ಸ್ಕೇಟಿಂಗ್​ನಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ ಕುಂದಾನಗರಿ ಕುವರ ಅಭಿಷೇಕ್ ನವಲೆ; ದರ್ಶನ್​ ನೀಡಿದ್ದರು ನೆರವು

| Updated By: ಸಾಧು ಶ್ರೀನಾಥ್​

Updated on: Jan 06, 2021 | 3:41 PM

ಅಭಿಷೇಕ್​ ನವಲೆ ಸದ್ಯ ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಈವರೆಗೆ ಅಂತಾರಾಷ್ಟ್ರೀಯ ಸ್ಕೇಟಿಂಗ್​ನ ವಿವಿಧ ವಿಭಾಗಗಳಲ್ಲಿ ಮೂರು ಬಾರಿ ವಿಶ್ವದಾಖಲೆ, 2 ಸಲ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.

ಸ್ಕೇಟಿಂಗ್​ನಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ ಕುಂದಾನಗರಿ ಕುವರ ಅಭಿಷೇಕ್ ನವಲೆ; ದರ್ಶನ್​ ನೀಡಿದ್ದರು ನೆರವು
ಅಭಿಷೇಕ್​ ನವಲೆ
Follow us on

ಕುಂದಾನಗರಿಯ ಕುವರನೊಬ್ಬ ಇನ್​ಲೈನ್ ಸ್ಕೇಟಿಂಗ್​ನ 100 ಮೀಟರ್​ ವಿಭಾಗದಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾನೆ. ಚಿಕ್ಕಂದಿನಿಂದಲೂ ಸ್ಕೇಟಿಂಗ್​ನಲ್ಲಿ ತುಂಬ ಆಸಕ್ತಿ ಹೊಂದಿದ್ದ ಯುವಕ, ಇದೀಗ 100 ಮೀಟರ್​ ದೂರವನ್ನು 12.97 ಫ್ರಾಕ್ಷನ್​ ಆಫ್​ ಸೆಕೆಂಡ್​ನಲ್ಲಿ ಕ್ರಮಿಸುವ ಮೂಲಕ, ಈ ಹಿಂದೆ ಆಸ್ಟ್ರೇಲಿಯಾದ ಡೆವಿಡ್​ ಸೆಲ್ಸಬರಿ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಡೆವಿಡ್​ ಸೆಲ್ಸಬರಿ 100 ಮೀ. ದೂರವನ್ನು 13.24 ಸೆಕೆಂಡ್​​ನಲ್ಲಿ ಕ್ರಮಿಸಿದ್ದರು.

ಇಷ್ಟು ದೊಡ್ಡ ಸಾಧನೆ ಮಾಡಿ ಗಿನ್ನಿಸ್ ದಾಖಲೆ ಪಟ್ಟಿಗೆ ಸೇರಿದವರು ಬೆಳಗಾವಿಯ ಅಭಿಷೇಕ್​ ನವಲೆ. ತಂದೆ ವಾಯವ್ಯ ಸಾರಿಗೆಯಲ್ಲಿ (ಎನ್‌ಡಬ್ಲ್ಯೂಕೆಆರ್‌ಟಿಸಿ) ಚಾಲಕರು ಮತ್ತು ತಾಯಿ ಗೃಹಿಣಿ. 14 ವರ್ಷಗಳಿಂದಲೂ ಸ್ಕೇಟಿಂಗ್ ಅಭ್ಯಾಸ ಮಾಡುತ್ತ ಬಂದಿರುವ ಈತ ಹಲವು ಸಾಧನೆಗಳನ್ನು ಮಾಡಿದ್ದಾರೆ.

ಹಾಗೇ ನವೆಂಬರ್​ 18ರಂದು ಡೆವಿಡ್​ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ. ಇವರ ಸ್ಕೇಟಿಂಗ್​ ವಿಡಿಯೋ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಆನ್​ಲೈನ್​ ಮೂಲಕ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿ, ಗಿನ್ನಿಸ್​ ದಾಖಲೆ ಪ್ರಮಾಣಪತ್ರವನ್ನು ಅಭಿಷೇಕ್​ಗೆ ನೀಡಲಾಗಿದೆ.

ನಟ ದರ್ಶನ್ ನೀಡಿದ್ದರು ನೆರವು
ಅಭಿಷೇಕ್​ ಬೆಳಗಾವಿಯ ರೋಲರ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2012ರಲ್ಲಿ ಪೋರ್ಚುಗಲ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್‍ಗೂ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಅವರ ಬಳಿ ಇನ್​ಲೈನ್​ ಸ್ಕೇಟಿಂಗ್ ಇರಲಿಲ್ಲ. ಈ ಬಡವರ್ಗದ ಪ್ರತಿಭಾವಂತನ ಬಗ್ಗೆ, ಆತನ ಬಳಿ ಇನ್​ಲೈನ್ ಸ್ಕೇಟ್​ ಇಲ್ಲದಿರುವ ಬಗ್ಗೆ 2011ರಲ್ಲಿ ಟಿವಿ9 ವರದಿ ಮಾಡಿತ್ತು.

ಅದನ್ನು ನೋಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಸಂಗೊಳ್ಳಿ ರಾಯಣ್ಣ ಚಿತ್ರದ ಶೂಟಿಂಗ್​ಗೆ ಬೆಳಗಾವಿಗೆ ಹೋಗಿದ್ದ ಸಂದರ್ಭದಲ್ಲಿ ಅಭಿಷೇಕ್​ಗೆ ಹಣ ನೀಡಿದ್ದರು. ಅವರು ನೀಡಿದ್ದ ಹಣದಲ್ಲೇ ಅಭಿಷೇಕ್​ ಇನ್​ಲೈನ್​ ಸ್ಕೇಟ್​ ಖರೀದಿಸಿದ್ದರು. ಅದಾದ ಬಳಿಕ ಪೋರ್ಚುಗಲ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್‍ನಲ್ಲಿ ಸ್ಪರ್ಧಿಸಿ, ನಾಲ್ಕನೇ ಸ್ಥಾನವನ್ನೂ ಗಳಿಸಿದ್ದಾರೆ.

ದ್ವಿತೀಯ ಪಿಯುಸಿ ವ್ಯಾಸಂಗ
ಅಭಿಷೇಕ್​ ನವಲೆ ಸದ್ಯ ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಈವರೆಗೆ ಅಂತಾರಾಷ್ಟ್ರೀಯ ಸ್ಕೇಟಿಂಗ್​ನ ವಿವಿಧ ವಿಭಾಗಗಳಲ್ಲಿ ಮೂರು ಬಾರಿ ವಿಶ್ವದಾಖಲೆ, 2 ಸಲ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.

ಬೆಳಗಾವಿಯಿಂದ -ಬೆಂಗಳೂರಿಗೆ ಹಾಗೂ ಬೆಳಗಾವಿಯಿಂದ ದೆಹಲಿಯವರೆಗೆ ಸ್ಕೇಟಿಂಗ್​ ರಿಲೆಯಲ್ಲೂ ಪಾಲ್ಗೊಂಡಿದ್ದರು. ಇದೀಗ ಇನ್​ಲೈನ್​ ಸ್ಕೇಟಿಂಗ್​ನಲ್ಲಿಯೂ ಗಿನ್ನಿಸ್ ದಾಖಲೆ ನಿರ್ಮಾಣ ಮಾಡಿದ್ದಾರೆ. ತನ್ನ ಈ ಸಾಧನೆಗೆ ತಂದೆ-ತಾಯಿ, ಮಾರ್ಗದರ್ಶಕರಾದ ಸೂರ್ಯಕಾಂತ್ ಹಿಂಡಲಗೇಕರ್ ಕಾರಣ ಎನ್ನುತ್ತಾರೆ ಅಭಿಷೇಕ್​

ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ನವಲೆ ಈವರೆಗೆ ಸ್ಕೇಟಿಂಗ್‍ನಲ್ಲಿ ಅಂತಾರಾಷ್ಟ್ರೀಯ ವೇಗದ ಸ್ಕೇಟಿಂಗ್ ಸ್ಪರ್ಧೆ, ಸ್ಕೇಟಿಂಗ್‍ನ ವಿವಿಧ ವಿಭಾಗಗಳಲ್ಲಿ ಮೂರು ಸಲ ವಿಶ್ವದಾಖಲೆ, 2 ಸಲ ಲಿಮ್ಕಾ ದಾಖಲೆ, ಬೆಳಗಾವಿಯಿಂದ‌-ಬೆಂಗಳೂರಿಗೆ ಸ್ಕೇಟಿಂಗ್ ರಿಲೆ, ಬೆಳಗಾವಿಯಿಂದ ದೆಹಲಿಯವರೆಗೆ ಸ್ಕೇಟಿಂಗ್ ರಿಲೆಯಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಇನ್‍ಲೈನ್ ಸ್ಕೇಟಿಂಗ್‍ನಲ್ಲಿಯೂ ಗಿನ್ನಿಸ್ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.