಳಿ ಬಹಳ ದಿನಗಳಿಂದ ಯೋಚಿಸುತ್ತಿದೆ. ಓದುಗರಿಗೆ ನೆನಪಿರಬಹುದು, 2011ರ ಐಪಿಎಲ್ ಸೀಸನ್​ನಲ್ಲಿ 11, 2012ರಲ್ಲಿ 9 ಮತ್ತು 2013 ರಲ್ಲಿ 9 ತಂಡಗಳು ಭಾಗವಹಿಸಿದ್ದವು. ಉಳಿದೆಲ್ಲ ಸೀಸನ್​ಗಳಲ್ಲಿ 8 ಟೀಮುಗಳು ಪ್ರಶಸ್ತಿಗಾಗಿ ಸೆಣಸಿವೆ. 2016 ಮತ್ತು 17 ಸೀಸನ್​ನಲ್ಲಿ ಆಡಿದ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್ ಟೀಮಿನ ಮಾಲೀಕರಾಗಿರುವ ಸಂಜೀವ್ ಗೊಯೆಂಕಾ ಅವರು ಪುನಃ ತಮ್ಮ ಟೀಮ್ ರಚಿಸಿ ಐಪಿಎಲ್​ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಹಾಗೆಯೇ ಅದಾನಿ ಗ್ರೂಪ್ ಸಹ ತನ್ನದೊಂದು ಫ್ರಾಂಚೈಸಿಯನ್ನು ಹೊಂದಲು ಇಚ್ಛಿಸಿದೆ. ಅಹ್ಮದಾಬಾದ್ ನಗರದಲ್ಲಿ ನೆಲೆಗೊಳ್ಳುವ ಒಂದು ತಂಡವನ್ನು ಐಪಿಎಲ್​ಗೆ ಸೇರಿಸಿವುದು ಖಚಿತವಾಗಿದೆಯೆಂದು ಮೂಲಗಳಿಂದ ತಿಳಿದುಬಂದಿದೆ.

ವಾರ್ಷಿಕ ಸಭೆಯಲ್ಲಿ ಚರ್ಚಿಸಲ್ಪಡುವ ಇತರ ವಿಷಯಗಳಲ್ಲಿ ಪ್ರಮುಖವಾದ್ದು ಎಂದರೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಏಶಿಯನ್ ಕ್ರಿಕೆಟ್​ ಕೌನ್ಸಿಲ್​ಗೆ (ಎಸಿಸಿ) ಭಾರತೀಯ ಪ್ರತಿನಿಧಿಯನ್ನು ನೇಮಕ ಮಾಡುವುದು. ಬಿಸಿಸಿಐನ ಪ್ರಧಾನ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರನ್ನು ಈ ಹುದ್ದೆಗೆ ನೇಮಕ ಮಾಡುವುದು ಅಂತಿಮಗೊಳಿಸಲಾಗಿದೆಯೆಂದು ಮೂಲಗಳಿಂದ ತಿಳಿದುಬಂದಿದೆ.

ಐಪಿಎಲ್

ಕ್ರಿಕೆಟ್ ಸಮಿತಿ ಮತ್ತು ಸ್ಥಾಯ ಸಮಿತಿಗಳು ಅಜೆಂಡಾದ ಭಾಗವಾಗಿರುವುದರಿಂದ ರಾಷ್ಟ್ರೀಯ ಆಯ್ಕೆ ಸಮಿತಿಗೆ ಅಧ್ಯಕ್ಷ ಮತ್ತು ಅದಕ್ಕೆ ಮೂವರು ಸದಸ್ಯರ ನೇಮಕಾತಿ ಸಭೆಯಲ್ಲಿ ಚರ್ಚೆಯಾಗಲಿವೆ. ಹಾಗೆಯೇ ತಾಂತ್ರಿಕ ಸಮಿತಿ ಮತ್ತು ಅಂಪೈರ್​ಗಳ ಉಪ-ಸಮಿತಿಗಳ ರಚನೆ ಬಗ್ಗೆಯೂ ಚರ್ಚೆಯಾಗಲಿದೆ. ಸಭೆಯಲ್ಲಿ ಭಾರತೀಯ ಕ್ರಿಕೆಟ್​ ಟೀಮಿನ ಮುಂಬರುವ ಸರಣಿಗಳು, ಪ್ರವಾಸ ಮತ್ತು ದೇಶೀಯ ಕ್ರಿಕೆಟ್ ಚಟುವಟಿಕೆಗಳು, ಮುಂದಿನ ವರ್ಷ ಆಯೋಜಿಸಬೇಕಿರುವ ಟಿ20 ವಿಶ್ವಕಪ್ ಮತ್ತು ಲಾಸ್ ಏಂಜೆಲ್ಸ್ ಒಲಂಪಿಕ್ಸ್​ನಲ್ಲಿ ಕ್ರಿಕೆಟ್​ ಅನ್ನು ಸೇರಿಸಬೇಕೆನ್ನುವ ಬಗ್ಗೆಯೂ ಚರ್ಚೆಯಾಗಲಿದೆ.

ಮಂಡಳಿಯ ಆಡಳಿತಾತ್ಮಕ ಆಯಾಮಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಬರಲಿರುವ ವಿಷಯವೆಂದರೆ, ಬಿಸಿಸಿಐ ಉಪಾಧ್ಯಕ್ಷರಾಗಿದ್ದ ಮಹಿಮ್ ವರ್ಮ ಅವರ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇನ್ನೊಬ್ಬರನ್ನು ನೇಮಿಸುವುದನ್ನು ಕುರಿತು. ಈ ಆಯ್ಕೆ ಅವಿರೋಧವಾಗಿ ನಡೆಯಲಿದೆಯೆಂದು ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕುರಿತು ಸಹ ಸಭೆಯಲ್ಲಿ ಚರ್ಚೆಯಾಗಲಿದೆ.