ಟಿ20 ವಿಶ್ವಕಪ್ ಗೆದ್ದ ಬಳಿಕ ಎಲ್ಲರೂ ನನ್ನ ಮರೆತೇ ಬಿಟ್ಟರು: ಸೌರವ್ ಗಂಗೂಲಿ
Sourav Ganguly: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದ್ದರು. ಹಾಗೆಯೇ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾಗೆ ಕಪ್ತಾನನ ಪಟ್ಟ ನೀಡಲಾಗಿತ್ತು. ಇದೀಗ ದ್ರಾವಿಡ್-ರೋಹಿತ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ‘
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬಾರ್ಬಡೋಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೊಮ್ಮೆ ಟಿ20 ವಿಶ್ವಕಪ್ ಅನ್ನು ಎತ್ತಿ ಹಿಡಿಯಿತು. ಈ ಗೆಲುವಿಗೆ ಕಾರಣರಾದ ಹಲವರಿಗೆ ಶ್ರೇಯಸ್ಸು ನೀಡಲಾಗಿದೆ. ಆದರೆ ಎಲ್ಲೂ ಕೂಡ ಸೌರವ್ ಗಂಗೂಲಿ ಅವರ ಹೆಸರು ಕೇಳಿ ಬಂದಿಲ್ಲ ಎಂಬುದು ವಿಶೇಷ.
ಇದೀಗ ಈ ಬಗ್ಗೆ ಖುದ್ದು ಸೌರವ್ ಗಂಗೂಲಿಯೇ ಮಾತನಾಡಿದ್ದಾರೆ. ವಿಶ್ವಕಪ್ ಗೆಲುವಿನ ಎಲ್ಲರೂ ನನ್ನನ್ನು ಮರೆತರು ಎಂದಿದ್ದಾರೆ. ಹೀಗೆ ಹೇಳಲು ಮುಖ್ಯ ಕಾರಣ, ರೋಹಿತ್ ಶರ್ಮಾ ಅವರನ್ನು ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಯಕರಾಗಿ ನೇಮಿಸಿದಾದ ಕೇಳಿಬಂದ ಟೀಕೆಗಳು. ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ನೀಡಲಾಗಿತ್ತು. ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಸೌರವ್ ಗಂಗೂಲಿ.
ಇದರ ಬೆನ್ನಲ್ಲೇ ಗಂಗೂಲಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟೀಕಾ ಪ್ರಹಾರಗಳಾಗಿತ್ತು. ಆದರೆ ಇದೀಗ ಗಂಗೂಲಿಯ ನಿರ್ಧಾರ ಸರಿಯಾಗಿತ್ತು ಎಂಬುದು ಸಾಬೀತಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದುಕೊಂಡಿದೆ.
ಆದರೆ ಈ ವಿಶ್ವಕಪ್ ಗೆಲುವಿನೊಂದಿಗೆ ಎಲ್ಲರೂ ನನ್ನನ್ನು ಮರೆತಿದ್ದಾರೆ ಎಂದಿದ್ದಾರೆ ಸೌರವ್ ಗಂಗೂಲಿ. ನಾನು ರೋಹಿತ್ ಶರ್ಮಾ ಅವರನ್ನು ಭಾರತ ತಂಡದ ನಾಯಕನಾಗಿ ಮಾಡಿದಾಗ ಎಲ್ಲರೂ ನನ್ನನ್ನು ಟೀಕಿಸಿದ್ದರು. ಇದೀಗ ಅದೇ ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಆದರೀಗ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಮಾಡಿದ್ದು ನಾನು ಎಂಬುದನ್ನು ಎಲ್ಲರೂ ಮೆರತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಸೌರವ್ ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಈ ಸಂದರ್ಶನದ ತುಣುಕುಗಳು ವೈರಲ್ ಆಗುತ್ತಿದ್ದಂತೆ ಟಿ20 ವಿಶ್ವಕಪ್ ಗೆಲುವಿನ ಶ್ರೇಯಸ್ಸನ್ನು ಸೌರವ್ ಗಂಗೂಲಿಗೂ ನೀಡಬೇಕಿತ್ತು ಎಂಬ ವಾದಗಳನ್ನು ಕೆಲವರು ಮುಂದಿಟ್ಟಿದ್ದಾರೆ. ಏಕೆಂದರೆ ಗಂಗೂಲಿ ಸಾರಥ್ಯದಲ್ಲಿ ಬಿಸಿಸಿಐ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿತ್ತು.
ಅದು ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಿಸಿರುವುದಾಗಿರಲಿ, ರೋಹಿತ್ ಶರ್ಮಾಗೆ ನಾಯಕತ್ವ ವಹಿಸಿರುವುದಾಗಿರಲಿ. ಇವೆಲ್ಲದರ ಪ್ರತಿಫಲ ಇದೀಗ ಟಿ20 ವಿಶ್ವಕಪ್ ಮೂಲಕ ಭಾರತ ತಂಡಕ್ಕೆ ದಕ್ಕಿದೆ. ಹೀಗಾಗಿ ಟಿ20 ವಿಶ್ವಕಪ್ ಗೆಲುವಿನ ಶ್ರೇಯಸ್ಸು ಸೌರವ್ ಗಂಗೂಲಿ ಅವರಿಗೆ ಸಲ್ಲಬೇಕು ಎಂದು ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ.
Published On - 8:53 am, Mon, 15 July 24