Copa America Final: ಚಾಂಪಿಯನ್ ಪಟ್ಟಕ್ಕೇರಿ ದಾಖಲೆ ನಿರ್ಮಿಸಿದ ಅರ್ಜೆಂಟೀನಾ

Copa America Final: 2021 ರಲ್ಲಿ ಬ್ರೆಝಿಲ್ ತಂಡವನ್ನು ಮಣಿಸಿ ಅರ್ಜೆಂಟೀನಾ ಕೋಪಾ ಅಮೆರಿಕ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಅರ್ಜೆಂಟೀನಾ ಯಶಸ್ವಿಯಾಗಿದೆ. ಈ ಮೂಲಕ ಅರ್ಜೆಂಟೀನಾ ತಂಡವು 2021 ರ ಕೋಪಾ ಅಮೆರಿಕ, 2022ರ ಫಿಫಾ ವಿಶ್ವಕಪ್ ಹಾಗೂ 2024ರ ಕೋಪಾ ಅಮೆರಿಕ ಟ್ರೋಫಿ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.

Copa America Final: ಚಾಂಪಿಯನ್ ಪಟ್ಟಕ್ಕೇರಿ ದಾಖಲೆ ನಿರ್ಮಿಸಿದ ಅರ್ಜೆಂಟೀನಾ
Argentina

Updated on: Jul 15, 2024 | 10:49 AM

ಕೋಪಾ ಅಮೆರಿಕ (Copa America) ಫುಟ್​ಬಾಲ್​ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ತಂಡಕ್ಕೆ ಸೋಲುಣಿಸಿ ಅರ್ಜೆಂಟೀನಾ (Argentina)  ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದು ಕೂಡ 16ನೇ ಬಾರಿ ಎಂಬುದು ವಿಶೇಷ. ಫ್ಲೋರಿಡಾದ ಮಿಯಾಮಿ ಗಾರ್ಡನ್ಸ್‌ನಲ್ಲಿರುವ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ಕಂಡು ಬಂದಿತ್ತು.

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ಇನ್ನು ದ್ವಿತೀಯಾರ್ಧದ ಆರಂಭದಲ್ಲೇ ಗಾಯಗೊಂಡ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಮೈದಾನ ತೊರೆಯಬೇಕಾಗಿ ಬಂತು. ಪರಿಣಾಮ ದ್ವಿತೀಯಾರ್ಧದಲ್ಲೂ ಉಭಯ ತಂಡಗಳಿಂದ ಗೋಲು ದಾಖಲಾಗಲಿಲ್ಲ. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಹೆಚ್ಚುವರಿ ಸಮಯವನ್ನು ಬಳಸಿಕೊಳ್ಳಲಾಯಿತು.

ಹೆಚ್ಚುವರಿ ನಿಮಿಷದ ಮೊದಲಾರ್ಧದಲ್ಲಿ ರಣರೋಚಕ ಪೈಪೋಟಿ ಕಂಡು ಬಂದರೂ ಉಭಯ ತಂಡಗಳ ಆಟಗಾರರು ಗೋಲುಗಳಿಸುವಲ್ಲಿ ವಿಫಲರಾದರು. ಆದರೆ 112ನೇ ನಿಮಿಷದಲ್ಲಿ ಡಿ ಮರಿಯಾ ನೀಡಿದ ಅತ್ಯುತ್ತಮ ಪಾಸ್ ಅನ್ನು ಲೌಟಾರೊ ಮಾರ್ಟಿನೆಝ್ ಯಶಸ್ವಿಯಾದರು. ಈ ಗೋಲಿನೊಂದಿಗೆ ಅರ್ಜೆಂಟೀನಾ ತಂಡವು ಗೆಲುವನ್ನು ಖಚಿತಪಡಿಸಿಕೊಂಡಿತು.

ಅಲ್ಲದೆ ಅಂತಿಮ ಮೂರು ನಿಮಿಷಗಳಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡುವ ಮೂಲಕ ಫೈನಲ್ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡರು. ಈ ಗೆಲುವಿನೊಂದಿಗೆ ಅತೀ ಹೆಚ್ಚು ಬಾರಿ ಕೋಪಾ ಅಮೆರಿಕ ಟ್ರೋಫಿ ಗೆದ್ದ ದಾಖಲೆಯನ್ನು ಅರ್ಜೆಂಟೀನಾ ತನ್ನದಾಗಿಸಿಕೊಂಡಿದೆ.

