T20 World Cup 2024: ಟಿ20 ವಿಶ್ವಕಪ್ನ 9ನೇ ಆವೃತ್ತಿಯ ಮುಕ್ತಾಯಕ್ಕೂ ಮುನ್ನವೇ 10ನೇ ಆವೃತ್ತಿಯ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ. ಅದೇನೆಂದರೆ ಮುಂಬರುವ ಟಿ20 ವಿಶ್ವಕಪ್ಗೆ 12 ತಂಡಗಳು ನೇರ ಅರ್ಹತೆ ಪಡೆದಿರುವುದು. ಅಂದರೆ 2026 ರಲ್ಲಿ ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ 12 ತಂಡಗಳು ಫೈನಲ್ ಆಗಿವೆ.
ಈ ಬಾರಿಯ ಟಿ20 ವಿಶ್ವಕಪ್ನ ಸೂಪರ್-8 ಹಂತಕ್ಕೇರಿದ 8 ತಂಡಗಳಿಗೆ ನೇರ ಅರ್ಹತೆ ಲಭಿಸಿದರೆ, ಇನ್ನುಳಿದ 4 ತಂಡಗಳನ್ನು ಐಸಿಸಿ ಟಿ20 ತಂಡಗಳ ಶ್ರೇಯಾಂಕಾದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.
ಅದರಂತೆ ಟಿ20 ವಿಶ್ವಕಪ್ನ ಮೊದಲ ಸುತ್ತಿನಲ್ಲೇ ಹೊರಬಿದ್ದಿರುವ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ಐಸಿಸಿ ಟಿ20 ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಮುಂಬರುವ ಟಿ20 ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಂಡಿದೆ.
ಇನ್ನು ಭಾರತ ಮತ್ತು ಶ್ರೀಲಂಕಾ ತಂಡವು ಆತಿಥ್ಯ ರಾಷ್ಟ್ರವಾಗಿರುವುದರಿಂದ 2026 ರ ಟಿ20 ವಿಶ್ವಕಪ್ಗೆ ಡೈರೆಕ್ಟ್ ಎಂಟ್ರಿಯಾಗಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿದು ಸೂಪರ್-8 ಹಂತಕ್ಕೇರಿರುವ ಯುಎಸ್ಎ ತಂಡವು ಮುಂಬರುವ ಟಿ20 ವಿಶ್ವಕಪ್ನಲ್ಲೂ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
2026ರ ಟಿ20 ವಿಶ್ವಕಪ್ನಲ್ಲೂ 20 ತಂಡಗಳು ಕಣಕ್ಕಿಳಿಯಲಿದ್ದು, ಇದೀಗ 12 ತಂಡಗಳು ಫೈನಲ್ ಆಗಿವೆ. ಇನ್ನುಳಿದ 8 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಈ ಸುತ್ತಿನ ಮೂಲಕ ಒಟ್ಟು 8 ತಂಡಗಳು ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಬಹುದು.
ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್
ಟಿ20 ವಿಶ್ವಕಪ್ 2026 ರ ಆಯೋಜನೆಯ ಹಕ್ಕನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಭಾರತೀಯ ಕ್ರಿಕೆಟ್ ಮಂಡಳಿ ಪಡೆದುಕೊಂಡಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್ ಅನ್ನು ಉಭಯ ದೇಶಗಳು ಜಂಟಿಯಾಗಿ ಆಯೋಜಿಸಲಿದೆ. ಅದರಂತೆ ಕೆಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದರೆ, ದ್ವಿತೀಯ ಸುತ್ತಿನ ಪಂದ್ಯಗಳಿಗೆ ಭಾರತ ಆತಿಥ್ಯವಹಿಸುವ ಸಾಧ್ಯತೆಯಿದೆ.
Published On - 10:47 am, Thu, 20 June 24