ಬ್ಯಾಕ್-ಟು-ಬ್ಯಾಕ್ ಹೈ ಆಕ್ಟೇನ್ ಸ್ಪೋರ್ಟ್ಸ್ ಆಕ್ಷನ್ ಇರುವುದರಿಂದ ಭಾನುವಾರದಂದು ಅಭಿಮಾನಿಗಳಿಗೆ ಬರಪೂರ ಮನರಂಜನೆ ಸಿಗಲಿದೆ. ಎರಡು ಬಿಗ್ ಫೈನಲ್‌ಗಳನ್ನು ಆಡುವ ಮೂಲಕ ಮನರಂಜನೆ ಇನ್ನೂ ಹೆಚ್ಚಾಗಲಿದೆ. ಈ ರಸದೌತಣ ಫುಟ್ಬಾಲ್ ಫೈನಲ್ನೊಂದಿಗೆ ಆರಂಭವಾಗಲಿದೆ. ಒಂದು ವೇಳೆ ನೀವು ಟೆನಿಸ್ ಅಭಿಮಾನಿಯಾಗಿದ್ದರೆ, ವಿಂಬಲ್ಡನ್ 2021 ಪುರುಷರ ಸಿಂಗಲ್ಸ್ ಫೈನಲ್ ನಿಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ. ಅಲ್ಲಿ ವಿಶ್ವದ ನಂಬರ್ ಒನ್ ನೊವಾಕ್ ಜೊಕೊವಿಕ್ ಫೈನಲ್ ಗೆಲ್ಲಲು ತುದಿಗಾಲಲ್ಲಿ ನಿಂತಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೂ ಮನರಂಜನೆ ಇರಲ್ಲಿದ್ದು ಇಂಡಿಯಾ- ಇಂಗ್ಲೆಂಡ್ ವನಿತೆಯರ 2ನೇ ಟಿ20 ಪಂದ್ಯ ನಡೆಯಲಿದೆ. ಈ ಲೇಖನದಲ್ಲಿ, ಬ್ಲಾಕ್ಬಸ್ಟರ್ ಭಾನುವಾರದಂದು ನಿಮ್ಮ ನೆಚ್ಚಿನ ಆಟಗಳನ್ನು ಎಲ್ಲಿ ಮತ್ತು ಹೇಗೆ ವೀಕ್ಷಿಸಬೇಕು ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ.
ಕೋಪಾ ಅಮೇರಿಕಾ ಫೈನಲ್: ಬ್ರೆಜಿಲ್ ವಿರುದ್ಧ ಅರ್ಜೆಂಟೀನಾ, ಸ್ಥಳ: ರಿಯೊ ಡಿ ಜನೈರೊ
ಭಾನುವಾರದಂದು ಭಾರತದ ಸಮಯ ಬೆಳಿಗ್ಗೆ 05: 30 ಕ್ಕೆ ನಡೆಯಲಿರುವ ಕೋಪಾ ಅಮೇರಿಕಾ ಫೈನಲ್‌ನಲ್ಲಿ ಅರ್ಜೆಂಟೀನಾ, ಬ್ರೆಜಿಲ್ ವಿರುದ್ಧ ಸೆಣಸಲಿದೆ. ರಿಯೊ ಡಿ ಜನೈರೊದಲ್ಲಿನ ಮರಕಾನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಬ್ರೆಜಿಲ್ ಆರು ಬಾರಿ ವಿಜೇತರಾಗಿದ್ದು, 2019 ರಲ್ಲಿ ಕೊನೆಯ ಆವೃತ್ತಿಯನ್ನು ಗೆದ್ದ ಹಾಲಿ ಚಾಂಪಿಯನ್ ಆಗಿದೆ. ಅರ್ಜೆಂಟೀನಾ ಎರಡು ಬಾರಿ ವಿಜೇತರಾಗಿದ್ದು, ಕೊನೆಯ ಬಾರಿಗೆ 1993 ರಲ್ಲಿ ದಕ್ಷಿಣ ಅಮೆರಿಕಾದ ಸ್ಪರ್ಧೆಯನ್ನು ಗೆದ್ದುಕೊಂಡಿತು. ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಹೆಸರಿನ ಮುಂದೆ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಸೇರಿಸಲು ಇದು ಕೊನೆಯ ಅವಕಾಶವಾಗಿದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾ ಎರಡೂ ಕೋಪಾ ಅಮೆರಿಕಾದಲ್ಲಿ 33 ಬಾರಿ ಮುಖಾಮುಖಿಯಾಗಿದ್ದು, ಅರ್ಜೆಂಟೀನಾ 15 ಬಾರಿ ಮತ್ತು ಬ್ರೆಜಿಲ್ 10 ಬಾರಿ ಗೆದ್ದಿದೆ.
ಸಮಯ: ಭಾರತದ ಕಾಲಮಾನ ಬೆಳಿಗ್ಗೆ 05-30. ಚಾನೆಲ್: ಸೋನಿ ಸಿಕ್ಸ್
ವಿಂಬಲ್ಡನ್ ಫೈನಲ್
ವಿಂಬಲ್ಡನ್ 2021 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಎರಡು ಬಾರಿ ಹಾಲಿ ಚಾಂಪಿಯನ್ ಮತ್ತು ವಿಶ್ವ ನಂಬರ್ ಒನ್ ನೊವಾಕ್ ಜೊಕೊವಿಕ್, ಭಾನುವಾರ ಲಂಡನ್‌ನ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಇಟಾಲಿಯನ್ ಪವರ್‌ಹೌಸ್ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ ಸೆಣಸಲಿದ್ದಾರೆ. ನೊವಾಕ್ ತನ್ನ ಮೂರನೇ ನೇರ ವಿಂಬಲ್ಡನ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಇತಿಹಾಸ ಸೃಷ್ಟಿಸಲು ನೋಡುತ್ತಿದ್ದಾರೆ. ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ ಮೊದಲ ಇಟಾಲಿಯನ್ ಎಂಬ ಹೆಗ್ಗಳಿಕೆಗೆ ಬೆರೆಟ್ಟಿನಿ ಈಗಾಗಲೇ ಪಾತ್ರರಾಗಿದ್ದಾರೆ. ಇವರಿಬ್ಬರು ಕೊನೆಯ ಬಾರಿಗೆ 2021 ರ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಇದರಲ್ಲಿ ಜೊಕೊವಿಕ್ ನೇರ ಸೆಟ್‌ಗಳಲ್ಲಿ ಜಯಗಳಿಸಿದರು. ಬೆರೆಟ್ಟಿನಿ ಎಟಿಪಿ ಪ್ರವಾಸದಲ್ಲಿ ಜೊಕೊವಿಕ್ ಅವರನ್ನು ಎಂದಿಗೂ ಸೋಲಿಸಿಲ್ಲ, ಆದರೆ ಭಾನುವಾರದ ಯುದ್ಧದಲ್ಲಿ ಗೆದ್ದು ಬೆರೆಟ್ಟಿನಿ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದ್ದಾರೆ.
