ಟೀಮ್ ಇಂಡಿಯಾದ ನುರಿತ ಬೌಲರ್ಗಳಲ್ಲಿ ಭುವನೇಶ್ವರ್ ಕುಮಾರ್ ಸಹ ಒಬ್ಬರು. ತಮ್ಮ ವೇಗದ ಬೌಲಿಂಗ್ನಿಂದಲೇ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳಿಗೆ ನಡುಕ ಉಂಟುಮಾಡುವ ಭುವನೇಶ್ವರ್ ಇದೀಗ ತಮ್ಮ ಹಾಸ್ಯ ಸ್ವಭಾವವನ್ನು ಸಹ ತೋರಿಸಿದ್ದಾರೆ.
ಭುವನೇಶ್ವರ್ ಇಂದು ಟ್ವಿಟರ್ನಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ ಆನ್ಲೈನ್ ಪ್ರಶ್ನೋತ್ತರ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಈ ವೇಳೆ ಫ್ಯಾನ್ಸ್ನಿಂದ ಬಂದ ಗೂಗ್ಲಿ ಪ್ರಶ್ನೆಗಳ ಸುರಿಮಳೆಗೆ ಪ್ರತಿಕ್ರಿಯಿಸುವ ವೇಳೆ ಸ್ವಲ್ಪ ತಮಾಷೆಯಾಗಿಯೇ ಉತ್ತರ ನೀಡಿದ್ದಾರೆ.
ಪ್ರಶ್ನೋತ್ತರದ ವೇಳೆ ಅಭಿಮಾನಿಯೊಬ್ಬ ನಿಮ್ಮ ಪತ್ನಿ ನೂಪುರ್ರನ್ನು ಕೆಲವೇ ಕೆಲವು ಪದಗಳಲ್ಲಿ ಬಣ್ಣಿಸಿ ಎಂದು ಕೇಳಿದ್ದಾನೆ. ಅಭಿಮಾನಿಯ ಪ್ರಶ್ನೆಗೆ ಭುವನೇಶ್ವರ್ ನನ್ನ ಪತ್ನಿ ಅತ್ಯಂತ ಬುದ್ಧಿವಂತೆ, ಬಹುಕಾರ್ಯ ಚತುರೆ ಹಾಗೂ ಆಕೆಗೆ ಶ್ವಾನಗಳೆಂದರೆ ಹುಚ್ಚು ಪ್ರೀತಿ ಎಂದು ತಮ್ಮ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ, ಕೆಲವು ಬಾರಿ ನನ್ನ ಪತ್ನಿ ತನ್ನ ಮುದ್ದಿನ ಶ್ವಾನಗಳಿಗೆ ನನಗಿಂತ ಹೆಚ್ಚು ಆದ್ಯತೆ ನೀಡುತ್ತಾಳೆ ಎಂದು ತಮ್ಮ ಹುಸಿಮುನಿಸನ್ನು ತೋಡಿಕೊಂಡಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಭುವನೇಶ್ವರ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡುವ ಮೂಲಕ ನಾನೇನು ಮಾಡ್ಲಿ ಸ್ವಾಮಿ ನನ್ನ ಹೆಂಡ್ತಿ ನಾಯಿಪ್ರೇಮಿ ಅಂತಾ ಕೊಂಚ ತಮಾಷೆಯಾಗಿ ಉತ್ತರಿಸಿದ್ದಾರೆ.
ಇದಲ್ಲದೆ, ನಿಮಗೆ ಅಲ್ಲಾದ್ದೀನ್ ಬಳಿಯಿರುವ ಮ್ಯಾಜಿಕ್ ದೀಪ ಸಿಕ್ಕರೆ ಅದರ ಜೀನಿ ಹತ್ತಿರ ಯಾವ ಮೂರು ವರಗಳನ್ನ ಕೇಳುವಿರಿ ಅಂತಾ ಮತ್ತೊಬ್ಬ ಫ್ಯಾನ್ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಭುವನೇಶ್ವರ್ ನನ್ನ ಮೊದಲ ವರ ಈ ಜಗತ್ತನ್ನು ಕೊರೊನಾ ಪಿಡುಗಿನಿಂದ ಮುಕ್ತಿಗೊಳಿಸೋದು. ಎರಡನೇ ವರವನ್ನ ಕಷ್ಟಕಾಲದಲ್ಲಿ ಬಳಸಿಕೊಳ್ಳಲು ಇಟ್ಟುಕೊಳ್ಳುತ್ತೇನೆ ಹಾಗೂ ಮೂರನೆಯದನ್ನ ಜೀನಿಯನ್ನ ಬಂಧನದಿಂದ ಮುಕ್ತಗೊಳಿಸಲು ಬಳಸಿಕೊಳ್ತೀನಿ ಅಂತಾ ಹೇಳಿಕೊಂಡಿದ್ದಾರೆ. ಒಟ್ನಲ್ಲಿ ಇಂಥದ್ದೇ ತರಲೆ ಪ್ರಶ್ನೆಗಳಿಗೆ ತಮ್ಮ ಹಾಸ್ಯ ಸ್ವಭಾವವನ್ನ ಬಳಸಿಕೊಂಡು ತಮಾಷೆಯಾಗಿ ಉತ್ತರ ನೀಡಿದ್ದಾರೆ.
Intelligent, multitasking & a crazy dog lover. Some times they come before me. https://t.co/WC2kfZEwrK
— Bhuvneshwar Kumar (@BhuviOfficial) July 12, 2020
Published On - 6:19 pm, Sun, 12 July 20