Australia Squad: UK ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ವಿರುದ್ಧ 8 ಪಂದ್ಯಗಳ ಸರಣಿ ಆಡಲಿದೆ. ಈ ಸರಣಿಯಲ್ಲಿ ಮೊದಲು ಸ್ಕಾಟ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಹಾಗೂ 5 ಪಂದ್ಯಗಳ ಏಕದಿನ ಸರಣಿಗಳನ್ನಾಡಲಿದೆ. ಈ ಸರಣಿಗಾಗಿ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಬಲಿಷ್ಠ ಪಡೆಯನ್ನೇ ಘೋಷಿಸಿದೆ.
ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ವಿರುದ್ಧದ ಸರಣಿಗಳಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ಮತ್ತು ಟಿ20 ಸರಣಿಗಳಿಗಾಗಿ ಆಯ್ಕೆ ಮಾಡಲಾದ ಈ ತಂಡಗಳನ್ನು ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ. ಇನ್ನು ಟಿ20 ತಂಡದಲ್ಲಿ ಯುವ ಆಟಗಾರರಾದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಹಾಗೂ ಕೂಪರ್ ಕೊನೊಲಿಗೆ ಸ್ಥಾನ ನೀಡಲಾಗಿದೆ.
ಯುವ ಸ್ಪೋಟಕ ದಾಂಡಿಗ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಟಿ20 ಮತ್ತು ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿದ್ದು, ಹೀಗಾಗಿ ಮುಂಬರುವ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು. ಏಕೆಂದರೆ ತಂಡದ ಆರಂಭಿಕನಾಗಿದ್ದ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಜೇಕ್ ಫ್ರೇಸರ್ ಮೆಕ್ ಗುರ್ಕ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಟ್ರಾವಿಸ್ ಹೆಡ್ ಜೊತೆ ಮೆಕ್‌ಗುರ್ಕ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
ಗ್ಲೆನ್ ಮ್ಯಾಕ್ಸ್‌ವೆಲ್ ಔಟ್:
2023ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಪ್ಯಾಟ್ ಕಮಿನ್ಸ್ ಈ ಸರಣಿಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ಏಕದಿನ ತಂಡವನ್ನು ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಆದರೆ ಟಿ20 ತಂಡದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಇತ್ತೀಚೆಗೆ ಮುಗಿದ ಟಿ20 ವಿಶ್ವಕಪ್ನಲ್ಲಿ ಮ್ಯಾಕ್ಸಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಇದಾಗ್ಯೂ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್-ಸ್ಕಾಟ್ಲೆಂಡ್ ಸರಣಿಗಳಿಗೆ (ಯುನೈಟೆಡ್ ಕಿಂಗ್ಡಮ್ ಸರಣಿ) ಆಸ್ಟ್ರೇಲಿಯಾ ತಂಡ:
ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕ್ಯಾಮರೋನ್ ಗ್ರೀನ್, ಆರೋನ್ ಹಾರ್ಡಿ, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ಕಸ್ ಸ್ಟೊಯಿನಿಸ್.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಆಸ್ಟ್ರೇಲಿಯಾ ಏಕದಿನ ತಂಡ: ಮಿಚ್ ಮಾರ್ಷ್ (ನಾಯಕ), ಶಾನ್ ಅಬಾಟ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕ್ಯಾಮರೋನ್ ಗ್ರೀನ್, ಆರೋನ್ ಹಾರ್ಡಿ, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಾಬುಶೆನ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ಶಾರ್ಟ್ , ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ.