CWG 2022 Hockey: ಕೆನಡಾ ವಿರುದ್ಧ ಭಾರತ ಪುರುಷ ಹಾಕಿ ತಂಡಕ್ಕೆ 8-0 ಗೋಲುಗಳ ಅದ್ಭುತ ಜಯ

| Updated By: ಪೃಥ್ವಿಶಂಕರ

Updated on: Aug 03, 2022 | 11:51 PM

CWG 2022 Hockey: ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ನಂತರ, ಪುರುಷರ ತಂಡವು ಕೆನಡಾವನ್ನು ಸೋಲಿಸುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.

CWG 2022 Hockey: ಕೆನಡಾ ವಿರುದ್ಧ ಭಾರತ ಪುರುಷ ಹಾಕಿ ತಂಡಕ್ಕೆ 8-0 ಗೋಲುಗಳ ಅದ್ಭುತ ಜಯ
Follow us on

ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ (Indian women’s hockey) ನಂತರ, ಪುರುಷರ ತಂಡವು ಕೆನಡಾವನ್ನು ಸೋಲಿಸುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಮಹಿಳಾ ತಂಡವು ಸೆಮಿಫೈನಲ್ ತಲುಪಿದ ಕೆಲವೇ ಗಂಟೆಗಳಲ್ಲಿ, ಭಾರತ ಪುರುಷರ ತಂಡ ಕೆನಡಾ ವಿರುದ್ಧ 8-0 ಅಂತರದ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳಿಂದ 7 ಅಂಕ ಗಳಿಸಿದೆ. ಈ ಹಿಂದೆ ಭಾರತೀಯ ಪುರುಷರ ಹಾಕಿ ತಂಡವು 2019 ರಲ್ಲಿ ನಡೆದ ಸುಲ್ತಾನ್ ಅಜ್ಲಾನ್ ಷಾ ಕಪ್‌ನಲ್ಲಿ ಕೊನೆಯ ಬಾರಿಗೆ ಕೆನಡಾವನ್ನು ಎದುರಿಸಿತು. ಅಲ್ಲಿ ಭಾರತದ ಪುರುಷರ ಹಾಕಿ ತಂಡ ಕೆನಡಾವನ್ನು 7-3 ರಲ್ಲಿ ಸೋಲಿಸಿ ಅದ್ಭುತ ಜಯಬೇರಿ ಬಾರಿಸಿತ್ತು.

ಮೊದಲ ಕ್ವಾರ್ಟರ್‌ನಲ್ಲಿ ಭಾರತ ತನ್ನ ಮೂರನೇ ಪೆನಾಲ್ಟಿ ಕಾರ್ನರ್‌ನಿಂದ ಗೋಲು ಗಳಿಸಿತು. ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಡ್ರ್ಯಾಗ್ ಫ್ಲಿಕ್ ಮೂಲಕ ಗೋಲು ಗಳಿಸಿದರು. ಅಮಿತ್ ರೋಹಿದಾಸ್ ಅವರ ಬಲಿಷ್ಠ ಶಾಟ್ ಕೆನಡಾದ ರಕ್ಷಣಾ ವಿಭಾಗವನ್ನು ಮುರಿಯುವ ಮೂಲಕ ಭಾರತ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಲಲಿತ್ ಉಪಾಧ್ಯಾಯ ಅವರು ಕ್ವಾರ್ಟರ್ 2 ರಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ 4-0 ಮುನ್ನಡೆ ನೀಡಿದರು.

ಕಳೆದ ಕೆಲವು ವರ್ಷಗಳಲ್ಲಿ ಭಾರತದ ಪುರುಷರ ಹಾಕಿ ತಂಡ

ಕಳೆದ ವರ್ಷ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಐತಿಹಾಸಿಕ ಕಂಚಿನ ಪದಕ ಗೆದ್ದುಕೊಂಡಿತ್ತು.
ಸೆಮಿಸ್‌ನಲ್ಲಿ ಬೆಲ್ಜಿಯಂ ವಿರುದ್ಧ ಸೋತ ನಂತರ ಭಾರತ ತನ್ನ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿತು.
ಅದರ ನಂತರ, 2022 ರ ಏಷ್ಯಾಕಪ್‌ನಲ್ಲಿ ಭಾರತ ಕಂಚಿನ ಪದಕವನ್ನು ಪಡೆದುಕೊಂಡಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ 1-0 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತು. ದಕ್ಷಿಣ ಕೊರಿಯಾ ಚಿನ್ನ ಗೆದ್ದಿತು.

ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಒಟ್ಟಾರೆ ದಾಖಲೆ

ಹಾಕಿಯನ್ನು ಮೊದಲು 1998 ಆವೃತ್ತಿಯಲ್ಲಿ CWG ಯಲ್ಲಿ ಆಡಲಾಯಿತು ಮತ್ತು ಅದು ಪ್ರಮುಖ ಕ್ರೀಡಾ ಪೋಸ್ಟ್ ಆಯಿತು. ಬಳಿಕ ಭಾರತ 1998 ರಲ್ಲಿ ಕಂಚಿನ ಪದಕದ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ನಾಲ್ಕನೇ ಸ್ಥಾನ ಗಳಿಸಿತು. ಆದರೆ ಭಾರತ 2002 ರಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿಲ್ಲ ಮತ್ತು 2006 ರಲ್ಲಿ ಆರನೇ ಸ್ಥಾನವನ್ನು ಗಳಿಸಿತು. ಆನಂತರ 2018 ರ ಆವೃತ್ತಿಯಲ್ಲಿ, ಭಾರತ ನಾಲ್ಕನೇ ಸ್ಥಾನವನ್ನು ಗಳಿಸಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಸೋಲನುಭವಿಸಿತ್ತು.

Published On - 10:49 pm, Wed, 3 August 22