ಸಮಯ: ಭಾರತದ ಕಾಲಮಾನ ಬೆಳಿಗ್ಗೆ 6:30 ಚಾನೆಲ್: ಸ್ಟಾರ್ ಸ್ಪೋರ್ಟ್ಸ್ / ಲೈವ್ ಸ್ಟ್ರೀಮಿಂಗ್: ಹಾಟ್‌ಸ್ಟಾರ್
ಮಹಿಳಾ ಕ್ರಿಕೆಟ್; ಭಾರತ- ಇಂಗ್ಲೆಂಡ್.. 2 ನೇ ಟಿ 20 ಪಂದ್ಯ
ನಾರ್ಥಾಂಪ್ಟನ್‌ನಲ್ಲಿ ಡಿಎಲ್‌ಎಸ್ ನಿಯಮದಡಿಯಲ್ಲಿ ಇಂಗ್ಲೆಂಡ್ ವಿರುದ್ದ ಮೊದಲ ಟಿ 20 ಯನ್ನು 18 ರನ್‌ಗಳಿಂದ ಸೋತ ನಂತರ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತದ ವನಿತೆಯರ ತಂಡ ಎರಡನೇ ಟಿ 20 ಯಲ್ಲಿ ಪುನರಾಗಮನ ಮಾಡಲು ಹಾತೋರೆಯುತ್ತಿದೆ. ಈ ಪಂದ್ಯ ಭಾನುವಾರ ಹೋವ್‌ನಲ್ಲಿ ನಡೆಯಲಿದೆ. ಭಾನುವಾರದ ಗೆಲುವು, ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಸರಣಿಯಲ್ಲಿ ಜೀವಂತವಾಗಿರಿಸುತ್ತದೆ. ಒಂದು ಪಕ್ಷ 2ನೇ ಟಿ20 ಪಂದ್ಯವನ್ನು ಸೋತರೆ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿ ಸರಣಿ ವಿಜೇತವಾಗಲಿದೆ.
ಪಂದ್ಯ ಆರಂಭವಾಗುವ ಸಮಯ ಭಾರತದ ಕಾಲಮಾನ ಸಂಜೆ 07:00 ಗಂಟೆಗೆ
ಯುರೋ 2020 ಫೈನಲ್: ಇಟಲಿ vs ಇಂಗ್ಲೆಂಡ್, ಸ್ಥಳ: ವೆಂಬ್ಲಿ ಕ್ರೀಡಾಂಗಣ, ಲಂಡನ್
ನಾಲ್ಕು ವಾರಗಳು ಮತ್ತು 50 ಮನಮೋಹಕ ಮತ್ತು ಆಹ್ಲಾದಕರ ಪಂದ್ಯಗಳ ನಂತರ, ಯುರೋ 2020 ಚಾಂಪಿಯನ್‌ಶಿಪ್ ಅಂತಿಮ ಹಂತಕ್ಕೆ ತಲುಪಿದೆ. ಲಂಡನ್‌ನ ಐತಿಹಾಸಿಕ ವೆಂಬ್ಲಿ ಕ್ರೀಡಾಂಗಣದಲ್ಲಿ ಭಾನುವಾರ, ಇಟಲಿ ಯುರೋ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸುವ ಮೂಲಕ ಈಗಾಗಲೇ ಇತಿಹಾಸ ಪುಸ್ತಕಗಳನ್ನು ಪುನಃ ಬರೆದಿರುವ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಇದುವರೆಗಿನ ಸ್ಪರ್ಧೆಯಲ್ಲಿ ಉಭಯ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿವೆ. ಇಟಲಿ ಮತ್ತು ಇಂಗ್ಲೆಂಡ್ 27 ಸಂದರ್ಭಗಳಲ್ಲಿ ಮುಖಾಮುಖಿಯಾಗಿದ್ದು, ಅವುಗಳಲ್ಲಿ ಇಟಲಿ 11 ಪಂದ್ಯಗಳನ್ನು ಗೆದ್ದಿದೆ ಮತ್ತು ಇಂಗ್ಲೆಂಡ್ ಕೇವಲ ಎಂಟು ಪಂದ್ಯಗಳನ್ನು ಗೆದ್ದಿದೆ. ಯುರೋದಲ್ಲಿ ಇಟಲಿ, ಇಂಗ್ಲೆಂಡ್ ವಿರುದ್ಧ ಎಂದಿಗೂ ಸೋತಿಲ್ಲ ಮತ್ತು ಎರಡೂ ಮುಖಾಮುಖಿ ಪಂದ್ಯವನ್ನು ಇಟಲಿ ಗೆದ್ದಿದೆ.