Carlos Alcaraz: ಕಾರ್ಲೋಸ್ ಅಲ್ಕರಾಝ್… ಟೆನಿಸ್ ಅಂಗಳದ ಹೊಸ ಕಿಂಗ್
Carlos Alcaraz: ಕಾರ್ಲೋಸ್ ಅಲ್ಕರಾಝ್ ಗಾರ್ಫಿಯಾ ಆಟದಲ್ಲಿ ನೀವು ರೋಜರ್ ಫೆಡರರ್ ಅವರ ಫೋರ್ಹ್ಯಾಂಡ್ ಶಾಟ್ ಅನ್ನು ಕಾಣಬಹುದು, ರಾಫೆಲ್ ನಡಾಲ್ ಅವರ ಪಾದರಸದಂತಹ ಚಲನೆಯನ್ನೂ ವೀಕ್ಷಿಸಬಹುದು. ಇನ್ನು ನೊವಾಕ್ ಜೊಕೊವಿಚ್ರ ಚಾಣಾಕ್ಷ ನಡೆಯನ್ನೂ ಸಹ ನೋಡಬಹುದು. ಹೀಗಾಗಿ ಮುಂದೊಂದು ದಿನ ಈ ಮೂವರು ಸರ್ವಶ್ರೇಷ್ಠರ ಸಾಲಿಗೆ ಅಲ್ಕರಾಝ್ ಹೆಸರು ಸೇರ್ಪಡೆಯಾದರೂ ಅಚ್ಚರಿಪಡಬೇಕಿಲ್ಲ.

ಕಾರ್ಲೋಸ್ ಅಲ್ಕರಾಝ್… ಟೆನಿಸ್ ಅಂಗಳದ ಹೊಸ ಯುವರಾಜನಾಗಿ ಸ್ಪೇನ್ನ ಕಾರ್ಲೋಸ್ ಅಲ್ಕರಾಝ್ ಗಾರ್ಫಿಯಾ ಹೊರಹೊಮ್ಮಿದ್ದಾರೆ. ಅದು ಸಹ 24 ಗ್ರ್ಯಾಂಡ್ ಸ್ಲಾಮ್ಗಳ ಒಡೆಯ ನೊವಾಕ್ ಜೊಕೊವಿಚ್ ಅವರನ್ನು ಮಕಾಡೆ ಮಲಗಿಸುವ ಮೂಲಕ ಎಂಬುದು ವಿಶೇಷ. ಹೌದು, ವಿಂಬಲ್ಡನ್ ಅಂಗಳದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಜೊಕೊವಿಚ್ ಅವರನ್ನು ಫೈನಲ್ಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೋಲಿಸುವಲ್ಲಿ ಅಲ್ಕರಾಝ್ ಯಶಸ್ವಿಯಾಗಿದ್ದಾರೆ. 2018 ರಿಂದ ಶುರುವಾಗಿದ್ದ ವಿಂಬಲ್ಡನ್ ಗೆಲುವಿನ ನಾಗಾಲೋಟಕ್ಕೆ ಕಳೆದ ವರ್ಷ ಅಲ್ಕರಾಝ್ ಬ್ರೇಕ್ ಹಾಕಿದ್ದರು. ಇದೀಗ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಜೊಕೊವಿಚ್ ಅವರನ್ನು ಮಣಿಸುವಲ್ಲಿ ಸ್ಪೇನ್ನ ಯುವ ತಾರೆ ಯಶಸ್ವಿಯಾಗಿದ್ದಾರೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, 2023 ರ ವಿಂಬಲ್ಡನ್ ಫೈನಲ್ನಲ್ಲಿ ನೊವಾಕ್ ಜೊಕೊವಿಚ್ ಅವರ ವಿರುದ್ಧ ಕಾರ್ಲೋಸ್ ಅಲ್ಕರಾಝ್ 4 ಗಂಟೆ 42 ನಿಮಿಷಗಳ ಕಾಲ ಕಾದಾಡಿ ಗೆದ್ದಿದ್ದರು ಎಂಬುದು. ಆದರೆ ಈ ಬಾರಿ ಅಲ್ಕರಾಝ್ ಕೇವಲ 2 ಗಂಟೆ 28 ನಿಮಿಷಗಳಲ್ಲಿ ಪಂದ್ಯ ಮುಗಿಸಿದ್ದಾರೆ ಎಂದರೆ ಅಚ್ಚರಿಪಡಲೇಬೇಕು. ಏಕೆಂದರೆ ಇಲ್ಲಿ ಎದುರಾಳಿ ನೊವಾಕ್ ಜೊಕೊವಿಚ್. ಎದುರಾಳಿಯ ಜಂಗಾಬಲವನ್ನೇ ಉಡುಗಿಸುವ ಜೊಕೊವಿಚ್ ಅವರನ್ನು ಈ ಬಾರಿ ಕಾರ್ಲೋಸ್ ಅಲ್ಕರಾಝ್ 6-2, 6-2, 7-6 (4) ನೇರ ಸೆಟ್ಗಳಿಂದ ಮಕಾಡೆ ಮಲಗಿಸಿದ್ದಾರೆ.
ಈ ಗೆಲುವಿನೊಂದಿಗೆ ಟೆನಿಸ್ ಅಂಗಳದಲ್ಲಿ ಅಪರೂಪದ ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಈ ದಾಖಲೆಗಳೇ ಕಾರ್ಲೋಸ್ ಅಲ್ಕರಾಝ್ ಟೆನಿಸ್ ಅಂಗಳದ ಹೊಸ ಕಿಂಗ್ ಎಂಬುದನ್ನು ಸಾರಿ ಹೇಳುತ್ತಿದೆ…
ಏಕೆಂದರೆ ಕಾರ್ಲೋಸ್ ಅಲ್ಕರಾಝ್ ತನ್ನ 21ನೇ ವಯಸ್ಸಿನಲ್ಲೇ 4 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದಿದ್ದಾರೆ. ಅದು ಸಹ ಅತಿರಥ ಮಹಾರಥರನ್ನು ಮಣಿಸುವ ಮೂಲಕ ಎಂಬುದು ವಿಶೇಷ. ಈ ಮೂಲಕ ಚಾನೆಲ್ ಸ್ಲ್ಯಾಮ್ (ಫ್ರೆಂಚ್ ಓಪನ್-ವಿಂಬಲ್ಡನ್) ಗೆದ್ದ ವಿಶ್ವದ ಅತ್ಯಂತ ಕಿರಿಯ ಟೆನಿಸ್ ತಾರೆ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
1978 ರಲ್ಲಿ ಜಾನ್ ಬೋರ್ಗ್ 22 ವರ್ಷ, 32 ದಿನಗಳಲ್ಲಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇದಾದ ಬಳಿಕ 2008 ರಲ್ಲಿ ರಾಫೆಲ್ ನಡಾಲ್ 22 ವರ್ಷ, 33 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಆ ಬಳಿಕ ಚಾನೆಲ್ ಸ್ಲ್ಯಾಮ್ನಲ್ಲಿ ಮಿಂಚಲು ಯಾವುದೇ ಯುವ ಆಟಗಾರನಿಗೆ ಸಾಧ್ಯವಾಗಿರಲಿಲ್ಲ. ಇದೀಗ 21 ವರ್ಷ, 70 ದಿನಗಳ ಹರೆಯದ ಕಾರ್ಲೋಸ್ ಅಲ್ಕರಾಝ್ ಫ್ರೆಂಚ್ ಓಪನ್ ಬೆನ್ನಲ್ಲೇ, ವಿಂಬಲ್ಡನ್ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ವಿಂಬಲ್ಡನ್ ಪ್ರಶಸ್ತಿಯೊಂದಿಗೆ ಕಾರ್ಲೋಸ್ ಅಲ್ಕರಾಝ್
ಟೆನಿಸ್ ಅಂಗಳದ ಯುವರಾಜ:
