ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತದ ಪದಕದ ಬೇಟೆ ಮುಂದುವರೆದಿದೆ. ಈವರೆಗೆ ಒಟ್ಟು 40 ಪದಕಗಳನ್ನು ಬಾಜಿಕೊಂಡಿದೆ. ಇದರಲ್ಲಿ ಹದಿಮೂರು ಚಿನ್ನ, ಹನ್ನೊಂದು ಬೆಳ್ಳಿ ಹಾಗೂ ಹದಿನಾರು ಕಂಚು ಪಡೆದುಕೊಂಡಿದೆ. ಭಾರತಕ್ಕೆ ಇದುವರೆಗೆ ಬಂದಿರುವ 40 ಪದಕಗಳ ಪೈಕಿ 12 ಕುಸ್ತಿಯಿಂದಾದರೆ, 10 ಪದಕಗಳು ವೇಟ್ ಲಿಫ್ಟಿಂಗ್ ನಿಂದ ಬಂದಿದೆ. ಮೀರಾಬಾಯಿ ಚಾನು ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ಕೊನೆಯದಾಗಿ ಶನಿವಾರದ ಅಂತ್ಯಕ್ಕೆ ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಆಟಗಾರ್ತಿ ಭವಿನಾ ಪಟೇಲ್ (Bhavina Patel) ಬಂಗಾರ ಗೆದ್ದ ಸಾಧನೆ ಮಾಡಿದರು. ಈ ಮೂಲಕ ಭಾರತ 13 ಚಿನ್ನದ (Gold) ಪದಕ ಬಾಜಿಕೊಂಡಿತು.
ಕುಸ್ತಿಯಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕ ಮೂಡಿಬಂತು. ಆರು ಚಿನ್ನ, ಒಂದು ಬೆಳ್ಳಿ ಮತ್ತು ಐದು ಕಂಚು ಕುಸ್ತಿ ವಿಭಾಗದಿಂದ ಬಂದಿದೆ. ಭಾರತದ ಪುರುಷ ಕುಸ್ತಿಪಟು ನವೀನ್ 74 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ತಾಹಿರ್ ಅವರನ್ನು ಸೋಲಿಸಿ ಪದಕ ಬಾಜಿಕೊಂಡರಿ. ವಿನೇಶ್ ಫೋಗಟ್ ಕೂಡ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅನುಭವಿ ಕುಸ್ತಿಪಟು ವಿನೇಶ್ ಅವರು ನಾರ್ಡಿಕ್ ಮಾದರಿಯಿಂದ ಈ ವಿಭಾಗದ ಎಲ್ಲ ಮೂರು ಪಂದ್ಯಗಳನ್ನು ಗೆದ್ದರು. ಸತತ ಮೂರನೇ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅದ್ಭುತ ಹ್ಯಾಟ್ರಿಕ್ ಸಾಧನೆ ಮಾಡಿದರು.
ಇನ್ನು ರವಿ ದಹಿಯಾ ಕಾಮನ್‌ವೆಲ್ತ್ ಗೇಮ್ಸ್ ಪುರುಷರ 57 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ರವಿ ಅವರು ನೈಜೀರಿಯಾ ಆಟಗಾರನನ್ನು ತಾಂತ್ರಿಕ ದಕ್ಷತೆಯ ಆಧಾರದ ಮೇಲೆ ಸೋಲಿಸಿ ಪದಕ ಗೆದ್ದರು. ಈ ಪಂದ್ಯದಲ್ಲಿ ರವಿ 10-0 ಅಂತರದಿಂದ ಗೆದ್ದರು. ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ 50 ಕೆಜಿ ತೂಕ ವಿಭಾಗದಲ್ಲಿ ಸ್ಕಾಟಿಷ್ ಕುಸ್ತಿಪಟುವನ್ನು 12-2 ರಿಂದ ತಾಂತ್ರಿಕ ದಕ್ಷತೆಯಲ್ಲಿ ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದರು.
ಇತ್ತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಭಾರತ ಪುರುಷರ ಹಾಕಿ ತಂಡ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಬರ್ಮಿಂಗ್ಹ್ಯಾಮ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ರೋಚಕ ಜಯ ಸಾಧಿಸಿತು. ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಕೂಡ ಪದಕ ಖಚಿತವಾಗಿದೆ. ಇಂಗ್ಲೆಂಡ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಹರ್ಮನ್ ಪಡೆ 4 ರನ್ಗಳ ರೋಚಕ ಜಯ ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ.
Published On - 10:27 am, Sun, 7 August 22