ವ್ಹೈಟ್ವಾಶ್ ಆಗುವುದನ್ನು ತಪ್ಪಿಸಿಕೊಂಡ ಭಾರತ; ಪಾಂಡ್ಯ, ಜಡೇಜಾ ಮತ್ತು ಠಾಕುರ್ ಹೀರೊಗಳು
ಭಾರತ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿದೆ ಮತ್ತು ಕ್ಲೀನ್ ಸ್ವೀಪ್ ಆಗುವುದನ್ನು ತಪ್ಪಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಾವು ವಿಶ್ವದ ಅತ್ಯುತ್ತಮ ಅಲ್ರೌಂಡರ್ಗಳೆನ್ನುವುದನ್ನು ಇಂದು ಸಾಬೀತು ಮಾಡಿದರು.
ಅಸ್ಟ್ರೇಲಿಯಾವನ್ನು ಇಂದು ಮಣಿಸಿಯೇ ತೀರುವ ಛಲದೊಂದಿಗೆ ಟೀಮ್ ಇಂಡಿಯಾ ಇಂದು ಮೈದಾನಕ್ಕಿಳಿದರೂ ಗೆಲುವು ಅಷ್ಟು ಸುಲಭವಾಗಿ ದಕ್ಕಲಿಲ್ಲ. ಅತಿಥೇಯರು ಕೊನೆ ಹಂತದವರೆಗೆ ಹೋರಾಡಿ ಕೇವಲ 13 ರನ್ಗಳಿಂದ ಪಂದ್ಯ ಸೋತರು.
ಟಾಸ್ ಗೆದ್ದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತದ ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿತ್ತು. ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಲ್ ಮತ್ತು ನವದೀಪ್ ಸೈನಿ ಅವರನ್ನು ಡ್ರಾಪ್ ಮಾಡಿ ಶಾರ್ದಲ್ ಠಾಕುರ್, ಶುಭ್ಮನ್ ಗಿಲ್, ಕುಲ್ದೀಪ್ ಯಾದವ್ ಮತ್ತು ಟಿ ನಟರಾಜನ್ ಅವರನ್ನು ಆಡಿಸಲಾಯಿತು. ನಟರಾಜನ್ಗೆ ಇದು ಮೊಟ್ಟಮೊದಲ ಅಂತರರಾಷ್ಟ್ರೀಯ ಪಂದ್ಯ.
ಗಿಲ್ ತಮ್ಮ ಮೇಲಿಟ್ಟಿದ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ. ಅಸಲಿಗೆ ಭಾರತದ ಪರ ರನ್ ಗಳಿಸದವರೆಂದರೆ, ನಾಯಕ ವಿರಾಟ್ ಕೊಹ್ಲಿ, ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ. ಕೊಹ್ಲಿ ತಮ್ಮ ವೈಯಕ್ತಿಕ ಸ್ಕೋರ್ 23 ಆಗಿದ್ದಾಗ ಒಂದು ದಿನದ ಪಂದ್ಯಗಳಲ್ಲಿ 12,000 ರನ್ಗಳನ್ನು ಪೂರೈಸಿದರು. ಕೊಹ್ಲಿ ಕೇವಲ 254 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದು ಹೊಸ ದಾಖಲೆಯಾಗಿದೆ.
ಪಾಂಡ್ಯ ಮತ್ತು ಜಡೇಜಾ ತಾವು ವಿಶ್ವದರ್ಜೆಯ ಆಲ್ರೌಂಡರ್ಗಳೆಂದು ಇಂದು ಸಾಬೀತು ಮಾಡಿದರು. ಕೊಹ್ಲಿ ಔಟಾದಾಗ ಭಾರತ ಒತ್ತಡಲ್ಲಿತ್ತು, ಆಗ ಸ್ಕೋರ್ 153/5. ಆದರೆ ಇವರಿಬ್ಬರು ಮೈದಾನದ ಮಧ್ಯೆದಲ್ಲಿ ಅಭೂತಪೂರ್ವ ಪ್ರಭುದ್ಧತೆ ಪ್ರದರ್ಶಿಸಿ ಟೀಮಿನ ಮೊತ್ತ 300ರ ಗಡಿ ದಾಟುವಂತೆ ಮಾಡಿದರು. ಮೊದಲ ಪಂದ್ಯದಲ್ಲಿ 90 ರನ್ ಗಳಿಸಿದ್ದ ಪಾಂಡ್ಯ ಇಂದು ಸಹ ಶತಕ (ಅಜೇಯ 92 ) ಗಳಿಸುವುದನ್ನು ತಪ್ಪಿಸಿಕೊಂಡರು. ಆದರೆ ಅವರ ಕಾಂಟ್ರಿಬ್ಯೂಷನ್ ಶತಕಕ್ಕಿಂತ ಮಹತ್ವದ್ದಾಗಿತ್ತು. ಜಡೇಜಾ (ಅಜೇಯ 66) ಅವರೊಂದಿಗಿನ ಜೊತೆಯಾಟದಲ್ಲಿ ಪಾಂಡ್ಯ ಅತ್ಯಮೂಲ್ಯ ಮತ್ತು ಪಂದ್ಯದ ಗತಿಯನ್ನೇ ತಿರುಗಿಸಿದ 150ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡರು.
302 ರನ್ಗಳ ಸವಾಲು ಅತಿಥೇಯರಿಗೆ, ಡೇವಿಡ್ ವಾರ್ನರ್ ಅವರ ಅನುಪಸ್ಥಿತಿಯಲ್ಲಿ ಖಂಡಿತವಾಗಿಯೂ ದೊಡ್ಡದಾಗಿತ್ತು. ಅವರ ಸ್ಥಾನದಲ್ಲಿ ಇನ್ನಿಂಗ್ಸ್ ಆರಂಭಿಸಿದ ಮಾರ್ನಸ್ ಲಬುಶೇನ್ ವಿಫಲರಾದರು. ಆದರೆ ಆಸ್ಟ್ರೇಲಿಯಾಗೆ ಆಘಾತ ಎದುರಾಗಿದ್ದು ಇನ್-ಫಾರ್ಮ್ ಆಟಗಾರ ಸ್ಟೀವ್ ಸ್ಮಿತ್ ಔಟಾದಾಗ. ಮೊಸೆಸ್ ಹೆನ್ರಿಕೆ ಮತ್ತು ಕೆಮೆರಾನ್ ಕ್ರೀಸ್ ಮೇಲೆ ಟಿಕಾಯಿಸುವ ಲಕ್ಷಣ ತೋರುತ್ತಿದ್ದಾಗಲೇ ಪೆವಿಲಿಯನ್ಗೆ ಮರಳಿದರು. ಏತನ್ಮಧ್ಯೆ, ಉತ್ತಮವಾಗಿ ಆಡುತ್ತಿದ್ದ ನಾಯಕ ಆರನ್ ಫಿಂಚ್ 75 ರನ್ ಗಳಿಸಿ ಔಟಾದರು.
ಆದರೆ ಭಾರತಕ್ಕೆ ಆಪತ್ತು ಇದ್ದಿದ್ದು ಗ್ಲೆನ್ ಮಾಕ್ಸ್ವೆಲ್ ಮತ್ತು ಅಲೆಕ್ಸ್ ಕೇರಿ ಅವರಿಂದ. ಯಾಕೆಂದರೆ, ಕೇವಲ ಮೂರು ತಿಂಗಳ ಹಿಂದೆ ಇವರಿಬ್ಬರು ಇಂಗ್ಲೆಂಡ್ ವಿರುದ್ಧ ತಮ್ಮ ತಂಡ 73 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದರೂ ಇಬ್ಬರು ಶತಕಗಳನ್ನು ಬಾರಿಸಿದ್ದೂ ಅಲ್ಲದೆ 200ಕ್ಕೂ ಹೆಚ್ಚಿನ ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಟೀಮನ್ನು ಗೆಲ್ಲಿಸಿದ್ದರು. ಇವತ್ತು ಸಹ ಅವರು ಭಾರತಕ್ಕೆ ಘಾತಕರಾಗುವ ಲಕ್ಷಣಗಳು ಕಾಣಿಸುತ್ತಿದ್ದವು. ಆದರೆ ಕೇರಿ ರನೌಟ್ ಆಗುವುದರೊಂದಿಗೆ ಅಪಾಯ ದೂರವಾಯಿತಾದರೂ, ಮಾಕ್ಸ್ವೆಲ್ ಅಕ್ರಮಣಕಾರಿ ಆಟ ಮುಂದುವರಿಸಿದ್ದರು. ಆದರೆ ಬುಮ್ರಾ ಅವರನ್ನು ಬೋಲ್ಡ್ ಮಾಡಿದಾಗ ಪಂದ್ಯ ಸಂಪೂರ್ಣವಾಗಿ ಭಾರತದೆಡೆ ವಾಲಿತು. ಶಾರ್ದುಲ್ ಠಾಕುರ್ 3 ವಿಕೆಟ್ ಪಡೆದು ಅತ್ಯಂತ ಯಶಸ್ವೀ ಬೌಲರ್ ಎನಿಸಿದರೆ, ಬುಮ್ರಾ ಮತ್ತು ನಟರಾಜನ್ ತಲಾ 2 ವಿಕೆಟ್ ಪಡೆದರು.
ಈ ಗೆಲುವು ಭಾರತಕ್ಕೆ ವ್ಹೈಟ್ವಾಶ್ ಆಗುವ ಅಪಖ್ಯಾತಿಯಿಂದ ತಪ್ಪಿಸಿದೆ ಮತ್ತು ಮುಂದಿನ ಪಂದ್ಯಗಳಿಗೆ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.