21ನೇ ವಯಸ್ಸಿನಲ್ಲಿ ಚಾನೆಲ್ ಸ್ಲ್ಯಾಮ್ ಗೆದ್ದಿರುವುದಕ್ಕೆ ಕಾರ್ಲೋಸ್ ಅಲ್ಕರಾಝ್ ಅವರನ್ನು ಟೆನಿಸ್ ಅಂಗಳದ ಯುವರಾಜ ಎಂದು ಬಣ್ಣಿಸಲಾಗುತ್ತಿದೆ. ಏಕೆಂದರೆ ಇಲ್ಲಿ ಎರಡು ಟೂರ್ನಿಗಳು ವಿಭಿನ್ನ ಮೇಲ್ಮೈಗಳಲ್ಲಿ ನಡೆಯುತ್ತವೆ. ಫ್ರೆಂಚ್ ಓಪನ್ ಅನ್ನು ಕ್ಲೇ ಕೋರ್ಟ್ನಲ್ಲಿ (ಆವೆ ಮಣ್ಣಿನ ಕೋರ್ಟ್) ಆಡಿದ್ರೆ, ವಿಂಬಲ್ಡನ್ ಟೂರ್ನಿಯನ್ನು ಗ್ರಾಸ್ ಕೋರ್ಟ್ನಲ್ಲಿ (ಹುಲ್ಲಿನ ಕೋರ್ಟ್) ಆಡಲಾಗುತ್ತದೆ. ಈ ಎರಡು ಕೋರ್ಟ್ಗಳ ನಡುವಣ ಟೂರ್ನಿಗಳು ತಿಂಗಳುಗಳ ಅಂತರದಲ್ಲಿ ನಡೆಯುವುದರಿಂದ, ಈ ಎರಡು ಪ್ರಶಸ್ತಿಗಳನ್ನು ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ.
ಏಕೆಂದರೆ ಟೆನಿಸ್ ಅಂಗಳದ ಈ ಎರಡು ಟೂರ್ನಿಗಳು ಶುರುವಾಗಿ ಶತಮಾನಗಳೇ ಕಳೆದರೂ ಫ್ರೆಂಚ್ ಓಪನ್ ಬೆನ್ನಲ್ಲೇ ವಿಂಬಲ್ಡನ್ ಗೆಲ್ಲಲು ಸಾಧ್ಯವಾಗಿರುವುದು ಕೇವಲ 6 ಮಂದಿಗೆ ಮಾತ್ರ ಎಂದರೆ ನಂಬಲೇಬೇಕು. ಈ ಸಾಧಕರ ಪಟ್ಟಿಗೆ ಹೊಸ ಸೇರ್ಪಡೆ 21ರ ಹರೆಯದ ಕಾರ್ಲೋಸ್ ಅಲ್ಕರಾಝ್.
ಚಾನೆಲ್ ಸ್ಲ್ಯಾಮ್ ಗೆದ್ದ ಆಟಗಾರರು:
- ರಾಡ್ ಲೇವರ್ (1969)
- ಜಾರ್ನ್ ಬೋರ್ಗ್ (1978-80)
- ರಾಫೆಲ್ ನಡಾಲ್ (2008, 2010)
- ರೋಜರ್ ಫೆಡರರ್ (2009)
- ನೊವಾಕ್ ಜೊಕೊವಿಚ್ (2021)
- ಕಾರ್ಲೋಸ್ ಅಲ್ಕರಾಝ್ (2024)
2009 ರಲ್ಲಿ ರೋಜರ್ ಫೆಡರರ್, 2010 ರಲ್ಲಿ ರಾಫೆಲ್ ನಡಾಲ್ ಒಂದೇ ವರ್ಷ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೂರ್ನಿಗಳನ್ನು ಗೆದ್ದುಕೊಂಡಿದ್ದರು. ಇದಾದ ಬಳಿಕ ಇಂತಹ ಸಾಧನೆ ಮೂಡಿಬಂದಿದ್ದು ನೊವಾಕ್ ಜೊಕೊವಿಚ್ ಕಡೆಯಿಂದ. 2021 ರಲ್ಲಿ ಜೊಕೊವಿಚ್ ಬ್ಯಾಕ್ ಟು ಬ್ಯಾಕ್ ಎರಡು ಗ್ರ್ಯಾಡ್ ಸ್ಲಾಮ್ಗಳನ್ನು ಗೆದ್ದು ತಾನು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ವಿಶ್ವಕ್ಕೆ ಸಾರಿದ್ದರು.
ಅಂದರೆ ಟೆನಿಸ್ ಅಂಗಳದ ಜಾದೂಗಾರರು ಎಂದೇ ಬಿಂಬಿತರಾಗಿರುವ ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಚ್ ಮಾಡಿದ ಸಾಧನೆಯನ್ನು ಕಾರ್ಲೋಸ್ ಅಲ್ಕರಾಝ್ ಕೇವಲ 21ನೇ ವಯಸ್ಸಿನಲ್ಲೇ ಮಾಡಿ ಮುಗಿಸಿದ್ದಾರೆ. 2024 ರಲ್ಲಿ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಬೆನ್ನಲ್ಲೇ ಇದೀಗ ವಿಂಬಲ್ಡನ್ನಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿಯೇ ಕಾರ್ಲೋಸ್ ಅಲ್ಕರಾಝ್ ಅವರನ್ನು ಟೆನಿಸ್ ಅಂಗಳದ ಯುವರಾಜ ಎಂದು ಬಣ್ಣಿಸಲಾಗುತ್ತಿದೆ.
ದೈತ್ಯರ ಹುಟ್ಟಡಗಿಸುವ ಅಲ್ಕರಾಝ್:
ಕಾರ್ಲೋಸ್ ಅಲ್ಕರಾಝ್ 2022 ರಲ್ಲಿ 22 ಗ್ರ್ಯಾಂಡ್ ಸ್ಲಾಮ್ಗಳ ಒಡೆಯ ರಾಫೆಲ್ ನಡಾಲ್, ನೊವಾಕ್ ಜೊಕೊವಿಚ್ ಹಾಗೂ ಅಲೆಕ್ಸಾಂಡರ್ ಝ್ವೆರವ್ಗೆ ಸೋಲುಣಿಸಿದ್ದರು. ಈ ವೇಳೆ ಅವರ ವಯಸ್ಸು ಕೇವಲ 19 ವರ್ಷ ಎಂಬುದು ಇಲ್ಲಿ ಉಲ್ಲೇಖಾರ್ಹ. ಇದೀಗ 21ನೇ ಹರೆಯದಲ್ಲಿರುವ ಕಾರ್ಲೋಸ್ ಅಲ್ಕರಾಝ್ ಅವರನ್ನು ಎದುರಿಸುವುದೇ ಚಾಂಪಿಯನ್ನರ ಮುಂದಿರುವ ದೊಡ್ಡ ಸವಾಲು. ಹೀಗಾಗಿಯೇ ನೊವಾಕ್ ಜೊಕೊವಿಚ್ನಂತಹ ಜೊಕೊವಿಚ್, ಕಾರ್ಲೋಸ್ ಅಲ್ಕರಾಝ್ ವಿರುದ್ಧ 2 ಬಾರಿ ಮಂಡಿಯೂರಿರುವುದು.
