ಚೆಸ್ ಸ್ಪರ್ಧೆಯಲ್ಲಿ ವಂಚನೆ ವ್ಯಾಪಕವಾಗಿಲ್ಲ. ಅಂತಹ ಮೋಸಗಳಿದ್ದರೆ ಅದು ಆನ್‌ಲೈನ್ ಪಂದ್ಯಾವಳಿಗಳಿಗೆ ಸೀಮಿತವಾಗಿದೆ ಭಾರತೀಯ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ (Viswanathan Anand) ಅವರು ಹೇಳಿದ್ದಾರೆ. ಸೆಪ್ಟೆಂಬರ್ನಲ್ಲಿ ನಡೆದ ಸಿಂಕ್‌ಫೀಲ್ಡ್ ಕಪ್ ಚೆಸ್‌ನಲ್ಲಿ ಯುಎಸ್ ಹದಿಹರೆಯದ ಹ್ಯಾನ್ಸ್ ನೀಮನ್ ವಿರುದ್ಧ ಸೋಲನುಭವಿಸಿದ ಬಳಿಕ ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಮೋಸದಾಟದ ಆರೋಪ ಹೊರಿಸಿದ್ದರು. ಈ ಬಗ್ಗೆ ಮಾತನಾಡಿದ ವಿಶ್ವ ಆಡಳಿತ ಮಂಡಳಿಯ (FIDE) ಉಪ ಅಧ್ಯಕ್ಷರಾಗಿರುವ ಚೆಸ್ ಕ್ರೀಡೆಯಲ್ಲಿ ಮೋಸವು ವ್ಯಾಪಕವಾಗಿದೆ ಎಂದು ಅನಿಸುತ್ತಿಲ್ಲ. ಒಂದು ವೇಳೆ ಮೋಸದಾಟ ನಡೆಯುತ್ತಿದ್ದರೆ ಅದು “ಆನ್‌ಲೈನ್” ಪಂದ್ಯಾವಳಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಭಿಪ್ರಾಯಪಟ್ಟರು.
ಆನ್‌ಲೈನ್ ಸ್ಪರ್ಧೆ ಎಂಬುದು ಹೊಸ ಕ್ಷೇತ್ರವಾಗಿದೆ. ಹೀಗಾಗಿ ಖಂಡಿತವಾಗಿಯೂ ವಂಚನೆಯ ಸಾಧ್ಯತೆ ಎಂದು ನಮಗೆ ತಿಳಿದಿದೆ. ಇದು ಚೆಸ್ ಸ್ಪರ್ಧೆ ಮೇಲಿನ ಆತಂಕ ಕೂಡ ಹೌದು. ಆದರೆ ಇದು ವ್ಯಾಪಕವಾಗಿಲ್ಲ ಎಂಬುದು ನಂಬುತ್ತೇನೆ ಎಂದು ಮಾಜಿ ಗ್ರ್ಯಾಂಡ್ ಮಾಸ್ಟರ್ ತಿಳಿಸಿದರು.
ಆಫ್ಲೈನ್ನಲ್ಲಿ ವಂಚನೆಗಳಾಗುತ್ತಿಲ್ಲ ಎಂದೇ ಭಾವಿಸುತ್ತೇನೆ. ಆದರೆ ಆನ್‌ಲೈನ್‌ನಲ್ಲಿ ವಂಚನೆಯ ಶೇಕಡಾವಾರು ನನಗೆ ತಿಳಿದಿಲ್ಲ. ಆದರೆ ಅದು ಅತಿರೇಕವಾಗಿಲ್ಲ ಎಂಬ ನಂಬಿಕೆಯಿದೆ. ಏಕೆಂದರೆ ಲಕ್ಷಾಂತರ ಮಂದಿ ಆನ್‌ಲೈನ್‌ನಲ್ಲಿ ಆಡುತ್ತಿದ್ದಾರೆ. ಆದರೆ ಇಂತಹ, ಸಮಸ್ಯೆಯನ್ನು ನಿರ್ಲಕ್ಷ್ಯಸುವ ಬದಲು ಮುಂಚಿತವಾಗಿ ಪರಿಹರಿಸುವುದು ಉತ್ತಮ ಎಂದು ವಿಶ್ವನಾಥನ್ ಆನಂದ್ ಅಭಿಪ್ರಾಯಪಟ್ಟರು.
ಇದೇ ವೇಳೆ ಚೆಸ್‌ನಲ್ಲಿ ತಂತ್ರಜ್ಞಾನದ ಅಳವಡಿಕೆ ಬಗ್ಗೆ ಮಾತನಾಡಿದ ಆನಂದ್, ತಂತ್ರಜ್ಞಾನವು ವಿಕಸನಗೊಳ್ಳುತ್ತಲೇ ಇರುವುದರಿಂದ ಆನ್‌ಲೈನ್ ವಂಚನೆಯನ್ನು ಎಂದಿಗೂ ಪರಿಹರಿಸಲು ಸಾಧ್ಯವಾಗುವುದಿಲ್ಲ. ಆದರೆ ಅದಕ್ಕೆ ತಂತ್ರಜ್ಞಾನದ ಮೂಲಕವೇ ಅದಕ್ಕೊಂದು ಚೌಕಟ್ಟು ಹೊಂದುವುದು ತುಂಬಾ ಮುಖ್ಯ. ಈ ಮೂಲಕ ಮೋಸದಾಟದ ವಿರುದ್ಧ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸಬಹುದು ಎಂದರು.
ಸದ್ಯ ಕಾರ್ಲ್‌ಸೆನ್-ನೀಮನ್ ನಡುವಣ ಸ್ಪರ್ಧೆಯ ವಿಶ್ವ FIDE ನ ಫೇರ್ ಪ್ಲೇ ಕಮಿಷನ್‌ನಿಂದ ತನಿಖೆಗೆ ಒಳಪಟ್ಟಿದೆ. ಏಕೆಂದರೆ ವಿಶ್ವ ಚಾಂಪಿಯನ್ ಪುರಾವೆಗಳಿಲ್ಲದೆ ಆರೋಪ ಮಾಡಿದ್ದಕ್ಕಾಗಿ ಅಮಾನತುಗೊಳಿಸುವ ಅಪಾಯವಿದೆ. ಕಾರ್ಲ್‌ಸೆನ್ ವಿರುದ್ಧ USD 100 ಮಿಲಿಯನ್ ಮೊಕದ್ದಮೆಯನ್ನು ಹೂಡಿರುವ ನೀಮನ್ ತಿಳಿಸಿದ್ದಾರೆ. ಒಂದು ವೇಳೆ ವಂಚನೆಯ ಬಗ್ಗೆ ಪುರಾವೆಗಳು ಕಂಡುಬಂದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಈ ವಿಷಯವನ್ನು ಪರಿಶೀಲಿಸಲು ನಾವು ಆಯೋಗವನ್ನು ಹೊಂದಿದ್ದೇವೆ. ಆದರೆ ಇದನ್ನು ಸಾವಿರಾರು ಪಂದ್ಯಾವಳಿಗಳಲ್ಲಿ ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ. ಅಂತಹ ತಪಾಸಣೆಯ ಮೂಲಕ ಕ್ರೀಡೆಯ ಮೇಲಿನ ಅಪನಂಬಿಕೆಯನ್ನು ಕೂಡ ಹೋಗಲಾಡಿಸಬಹುದು ಎಂದು ವಿಶ್ವನಾಥನ್ ಆನಂದ್ ತಿಳಿಸಿದರು.
ಇದೇ ವೇಳೆ ಭಾರತೀಯ ಯುವ ಚೆಸ್ ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಐದು ಬಾರಿಯ ಗ್ರ್ಯಾಂಡ್ ಮಾಸ್ಟರ್ ಆನಂದ್, ಡಿ ಗುಕೇಶ್, ಅರ್ಜುನ್ ಎರಿಗೈಸಿ ಮತ್ತು ಆರ್ ಪ್ರಗ್ನಾನಂದ ಹದಿಹರೆಯದ ಮೂವರಲ್ಲಿ ಒಬ್ಬರು ಮುಂದಿನ ವಿಶ್ವ ಚಾಂಪಿಯನ್ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.