 

ಅರ್ಜೆಂಟೀನಾ ತಂಡದ ಸಂಭ್ರಮ:

 

ದಾಖಲೆ ಬರೆದ ಅರ್ಜೆಂಟೀನಾ:

ಕೊಲಂಬಿಯಾ ವಿರುದ್ಧ ಗೆಲ್ಲುವ ಮೂಲಕ ಅರ್ಜೆಂಟೀನಾ ತಂಡವು ಕೋಪಾ ಅಮೆರಿಕ ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವೆಂಬ ದಾಖಲೆ ನಿರ್ಮಿಸಿದೆ. ಇದಕ್ಕೂ ಮುನ್ನ ಈ ದಾಖಲೆ ಉರುಗ್ವೆ ತಂಡದ ಹೆಸರಿನಲ್ಲಿತ್ತು. ಉರುಗ್ವೆ ತಂಡವು ಒಟ್ಟು 15 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಇದೀಗ 16ನೇ ಬಾರಿ ಕೋಪಾ ಅಮೆರಿಕ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಹೊಸ ಇತಿಹಾಸ ನಿರ್ಮಿಸಿದೆ.

ನಿವೃತ್ತಿ ಘೋಷಿಸಿದ ಡಿ ಮರಿಯಾ:

ಅರ್ಜೆಂಟೀನಾದ ಈ ಗೆಲುವಿನೊಂದಿಗೆ ಹಿರಿಯ ಆಟಗಾರ ಏಂಜಲ್ ಡಿ ಮರಿಯಾ ಅಂತಾರಾಷ್ಟ್ರೀಯ ಕೆರಿಯರ್​ಗೆ ಗುಡ್ ಬೈ ಹೇಳಿದ್ದಾರೆ. ಕಳೆದ ಫಿಫಾ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ 36 ವರ್ಷದ ಮರಿಯಾ ಇದೀಗ ಕೋಪ ಅಮೆರಿಕ ಟ್ರೋಫಿಯೊಂದಿಗೆ ನಿವೃತ್ತಿ ಘೋಷಿಸಿದ್ದಾರೆ.

ಇದನ್ನೂ ಓದಿ: Euro Cup 2024: ಆಂಗ್ಲರ ಕನಸು ನುಚ್ಚುನೂರು: ಸ್ಪೇನ್ ಯುರೋ ಕಪ್ ಚಾಂಪಿಯನ್ಸ್​

ಅರ್ಜೆಂಟೀನಾ ಪಾರುಪತ್ಯ:

1916 ರಲ್ಲಿ ಶುರುವಾದ ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡವು 16 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಪಾರುಪತ್ಯ ಮೆರೆದಿದೆ. ಇದೇ ವೇಳೆ ಉರುಗ್ವೆ 15 ಬಾರಿ ಟ್ರೋಫಿ ಎತ್ತಿ ಹಿಡಿದರೆ, ಬ್ರೆಝಿಲ್ 7 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಕೋಪಾ ಅಮೆರಿಕ ಟೂರ್ನಿಯಲ್ಲಿ ಈವರೆಗೆ ವಿಜೇತರಾದ ತಂಡಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…

