ಐಸಿಸಿಯ ಮತ್ತೊಂದು ಪ್ರಶಸ್ತಿಗೆ ಗೆದ್ದ ಶುಭಮನ್ ಗಿಲ್, ಯಾರೂ ಮಾಡದ ಸಾಧನೆ ಮಾಡಿದ ಕ್ಯಾಪ್ಟನ್
ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರ ಪ್ರದರ್ಶನಕ್ಕೆ ಮತ್ತೊಂದು ಫಲ ಸಿಕ್ಕಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಿಲ್, ಆಂಡರ್ಸನ್, ತೆಂಡೂಲ್ಕರ್ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಗಿಲ್ ಮುಡಿಗೆ ಮತ್ತೊಂದು ಐಸಿಸಿ ಪ್ರಶಸ್ತಿ ಗರಿ ಸಂದಿದೆ. ಇದರೊಂದಿಗೆ ಐಸಿಸಿ ಈ ಪ್ರಶಸ್ತಿಯನ್ನು 4 ಬಾರಿ ತಮ್ಮದಾಗಿಸಿಕೊಂಡ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ (Shubman Gill) ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಐಸಿಸಿ ಜುಲೈ ತಿಂಗಳ ಆಟಗಾರ ಪ್ರಶಸ್ತಿಗೆ (ICC Month Award) ಭಾಜನರಾಗಿದ್ದಾರೆ. ಐಸಿಸಿ ಈ ಪ್ರಶಸ್ತಿಗೆ ಮೂವರು ಆಟಗಾರರನ್ನು ಆಯ್ಕೆ ಮಾಡಿತ್ತು. ಶುಭಮನ್ ಗಿಲ್ ಹೊರತುಪಡಿಸಿ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಿಯಾನ್ ಮುಲ್ಡರ್ ಸಹ ರೇಸ್ ನಲ್ಲಿದ್ದರು.ಆದರೆ, ಫೈನಲಿ ಶುಭಮನ್ ಗಿಲ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಈ ಸ್ಟಾರ್ ಆಟಗಾರರನ್ನು ಹಿಂದಿಕ್ಕಿ ಐಸಿಸಿ ಜುಲೈ ತಿಂಗಳ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಪುರಷರ ಕ್ರಿಕೆಟ್ ನಲ್ಲಿ ದಾಖಲೆಯ ನಾಲ್ಕನೇ ಬಾರಿ ಐಸಿಸಿ ತಿಂಗಳ ಪ್ರಶಸ್ತಿ ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಅಂತ್ಯಗೊಂಡ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ 25 ವರ್ಷದ ಶುಭಮನ್ ಗಿಲ್ ಅಮೋಘ ಪ್ರದರ್ಶನ ನೀಡಿದ್ದಾರೆ. ಜುಲೈನಲ್ಲಿ ಗಿಲ್ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ರನ್ ಹೊಳೆ ಹರಿಸಿದ್ದಾರೆ. ಜುಲೈ ತಿಂಗಳಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 94.50 ಸರಾಸರಿಯಲ್ಲಿ ಒಟ್ಟು 567 ರನ್ ಕಲೆ ಹಾಕಿದ್ದಾರೆ. ಅಲ್ಲದೇ ಆರು ಇನ್ನಿಂಗ್ಸ್ ಗಳಲ್ಲಿ ಒಂದು ದ್ವಿಶತಕ ಹಾಗೂ ಎರಡು ಶತಕಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ನಾಯಕತ್ವ ವಹಿಸಿದ ತಮ್ಮ ಮೊದಲ ಪ್ರವಾಸದಲ್ಲೇ ಗಿಲ್ ಯಶಸ್ಸು ಕಂಡಿದ್ದಾರೆ. ಹೀಗಾಗಿ ಜುಲೈ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಿಯಾನ್ ಮುಲ್ಡರ್ ಪೈಕಿ ಗಿಲ್ ಆಯ್ಕೆಯಾಗಿದ್ದಾರೆ.
ಇನ್ನು ಜುಲೈ ತಿಂಗಳ ಐಸಿಸಿ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಗಿಲ್, ಪ್ರಶಸ್ತಿಗೆ ಅರ್ಹವಾಗಿರುವುದು ತುಂಬಾ ಸಂತಸವಾಗಿದೆ. ಬರ್ಮಿಂಗ್ ಹ್ಯಾಮ್ ನಲ್ಲಿ ಗಳಿಸಿದ ದ್ವಿಶತಕ ನನ್ನ ಜೀವನ ಪರ್ಯಂತ ನೆನಪಿನಲ್ಲಿಕೊಳ್ಳುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
4ನೇ ಬಾರಿಗೆ ಐಸಿಸಿ ತಿಂಗಳ ಪ್ರಶಸ್ತಿಗೆ ಗಿಲ್ ಭಾಜನ
ಶುಭಮನ್ ಗಿಲ್ ಒಟ್ಟಾರೆಯಾಗಿ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕನೇ ಬಾರಿಗೆ ಐಸಿಸಿ ತಿಂಗಳ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಫೆಬ್ರವರಿ ತಿಂಗಳಲ್ಲಿ ಮತ್ತು 2023ರ ಜನವರಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲೂ ಐಸಿಸಿ ತಿಂಗಳ ಪ್ರಶಸ್ತಿಗೆ ಗಿಲ್ ಭಾಜನರಾಗಿದ್ದರು.
ಒಟ್ಟಾರೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಗಿಲ್, 75.40 ಸರಾಸರಿಯಲ್ಲಿ 754 ರನ್ ಪೇರಿಸಿದ್ದಾರೆ. ಈ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇನ್ನು ಸರಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 2-2ರ ಸಮಬಲ ಸಾಧಿಸಿತ್ತು. ಇದರೊಂದಿಗೆ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದ ಗಿಲ್, ಮೊದಲ ಪ್ರವಾಸದಲ್ಲೇ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
