
ಐಪಿಎಲ್ ಮೆಗಾ ಹರಾಜಿನಲ್ಲಿ ಕೇವಲ 13 ವರ್ಷಕ್ಕೆ ಕೋಟಿ ಸಂಭಾವನೆ ಪಡೆದು ದಾಖಲೆ ಸೃಷ್ಟಿಸಿದ್ದ ಬಿಹಾರದ ವೈಭವ್ ಸೂರ್ಯವಂಶಿ ಇದೀಗ 19 ವರ್ಷದೊಳಗಿನವರ ಏಷ್ಯಾಕಪ್ನಲ್ಲಿ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ 1 ಕೋಟಿ 10 ಲಕ್ಷ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದ ವೈಭವ್, ಐಪಿಎಲ್‌ಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಇದೀಗ ಅವರು ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪುರುಷರ ಅಂಡರ್-19 ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದು, ತಮ್ಮ ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ್ದಾರೆ.
ದುಬೈನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡುವ ಅವಕಾಶ ಪಡೆದರು. ಅಂಡರ್-19 ಕ್ರಿಕೆಟ್‌ನಲ್ಲಿ ಇದು ಅವರ ಮೊದಲ ಏಕದಿನ ಪಂದ್ಯವಾಗಿದ್ದು, ಈ ಮೂಲಕ ಅವರು ಭಾರತದ ಪರ ಅಂಡರ್-19 ಏಕದಿನ ಪಂದ್ಯವನ್ನನಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅವರು 13 ವರ್ಷ ಮತ್ತು 248 ದಿನಗಳಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದಾರೆ. ಈ ಹಿಂದೆ ಈ ದಾಖಲೆ ಪಿಯೂಷ್ ಚಾವ್ಲಾ ಹೆಸರಿನಲ್ಲಿತ್ತು. ಪಿಯೂಷ್ ಚಾವ್ಲಾ ಅವರು 14 ವರ್ಷ ಮತ್ತು 311 ದಿನಗಳಲ್ಲಿ ಭಾರತೀಯ ಅಂಡರ್-19 ತಂಡಕ್ಕಾಗಿ ಏಕದಿನ ಪಂದ್ಯವನ್ನು ಆಡಿದ್ದರು.
ಆದರೆ, ಈ ಚೊಚ್ಚಲ ಪಂದ್ಯ ವೈಭವ್ ಸೂರ್ಯವಂಶಿಗೆ ವಿಶೇಷವೇನೂ ಆಗಿರಲಿಲ್ಲ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್, 9 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಂದರೆ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ವೈಭವ್ ಸೂರ್ಯವಂಶಿ ತಮ್ಮ ಅಭಿಮಾನಿಗಳು ಮತ್ತು ಐಪಿಎಲ್ ತಂಡದ ನಿರೀಕ್ಷೆಯನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ.
ವೈಭವ್ ಸೂರ್ಯವಂಶಿ ಕಳೆದ ತಿಂಗಳಷ್ಟೇ ಆಸ್ಟ್ರೇಲಿಯಾದ ಅಂಡರ್ 19 ತಂಡದ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧ 64 ಎಸೆತಗಳನ್ನು ಎದುರಿಸಿ 104 ರನ್ ಗಳಿಸಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 14 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದರೊಂದಿಗೆ ಅಂಡರ್-19 ಟೆಸ್ಟ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಇದಲ್ಲದೆ ಇದೇ ವರ್ಷ, ವೈಭವ್ ಸೂರ್ಯವಂಶಿ ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್-19 ಏಕದಿನ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ್ದರು. ಅಂಡರ್-19 ಟೂರ್ನಿಯ ಇತಿಹಾಸದಲ್ಲಿ ಇದು ಮೊದಲ ತ್ರಿಶತಕ ಕೂಡ ಆಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