 ಕೋಪಾ ಅಮೆರಿಕ ವಿಜೇತರ ಪಟ್ಟಿ
ವರ್ಷ ವಿಜೇತ ರನ್ನರ್ ಅಪ್
2024 ಅರ್ಜೆಂಟೀನಾ ಕೊಲಂಬಿಯಾ
2021 ಅರ್ಜೆಂಟೀನಾ ಬ್ರೆಝಿಲ್
2019 ಬ್ರೆಝಿಲ್ ಪೆರು
2016 ಚಿಲಿ ಅರ್ಜೆಂಟೀನಾ
2015 ಚಿಲಿ ಅರ್ಜೆಂಟೀನಾ
2011 ಉರುಗ್ವೆ ಪರಾಗ್ವೆ
2007 ಬ್ರೆಝಿಲ್ ಅರ್ಜೆಂಟೀನಾ
2004 ಬ್ರೆಝಿಲ್ ಅರ್ಜೆಂಟೀನಾ
2001 ಕೊಲಂಬಿಯಾ ಮೆಕ್ಸಿಕೋ
1999 ಬ್ರೆಝಿಲ್ ಉರುಗ್ವೆ
1997 ಬ್ರೆಝಿಲ್ ಬೊಲಿವಿಯಾ
1995 ಉರುಗ್ವೆ ಬ್ರೆಝಿಲ್
1993 ಅರ್ಜೆಂಟೀನಾ ಮೆಕ್ಸಿಕೋ
1991 ಅರ್ಜೆಂಟೀನಾ ಬ್ರೆಝಿಲ್
1989 ಬ್ರೆಝಿಲ್ ಉರುಗ್ವೆ
1987 ಉರುಗ್ವೆ ಚಿಲಿ
1983 ಉರುಗ್ವೆ ಬ್ರೆಝಿಲ್
1979 ಪರಾಗ್ವೆ ಚಿಲಿ
1975 ಪೆರು ಕೊಲಂಬಿಯಾ
1967 ಉರುಗ್ವೆ ಅರ್ಜೆಂಟೀನಾ
1963 ಬೊಲಿವಿಯಾ ಪರಾಗ್ವೆ
1959 ಉರುಗ್ವೆ ಅರ್ಜೆಂಟೀನಾ
1959 ಅರ್ಜೆಂಟೀನಾ ಬ್ರೆಝಿಲ್
1957 ಅರ್ಜೆಂಟೀನಾ ಬ್ರೆಝಿಲ್
1956 ಉರುಗ್ವೆ ಚಿಲಿ
1955 ಅರ್ಜೆಂಟೀನಾ ಚಿಲಿ
1953 ಪರಾಗ್ವೆ ಬ್ರೆಝಿಲ್
1949 ಬ್ರೆಝಿಲ್ ಪರಾಗ್ವೆ
1947 ಅರ್ಜೆಂಟೀನಾ ಪರಾಗ್ವೆ
1946 ಅರ್ಜೆಂಟೀನಾ ಬ್ರೆಝಿಲ್
1945 ಅರ್ಜೆಂಟೀನಾ ಬ್ರೆಝಿಲ್
1942 ಉರುಗ್ವೆ ಅರ್ಜೆಂಟೀನಾ
1941 ಅರ್ಜೆಂಟೀನಾ ಉರುಗ್ವೆ
1939 ಪೆರು ಉರುಗ್ವೆ
1937 ಅರ್ಜೆಂಟೀನಾ ಬ್ರೆಝಿಲ್
1935 ಉರುಗ್ವೆ ಅರ್ಜೆಂಟೀನಾ
1929 ಅರ್ಜೆಂಟೀನಾ ಪರಾಗ್ವೆ
1927 ಅರ್ಜೆಂಟೀನಾ ಉರುಗ್ವೆ
1926 ಉರುಗ್ವೆ ಅರ್ಜೆಂಟೀನಾ
1925 ಅರ್ಜೆಂಟೀನಾ ಬ್ರೆಝಿಲ್
1924 ಉರುಗ್ವೆ ಅರ್ಜೆಂಟೀನಾ
1923 ಉರುಗ್ವೆ ಅರ್ಜೆಂಟೀನಾ
1922 ಬ್ರೆಝಿಲ್ ಪರಾಗ್ವೆ
1921 ಅರ್ಜೆಂಟೀನಾ ಬ್ರೆಝಿಲ್
1920 ಉರುಗ್ವೆ ಅರ್ಜೆಂಟೀನಾ
1919 ಬ್ರೆಝಿಲ್ ಉರುಗ್ವೆ
1917 ಉರುಗ್ವೆ ಅರ್ಜೆಂಟೀನಾ
1916 ಉರುಗ್ವೆ ಅರ್ಜೆಂಟೀನಾ

 

Published On - 10:19 am, Mon, 15 July 24