ಅಲ್ಕರಾಝ್ ಅಬ್ಬರ:
21 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ 4 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದ ಆಟಗಾರರೆಂದರೆ ಬ್ಜೋರ್ನ್ ಬೋರ್ಗ್, ಬೋರಿಸ್ ಬೆಕರ್ ಮತ್ತು ಮ್ಯಾಟ್ಸ್ ವಿಲಾಂಡರ್. ಇದೀಗ ಈ ಶತಮಾನದಲ್ಲಿ ಈ ಸಾಧನೆ ಮಾಡಿದ ಟೆನಿಸ್ ತಾರೆಯಾಗಿ ಅಲ್ಕರಾಝ್ ಗ್ರಾಫಿಯಾ ಉದಯಿಸಿದ್ದಾರೆ. ಹೀಗಾಗಿಯೇ ಕಾರ್ಲೋಸ್ ಅಲ್ಕರಾಝ್ ಅವರನ್ನು ಟೆನಿಸ್ ಅಂಗಳದ ಮುಂದಿನ ಕಿಂಗ್ ಎಂದು ಬಣ್ಣಿಸಲಾಗುತ್ತಿದೆ.

ಕಾರ್ಲೋಸ್ ಅಲ್ಕರಾಝ್
ಸಾಧಕರ ಸಾಧನೆಯ ಹಿನ್ನೋಟ:
ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ವಿಶ್ವ ದಾಖಲೆ ನೊವಾಕ್ ಜೊಕೊವಿಚ್ ಹೆಸರಿನಲ್ಲಿದೆ. ಜೊಕೊವಿಚ್ ಒಟ್ಟು 24 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ರಾಫೆಲ್ ನಡಾಲ್. ಸ್ಪೇನ್ ತಾರೆ ಒಟ್ಟು 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಾಗೆಯೇ ಮೂರನೇ ಸ್ಥಾನದಲ್ಲಿ ರೋಜರ್ ಫೆಡರರ್ ಇದ್ದು, ಫೆಡರರ್ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಈ ಮೂವರು ಚಾಂಪಿಯನ್ ತಾರೆಗಳ ಆರಂಭ. ಅಂದರೆ ನೊವಾಕ್ ಜೊಕೊವಿಚ್ ಮೊದಲ 4 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದಿರುವುದು 24ನೇ ವಯಸ್ಸಿನಲ್ಲಿ. ಇನ್ನು ಫೆಡರರ್ 23ನೇ ವಯಸ್ಸಿನಲ್ಲಿ 4 ಗ್ರ್ಯಾಂಡ್ ಸ್ಲಾಮ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ರಾಫೆಲ್ ನಡಾಲ್ 22ನೇ ವಯಸ್ಸಿನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಟೆನಿಸ್ ಅಂಗಳದ ಸರ್ವಶ್ರೇಷ್ಠ ತಾರೆಗಳನ್ನು ಕಾರ್ಲೋಸ್ ಅಲ್ಕರಾಝ್ ಆರಂಭದಲ್ಲೇ ಹಿಂದಿಕ್ಕಿದ್ದಾರೆ. ತಮ್ಮ 21ನೇ ವಯಸ್ಸಿನಲ್ಲೇ 4 ಗ್ರ್ಲ್ಯಾಂಡ್ ಸ್ಮಾಮ್ಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಫೆಡರರ್, ಜೊಕೊವಿಚ್, ನಡಾಲ್ ಪಡೆಯದ ಅದ್ಭುತ ಆರಂಭವನ್ನು ಅಲ್ಕರಾಝ್ ಪಡೆದುಕೊಂಡಿದ್ದಾರೆ. ಹೀಗಾಗಿ ಮುಂದೊಂದು ದಿನ ನೊವಾಕ್ ಜೊಕೊವಿಚ್ ಅವರ 24 ಗ್ರ್ಯಾಂಡ್ ಸ್ಲಾಮ್ಗಳ ವಿಶ್ವ ದಾಖಲೆಯನ್ನು ಕಾರ್ಲೋಸ್ ಅಲ್ಕರಾಝ್ ಅಳಿಸಿ ಹಾಕಿದರೂ ಅಚ್ಚರಿಪಡಬೇಕಿಲ್ಲ.
Published On - 12:42 pm, Mon, 15 July 24
