CWG 2022: ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಶರತ್- ಶ್ರೀಜಾ ಜೋಡಿ

| Updated By: ಪೃಥ್ವಿಶಂಕರ

Updated on: Aug 08, 2022 | 8:00 AM

CWG 2022: ಭಾರತದ ಲೆಜೆಂಡರಿ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಮತ್ತೊಂದು ಚಿನ್ನದ ಪದಕವನ್ನು ದೇಶದ ಖಾತೆಗೆ ಹಾಕಿದ್ದಾರೆ. ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಹಿರಿಯ ಆಟಗಾರ ಶರತ್ ಅವರು ಯುವ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ಚಿನ್ನದ ಪದಕ ಗೆದ್ದರು.

CWG 2022: ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಶರತ್- ಶ್ರೀಜಾ ಜೋಡಿ
Follow us on

ಭಾರತದ ಲೆಜೆಂಡರಿ ಟೇಬಲ್ ಟೆನಿಸ್ ((Table Tennis)) ಆಟಗಾರ ಅಚಂತಾ ಶರತ್ ಕಮಲ್ ಮತ್ತೊಂದು ಚಿನ್ನದ ಪದಕವನ್ನು ದೇಶದ ಖಾತೆಗೆ ಹಾಕಿದ್ದಾರೆ. ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಹಿರಿಯ ಆಟಗಾರ ಶರತ್ ಅವರು ಯುವ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ಚಿನ್ನದ ಪದಕ ಗೆದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಭಾನುವಾರ ಭಾರತಕ್ಕೆ ಉತ್ತಮ ದಿನವಾಗಿತ್ತು. ಭಾನುವಾರ ಭಾರತಕ್ಕೆ ಪದಕಗಳು ಲಭಿಸಿದ್ದು, ಕ್ರಿಕೆಟ್, ಕುಸ್ತಿ, ಬಾಕ್ಸಿಂಗ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಅಥ್ಲೀಟ್‌ಗಳು ಅಮೋಘ ಪ್ರದರ್ಶನ ನೀಡಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ತಂಡ ಪದಕಗಳ ಸಂಖ್ಯೆಯನ್ನು 51ಕ್ಕೆ ಏರಿಸಿಕೊಂಡಿದೆ.

ಕೆಟ್ಟ ಆರಂಭದ ನಂತರ ಉತ್ತಮ ಅಂತ್ಯ

ಭಾನುವಾರ ನಡೆದ ಈ ಫೈನಲ್‌ಗೂ ಮುನ್ನ ಶರತ್ ಮತ್ತು ಶ್ರೀಜಾ ಪ್ರತ್ಯೇಕ ಪಂದ್ಯಗಳನ್ನು ಆಡಿದ್ದರು. ಕಂಚಿನ ಪದಕದ ಪಂದ್ಯವನ್ನು ಆಡಿದ ಶ್ರೀಜಾ, ಆಸ್ಟ್ರೇಲಿಯಾದ ಎದುರು 3-4 ಅಂತರದಲ್ಲಿ ಸೋಲನ್ನು ಎದುರಿಸಬೇಕಾಯಿತು. ಮತ್ತೊಂದೆಡೆ, ಶರತ್ ಕಮಲ್ ಈ ಹಿಂದೆ ಪುರುಷರ ಡಬಲ್ಸ್‌ನಲ್ಲಿ ಸತ್ಯನ್ ಅವರೊಂದಿಗೆ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಆದಾಗ್ಯೂ, ನಂತರ ಅವರು ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಟಿಕೆಟ್ ಕಾಯ್ದಿರಿಸಿದರು.

CWG 2022 ರಲ್ಲಿ ಭಾರತಕ್ಕೆ ಎರಡನೇ ಚಿನ್ನ

ತಮ್ಮ ಐದನೇ ಕಾಮನ್​ವೆಲ್ತ್​ನಲ್ಲಿ, ಮೊದಲ ಬಾರಿಗೆ ಗೇಮ್ಸ್‌ನಲ್ಲಿ ಜೊತೆಯಾಗಿ ಆಡಿದ ಅಚಂತಾ ಮತ್ತು ಶ್ರೀಜಾ ಅವರು ಮಲೇಷ್ಯಾದ ಜಾವೆನ್ ಚುಂಗ್ ಮತ್ತು ಕರೆನ್ ಲೇನ್ ಅವರನ್ನು 11-4, 9-11, 11-5, 11-6 ರಿಂದ ಸೋಲಿಸಿ,ಟೇಬಲ್ ಟೆನಿಸ್​ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ನೀಡಿದರು. ಇದಕ್ಕೂ ಮುನ್ನ ಶರತ್ ಅವರು ಜಿ ಸತ್ಯನ್, ಹರ್ಮೀತ್ ದೇಸಾಯಿ ಮತ್ತು ಸನಿಲ್ ಶೆಟ್ಟಿ ಅವರೊಂದಿಗೆ ಪುರುಷರ ಡಬಲ್ಸ್ ಚಿನ್ನದ ಪದಕವನ್ನು ಗೆದ್ದಿದ್ದರು.

2006 ರ ಮೆಲ್ಬೋರ್ನ್ ಕ್ರೀಡಾಕೂಟದಲ್ಲಿ ಚೊಚ್ಚಲ ಪ್ರವೇಶ ಮಾಡಿದ ಶರತ್ ಅವರು ತಮ್ಮ ಆರನೇ ಕಾಮನ್​ವೆಲ್ತ್ ಗೇಮ್ಸ್​ ಚಿನ್ನದ ಪದಕ ಮತ್ತು ಒಟ್ಟಾರೆ 12 ನೇ ಪದಕವನ್ನು ತಮ್ಮದಾಗಿಸಿಕೊಂಡರು. ಇದೀಗ ಅವರಿಗೆ ಮತ್ತೊಂದು ಚಿನ್ನ ಗೆಲ್ಲುವ ಅವಕಾಶ ಸಿಕ್ಕಿದೆ.

ಗೋಲ್ಡನ್ ಹ್ಯಾಟ್ರಿಕ್?

ಭಾರತದ ಅತ್ಯಂತ ಯಶಸ್ವಿ ಪುರುಷ ಟೇಬಲ್ ಟೆನಿಸ್ ಆಟಗಾರ ಶರತ್ ಈಗ ಆಗಸ್ಟ್ 8 ರ ಸೋಮವಾರದಂದು ಪಂದ್ಯಗಳ ಕೊನೆಯ ದಿನದ ಪುರುಷರ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಲಿದ್ದಾರೆ. 2006 ರಲ್ಲಿ ತನ್ನ ಮೊದಲ ಪಂದ್ಯಗಳಲ್ಲಿ, ಶರತ್ ಪುರುಷರ ಸಿಂಗಲ್ಸ್​ನಲ್ಲಿ ಚಿನ್ನವನ್ನು ಗೆದ್ದಿದ್ದರು. ಅಂದಿನಿಂದ, ಅವರು ಮೊದಲ ಬಾರಿಗೆ ಫೈನಲ್‌ಗೆ ತಲುಪಿದ್ದು, ಈಗ ಈ ಬಾರಿಯ ಗೇಮ್ಸ್ ಅವರ ಗೋಲ್ಡನ್ ಹ್ಯಾಟ್ರಿಕ್ ಪೂರ್ಣಗೊಳಿಸುವ ಸಮೀಪದಲ್ಲಿದೆ. ಕಾಮನ್​ವೆಲ್ತ್​ನಲ್ಲಿ ಅಚಂತಾ ಅವರು ಇದುವರೆಗೆ 6 ಚಿನ್ನ, 3 ಬೆಳ್ಳಿ ಮತ್ತು 3 ಕಂಚವಿನ ಪದಕವನ್ನು ಗೆದ್ದಿದ್ದಾರೆ.

Published On - 1:09 am, Mon, 8 August 22