- Kannada News Photo gallery Wimbledon 2024 Carlos Alcaraz Beats Novak Djokovic To win Back To Back Wimbledon Titles
Wimbledon 2024: ಸತತ 2ನೇ ಬಾರಿಗೆ ಜೊಕೊವಿಚ್ರನ್ನು ಮಣಿಸಿ ವಿಂಬಲ್ಡನ್ ಕಿರೀಟ ತೊಟ್ಟ ಅಲ್ಕರಾಝ್..!
Wimbledon 2024 Men's Singles Final: ಸ್ಪೇನ್‌ನ ಯುವ ಟೆನಿಸ್ ಸ್ಟಾರ್ ಕಾರ್ಲೋಸ್ ಅಲ್ಕರಾಝ್ ಸತತ ಎರಡನೇ ವರ್ಷ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. 21 ವರ್ಷದ ಅಲ್ಕರಾಝ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 6-2, 6-2, 7-6 (7-4) ನೇರ ಸೆಟ್‌ಗಳಿಂದ 7 ಬಾರಿಯ ಚಾಂಪಿಯನ್ ಸರ್ಬಿಯಾದ ಅನುಭವಿ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
Updated on:Jul 14, 2024 | 9:42 PM

ಲಂಡನ್ನ ಸೆಂಟರ್ ಕೋರ್ಟ್ ಅಂಗಳದಲ್ಲಿ ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಟೆನಿಸ್ ದೈತ್ಯ ಜೊಕೊವಿಚ್ರನ್ನು ಮಣಿಸಿದ ಸ್ಪೇನ್ ದೇಶದ ಯುವ ಟೆನಿಸ್ ಸ್ಟಾರ್ ಕಾರ್ಲೋಸ್ ಅಲ್ಕರಾಝ್ ಸತತ ಎರಡನೇ ಬಾರಿಗೆ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಳೆದ ಬಾರಿಯೂ ಇದೇ ಜೋಡಿ ವಿಂಬಲ್ಡನ್ ಫೈನಲ್ಗೆ ಲಗ್ಗೆ ಇಟ್ಟಿದ್ದವು. ಆ ಪಂದ್ಯದಲ್ಲಿ ಸರ್ಬಿಯಾದ ಸೂಪರ್ ಸ್ಟಾರ್ ಜೊಕೊವಿಚ್ ಅವರನ್ನು ಇದೇ ಅಲ್ಕರಾಝ್ 1-6, 7-6, 6-1, 3-6, 6-4 ಸೆಟ್‌ಗಳಿಂದ ಮಣಿಸಿ ಚೊಚ್ಚಲ ವಿಂಬಲ್ಡನ್ ಗೆದ್ದು ಬೀಗಿದ್ದರು.

ಇದೀಗ ಈ ಬಾರಿಯೂ ಅಲ್ಕರಾಝ್, 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು 6-2, 6-2, 7-6 (7-4) ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಪಂದ್ಯದ ಮೊದಲ ಎರಡು ಸೆಟ್‌ಗಳಲ್ಲಿ ಅಲ್ಕರಾಝ್ ಪ್ರಾಬಲ್ಯ ಮೆರೆದರು. ಮೊದಲ ಸೆಟ್ ಅನ್ನು 6-2 ರಿಂದ ಗೆದ್ದುಕೊಂಡಿದ್ದ ಅಲ್ಕರಾಝ್, ಎರಡನೇ ಸೆಟ್ ಅನ್ನು 6-2 ರಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇತ್ತ ಜೊಕೊವಿಕ್ ಮೂರನೇ ಸೆಟ್‌ನಲ್ಲಿ ಪುನರಾಗಮನ ಮಾಡಿದರಾದರೂ ಆ ಹೊತ್ತಿಗೆ ಅದು ತುಂಬಾ ತಡವಾಗಿತ್ತು.

ಪಂದ್ಯದ ಮೂರನೇ ಸೆಟ್‌ನಲ್ಲಿ, ಮೊದಲಿಗೆ ನೊವಾಕ್ ಜೊಕೊವಿಚ್, ಕಾರ್ಲೋಸ್ ವಿರುದ್ಧ ಪ್ರಾಬಲ್ಯ ತೋರಿದರು. ಹೀಗಾಗಿ ಒಂದು ಹಂತದಲ್ಲಿ ಸ್ಕೋರ್ 4-2 ಆಗಿತ್ತು. ಆದರೆ ನಂತರ ಕಾರ್ಲೋಸ್ ಅಲ್ಕರಾಝ್ ಪುನರಾಗಮನ ಮಾಡಿ ಸ್ಕೋರ್ ಅನ್ನು 6-6ಕ್ಕೆ ಕೊಂಡೊಯ್ದರು.

ಹೀಗಾಗಿ ಮೂರನೇ ಸೆಟ್ ಅನ್ನು ಟೈಬ್ರೇಕ್ ಮೂಲಕ ನಿರ್ಧರಿಸಬೇಕಾಯಿತು. ಅಂತಿಮವಾಗಿ ಕಾರ್ಲೋಸ್ ಅಲ್ಕರಾಝ್ 7-4 ರಿಂದ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಇತ್ತ 8 ನೇ ಬಾರಿಗೆ ವಿಂಬಲ್ಡನ್ ಗೆಲ್ಲುವ ಗುರಿಯೊಂದಿಗೆ ಅಂಗಳಕ್ಕಿಳಿದಿದ್ದ ನೊವಾಕ್ ಜೊಕೊವಿಚ್, ಕಳೆದ ಬಾರಿಯಂತೆ ಈ ಬಾರಿಯೂ ಸೋಲಿನ ನಿರಾಸೆ ಅನುಭವಿಸಬೇಕಾಯಿತು.
Published On - 9:18 pm, Sun, 14 July 24



















