
ಟಿ20 ಇನಿಂಗ್ಸ್ ಮುಗಿಯಲು ಎಷ್ಟೊತ್ತು ಬೇಕು? ಈ ಪ್ರಶ್ನೆಗೆ ಸದ್ಯದ ಉತ್ತರ ಕೇವಲ 2 ಎಸೆತಗಳು. ಏಕೆಂದರೆ ರಾಜಸ್ಥಾನದಲ್ಲಿ ನಡೆದ ಮಹಿಳಾ ಟಿ20 ಪಂದ್ಯವೊಂದರ ಇನಿಂಗ್ಸ್ ಕೇವಲ 2 ಎಸೆತಗಳಲ್ಲಿ ಮುಗಿದಿದೆ. ಅಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಒಂದೇ ಒಂದು ರನ್ ಕಲೆಹಾಕಿರಲಿಲ್ಲ ಎಂಬುದು ಅಚ್ಚರಿ.
ರಾಜಸ್ಥಾನ್ ರಾಜ್ಯದ ಹಿರಿಯ ಮಹಿಳಾ ತಂಡಕ್ಕೆ ಸಂಭಾವ್ಯ ಆಟಗಾರ್ತಿಯರ ಆಯ್ಕೆಗಾಗಿ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಜೈಪುರ ಮತ್ತು ಉದಯಪುರ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಮಟ್ಟದ ಹಿರಿಯ ಮಹಿಳಾ ಟಿ20 ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಈ ಟಿ20 ಟೂರ್ನಿಯಲ್ಲಿ ಸಿಕಾರ್ ಮತ್ತು ಸಿರೋಹಿ ಜಿಲ್ಲೆಗಳ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿರೋಹಿ ತಂಡದ ಆಟಗಾರ್ತಿಯರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದ್ದರು. ಪರಿಣಾಮ ತಂಡದ ಖಾತೆ ತೆರೆಯುವ ಮುನ್ನವೇ 9 ವಿಕೆಟ್ಗಳು ಕಳೆದುಕೊಂಡಿತು. ಅಂದರೆ 9 ಬ್ಯಾಟರ್ಗಳು ಶೂನ್ಯಕ್ಕೆ ಔಟಾಗಿದ್ದರು.
ಇದಾದ ಬಳಿಕವಷ್ಟೇ ಸ್ಕೋರ್ ಬೋರ್ಡ್ ಓಪನ್ ಆಗಿದೆ. ಅದು ಸಹ ಎಕ್ಸ್ಟ್ರಾ ರನ್ ಮೂಲಕ. ಸಿಕಾರ್ ತಂಡದ ಬೌಲರ್ 4 ಎಕ್ಸ್ಟ್ರಾ ರನ್ಗಳನ್ನು ನೀಡಿದ್ದರು. ಇದಾಗ್ಯೂ ಕೊನೆಯ ಬ್ಯಾಟರ್ ರನ್ಗಳಿಸಿಲ್ಲ ಎಂಬುದು ವಿಶೇಷ.
ಅಂದರೆ ಸಿರೋಹಿ ತಂಡದ 10 ಬ್ಯಾಟರ್ಗಳು ಶೂನ್ಯಕ್ಕೆ ಔಟಾಗಿ ಪೆವಿಲಿಯನ್ಗೆ ಮರಳಿದ್ದರು. ಅದರಂತೆ ಸಿಕಾರ್ ತಂಡವು 5 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು 2 ಎಸೆತಗಳಲ್ಲಿ ಬೆನ್ನತ್ತುವ ಮೂಲಕ ಸಿಕಾರ್ ತಂಡ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ: ರನ್ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಡೇವಿಡ್ ವಾರ್ನರ್
ಇದೀಗ ಸಿರೋಹಿ-ಸಿಕಾರ್ ತಂಡಗಳ ನಡುವಣ ಪಂದ್ಯದ ಸ್ಕೋರ್ ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಂದ್ಯ ಆಯೋಜಿಸಿದ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಪ್ರತಿಭಾನ್ವೇಷಣಾ ಕಾರ್ಯಕ್ರಮವು ನಗೆಪಾಟಲಿಗೀಡಾಗಿದೆ.