Ramandeep Singh: 2ನೇ ಬಾರಿ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿದ ರಮಣ್ದೀಪ್ ಸಿಂಗ್
Ramandeep Singh: ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ರಮಣ್ದೀಪ್ ಸಿಂಗ್ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನಡೆದ ಶೇರ್-ಎ-ಪಂಜಾಬ್ ಟಿ20 ಕಪ್‌ನಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿ ಸಂಚಲನ ಸೃಷ್ಟಿಸಿದ್ದರು. ಇದೀಗ ಮತ್ತೊಮ್ಮೆ 5 ಸಿಕ್ಸ್ಗಳೊಂದಿಗೆ ಅಬ್ಬರಿಸಿದ್ದಾರೆ.
ಪಂಜಾಬ್ನಲ್ಲಿ ನಡೆಯುತ್ತಿರುವ ಶೇರ್ ಇ ಪಂಜಾಬ್ ಟಿ20 ಕಪ್ ಟೂರ್ನಿಯ 20ನೇ ಪಂದ್ಯದಲ್ಲಿ ರಮಣ್ದೀಪ್ ಸಿಂಗ್ (Ramandeep Singh) ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟ್ರೈಡೆಂಟ್ ಸ್ಟಾಲಿಯನ್ಸ್ ಮತ್ತು ಜೆಕೆ ಸೂಪರ್ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿತ್ತು.
ಮಳೆಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಟ್ರೈಡೆಂಟ್ ಸ್ಟಾಲಿಯನ್ಸ್ ತಂಡದ ನಾಯಕ ಪ್ರಭ್ಸಿಮ್ರಾನ್ ಸಿಂಗ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. 13 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಟ್ರೈಡೆಂಟ್ ಸ್ಟಾಲಿಯನ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.
ಆರಂಭಿಕ ಮನ್ಪ್ರೀತ್ ಜೋಹಲ್ (4) ಹಾಗೂ ಪ್ರಭ್ಸಿಮ್ರಾನ್ ಸಿಂಗ್ (13) ಬೇಗನೆ ನಿರ್ಗಮಿಸಿದರೆ, ಅಭಯ್ ಚೌಧರಿ 23 ರನ್ಗಳಿಸಲು 33 ಎಸೆತಗಳನ್ನು ತೆಗೆದುಕೊಂಡಿದ್ದರು.
ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಮಣ್ದೀಪ್ ಸಿಂಗ್ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದರು. ಆದರೆ ಪಂದ್ಯದ 13ನೇ ಓವರ್ನಲ್ಲಿ ಅಕ್ಷರಶಃ ಅಬ್ಬರಿಸಿದರು.
ಸಾಹಿಲ್ ಖಾನ್ ಎಸೆದ 13ನೇ ಓವರ್ನ ಮೊದಲ ಎಸೆತದಲ್ಲಿ ರಮಣ್ದೀಪ್ ಸಿಂಗ್ ಯಾವುದೇ ರನ್ ಕಲೆಹಾಕಿರಲಿಲ್ಲ. ಆದರೆ ಆ ಬಳಿಕ ಮೂರು ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. ಇದಾದ ಬಳಿಕ ಸಾಹಿಲ್ ಖಾನ್ ಎರಡು ವೈಡ್ ಎಸೆದರು. 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು. ಆ ನಂತರ ಮತ್ತೆರಡು ವೈಡ್. ಇನ್ನು ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಮಣ್ದೀಪ್ ಸಿಂಗ್ 34 ರನ್ ಕಲೆಹಾಕಿದರು.
ರಮಣ್ದೀಪ್ ಸಿಂಗ್ರ (46) ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟ್ರೈಡೆಂಟ್ ಸ್ಟಾಲಿಯನ್ಸ್ ತಂಡವು 13 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿತು.
ಡಕ್ವರ್ತ್ ಲೂಯಿಸ್ ನಿಯಮದಂತೆ 114 ರನ್ಗಳ ಗುರಿ ಪಡೆದ ಜೆಕೆ ಸೂಪರ್ ಸ್ಟ್ರೈಕರ್ಸ್ ಪರ ಆರಂಭಿಕ ಆಟಗಾರ ಕಾರ್ತಿಕ್ ಶರ್ಮಾ (58) ಸ್ಪೋಟಕ ಅರ್ಧಶತಕ ಸಿಡಿಸಿದರು. ಇನ್ನು ನಾಯಕ ಸನ್ವೀರ್ ಸಿಂಗ್ 20 ರನ್ಗಳಿಸುವ ಮೂಲಕ 12.5 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿತು.
ಇದನ್ನೂ ಓದಿ: Virat Kohli-Rohit Sharma: ವಿಶ್ವ ದಾಖಲೆ ಬರೆಯಲು ಕೊಹ್ಲಿ-ರೋಹಿತ್ ನಡುವೆ 4 ರನ್ಗಳ ಪೈಪೋಟಿ
2ನೇ ಬಾರಿ 5 ಸಿಕ್ಸ್:
ರಮಣ್ದೀಪ್ ಸಿಂಗ್ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ವರ್ಷ ನಡೆದ ಶೇರ್-ಎ-ಪಂಜಾಬ್ ಟಿ20 ಕಪ್‌ನಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿ ಸಂಚಲನ ಸೃಷ್ಟಿಸಿದ್ದರು. ಅಗ್ರಿ ಕಿಂಗ್ ನೈಟ್ಸ್ ಪರ ಕಣಕ್ಕಿಳಿದಿದ್ದ ರಮಣ್ದೀಪ್ ಸಿಂಗ್ ಆಫ್-ಸ್ಪಿನ್ನರ್ ಕ್ರಿಶನ್ ಅಲಂಗ್ ಎಸೆದ 13ನೇ ಓವರ್ನ 5 ಎಸೆತಗಳಲ್ಲಿ ಸತತ 5 ಸಿಕ್ಸ್ಗಳನ್ನು ಬಾರಿಸಿದ್ದರು. ಇದೀಗ ಮತ್ತೊಮ್ಮೆ 5 ಸಿಕ್ಸ್ಗಳೊಂದಿಗೆ ರಮಣ್ದೀಪ್ ಸಿಂಗ್ ಅಬ್ಬರಿಸಿದ್ದಾರೆ.