Chess Olympiad 2024: ಟ್ರೋಫಿ ಗೆದ್ದು ರೋಹಿತ್ ಶರ್ಮಾ ಸ್ಟೈಲ್ನಲ್ಲಿ ಸಂಭ್ರಮಿಸಿದ ಭಾರತೀಯ ಚೆಸ್ ಚತುರರು
Chess Olympiad 2024: ಚೆಸ್ ಒಲಿಂಪಿಯಾಡ್ನ ಮುಕ್ತ ವಿಭಾಗದ ಫೈನಲ್ನಲ್ಲಿ ಭಾರತ ಪುರುಷರ ತಂಡವು 3.5-0.5 ಅಂತರದಿಂದ ಸ್ಲೊವೇನಿಯಾ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಮತ್ತೊಂದೆಡೆ ಮಹಿಳಾ ತಂಡವು ಅಜರ್‌ಬೈಜಾನ್ ತಂಡವನ್ನು 3.5-0.5 ರಿಂದ ಸೋಲಿಸಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.
ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ಚೆಸ್ ಒಲಿಂಪಿಯಾಡ್ನಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪುರುಷ ಮತ್ತು ಮಹಿಳಾ ಮುಕ್ತ ವಿಭಾಗದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ಡಿ.ಗುಕೇಶ್, ಆರ್.ಪ್ರಜ್ಞಾನಂದ, ಅರ್ಜುನ್ ಎರಿಗೇಸಿ 3-0 ಮುನ್ನಡೆ ತರುವ ಚಿನ್ನದ ಪದಕವನ್ನು ಖಚಿತಪಡಿಸಿದ್ದರು. ಇನ್ನು ಅಂತಿಮ ಸುತ್ತಿನಲ್ಲಿ ವಿದಿತ್ ಅವರು ಪಂದ್ಯವನ್ನು ಡ್ರಾದೊಂದಿಗೆ ಕೊನೆಗೊಳಿಸಿದರು. ಈ ಮೂಲಕ ಭಾರತ ಪುರುಷರ ತಂಡ ಸ್ಲೊವೇನಿಯಾವನ್ನು 3.5-0.5 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.
ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಿದ್ದ ಹರಿಕಾ ದ್ರೋಣವಲ್ಲಿ, ಆರ್ ವೈಶಾಲಿ, ದಿವ್ಯಾ ದೇಶಮುಖ್, ವಾಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್‌ದೇವ್ ತಂಡವು ಅಜರ್‌ಬೈಜಾನ್ ತಂಡವನ್ನು 3.5-0.5 ರಿಂದ ಸೋಲಿಸಿ ಚಿನ್ನ ಗೆದ್ದರು. ಈ ಪದಕಗಳೊಂದಿಗೆ ಚಾಂಪಿಯನ್ಸ್ ಟ್ರೋಫಿ ಪಡೆದ ಭಾರತೀಯ ಚೆಸ್ ಚತುರರು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಶೈಲಿಯಲ್ಲಿ ಪ್ರಶಸ್ತಿಯನ್ನು ಎತ್ತಿ ಹಿಡಿದದ್ದು ವಿಶೇಷವಾಗಿತ್ತು.
2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸ್ಲೋ ವಾಕಿಂಗ್ನೊಂದಿಗೆ ಟ್ರೋಫಿಯನ್ನು ಸ್ವೀಕರಿಸಿದ್ದರು. ಇದೇ ಶೈಲಿಯಲ್ಲಿ ಡಿ ಗುಕೇಶ್ ಮತ್ತು ತಾನಿಯಾ ಸಚ್‌ದೇವ್ ಟ್ರೋಫಿಯೊಂದಿಗೆ ಆಗಮಿಸಿ ಸಂಭ್ರಮಿಸಿದರು. ಇದೀಗ ಈ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ಪಡೆದುಕೊಳ್ಳುತ್ತಿದೆ.