Updated on: Nov 30, 2022 | 9:24 PM
ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡದ ಯುವ ಬ್ಯಾಟ್ಸ್ಮನ್ ಇಬ್ರಾಹಿಂ ಝದ್ರಾನ್ ಭರ್ಜರಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಲಂಕಾದ ಪಲ್ಲೇಕಲ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಮೊದಲು ಬ್ಯಾಟ್ ಮಾಡಿತು.
ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಝದ್ರಾನ್ ಅತ್ಯುತ್ತಮ ಇನಿಂಗ್ಸ್ ಆಡಿದರು. ಆರಂಭದಿಂದಲೇ ಲಂಕಾ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ 20 ವರ್ಷದ ಯುವ ಬ್ಯಾಟರ್ ಆಕರ್ಷಕ ಬೌಂಡರಿಗಳನ್ನು ಬಾರಿಸುವ ಮೂಲಕ ಗಮನ ಸೆಳೆದರು.
ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಇಬ್ರಾಹಿಂ ನೂರು ಎಸೆತಗಳಲ್ಲಿ ಶತಕ ಪೂರೈಸಿದರು. ವಿಶೇಷ ಎಂದರೆ ಕೇವಲ 8 ಏಕದಿನ ಪಂದ್ಯಗಳನ್ನಾಡಿರುವ ಝದ್ರಾನ್ ಅವರು ಮೂರನೇ ಶತಕವಾಗಿದೆ. ಸೆಂಚುರಿ ಬಳಿಕ ಬ್ಯಾಟಿಂಗ್ ವೇಗ ಹೆಚ್ಚಿಸಿಕೊಂಡ ಅಫ್ಘಾನ್ ಬ್ಯಾಟರ್ ಲಂಕಾ ಬೌಲರ್ಗಳ ಬೆಂಡೆತ್ತಿದರು.
ಅದರಂತೆ 138 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 162 ರನ್ ಚಚ್ಚಿದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅಫ್ಘಾನ್ ಪರ ಅತ್ಯಧಿಕ ರನ್ ಕಲೆಹಾಕಿದ ವಿಶೇಷ ದಾಖಲೆಯನ್ನು ಕೂಡ ಇಬ್ರಾಹಿಂ ಝದ್ರಾನ್ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ದಾಖಲೆ ಮೊಹಮ್ಮದ್ ಶೆಹಝಾದ್ ಹೆಸರಿನಲ್ಲಿತ್ತು. ಶೆಹಝಾದ್ 2015 ರಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 131 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 162 ರನ್ ಬಾರಿಸುವ ಮೂಲಕ ಇಬ್ರಾಹಿಂ ಝದ್ರಾನ್ ಅಫ್ಘಾನ್ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ.