ಟಿ20 ವಿಶ್ವಕಪ್ನಲ್ಲಿ ಭಾರತ ತಂಡ (Team India) ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಫೈನಲ್ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಅಭಿನಂದನೆಗಳ ಮಹಾಪೂರ ಹರಿದುಬಂದರೆ, ಅತ್ತ ಪಾಕಿಸ್ತಾನ್ ತಂಡ ಭಾರೀ ಟೀಕೆಗೆ ಗುರಿಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಟೂರ್ನಿ ಆರಂಭಕ್ಕೂ ಮುನ್ನ ಪಾಕಿಸ್ತಾನ್ ಪ್ರಶಸ್ತಿಯೊಂದಿಗೆ ಮರಳುವುದಾಗಿ ಕೊಚ್ಚಿಕೊಂಡಿದ್ದು.
ಪಾಕಿಸ್ತಾನ್ ತಂಡವು ವಿಶ್ವಕಪ್ ಟೂರ್ನಿಗಾಗಿ ತೆರಳುವ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಾಯಕ ಬಾಬರ್ ಆಝಂ ಸೇರಿದಂತೆ ತಂಡದ ಪ್ರಮುಖ ಆಟಗಾರರು ಈ ಬಾರಿ ಕಪ್ ಗೆದ್ದೇ ಹಿಂತಿರುಗುತ್ತೇವೆ ಎಂದು ತಿಳಿಸಿದ್ದರು. ಕಳೆದ ಎರಡು ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಆಡಿರುವ ಕಾರಣ ಈ ಸಲ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಬಾಬರ್ ಆಝಂ ಹೇಳಿದ್ದರು.
ಆದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಸುತ್ತಿನಲ್ಲಿ ಯುಎಸ್ಎ ವಿರುದ್ಧ ಸೋತಿದ್ದ ಪಾಕ್ ಪಡೆ, ಆ ಬಳಿಕ ಟೀಮ್ ಇಂಡಿಯಾ ವಿರುದ್ಧ ಮಂಡಿಯೂರಿತು. ಅಲ್ಲದೆ ಮೊದಲ ಸುತ್ತಿನಲ್ಲೇ ನಿರ್ಗಮಿಸುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.
ಇದೀಗ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ, ಪಾಕ್ ತಂಡದ ಮೇಲೆ ಟೀಕಾಸ್ತ್ರಗಳ ಪ್ರಯೋಗ ಮತ್ತೆ ಶುರುವಾಗಿದೆ. ಅದರಲ್ಲೂ ಪಾಕ್ ತಂಡದ ಮಾಜಿ ಆಟಗಾರ ಅತೀಕ್-ಉಝ್-ಝಮಾನ್ ಭಾರತ ತಂಡದ ಪ್ರದರ್ಶನವನ್ನು ಶ್ಲಾಘಿಸಿ, ಪಾಕಿಸ್ತಾನ್ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿರದ ಅತೀಕ್ ಝಮಾನ್, ನಮ್ಮವರು ನಾಯಕತ್ವಕ್ಕಾಗಿ ಕಿತ್ತಾಡುತ್ತಿದ್ದರೆ, ಭಾರತ ತಂಡವು ವಿಶ್ವಕಪ್ ಎತ್ತಿ ಹಿಡಿದು ಆನಂದಬಾಷ್ಫ ಸುರಿಸಿದ್ದಾರೆ. ಭಾರತ ತಂಡವನ್ನು ರೋಹಿತ್ ಶರ್ಮಾ ಯಾವ ರೀತಿಯಾಗಿ ಮುನ್ನಡೆಸಿದ್ದಾರೆ ಎಂಬುದನ್ನು ಪಾಕ್ ತಂಡ ನೋಡಿ ಕಲಿಯಬೇಕು. ನಿಜಕ್ಕೂ ಅವರು ಕ್ಲಾಸ್ ಲೀಡರ್ ಎಂದು ಹಾಡಿ ಹೊಗಳಿದ್ದಾರೆ.
ಪಾಕ್ ತಂಡದ ಪ್ರದರ್ಶನ ಹೇಗಿತ್ತು ಎಂಬುದನ್ನು ನೀವೇ ನೋಡಿ, ಈ ಬಾರಿ ಪಾಕಿಸ್ತಾನ್ ಕ್ರಿಕೆಟ್ ಆಡಲು ಹೋಗಿದ್ದರು ಎಂದು ನನಗಂತು ಅನಿಸಿಲ್ಲ. ಏಕೆಂದರೆ ಯುಎಸ್ಎನಲ್ಲಿ ಪಾಕಿಸ್ತಾನದ 17 ಆಟಗಾರರಿಗೆ 60 ರೂಮ್ಗಳನ್ನು ಬುಕ್ ಮಾಡಿಕೊಂಡಿದ್ದರು. ತಮ್ಮ ಕುಟುಂಬದೊಂದಿಗೆ ರಜಾ ಕಳೆಯಲು ಅವರು ಟಿ20 ವಿಶ್ವಕಪ್ಗೆ ತೆರಳಿದ್ದರು. ಅದರಂತೆ ಅಮೆರಿಕ ಸುತ್ತಾಡಿಕೊಂಡು ಬಂದಿದ್ದಾರೆ ಅಷ್ಟೇ ಎಂದು ಅತೀಕ್ ಝಮಾನ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ಕ್ಯಾಪ್ಟನ್..!
ಅಷ್ಟೇ ಅಲ್ಲದೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇನ್ನೇದಾರೂ ಭಾರತವನ್ನು ನೋಡಿ ಕಲಿಯಬೇಕು. ಅವರ ತಂಡದ ಆಯ್ಕೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಮ್ಮಲ್ಲಿ ಆಟಗಾರರು ಅರ್ಹತೆಗಿಂತ ಆತ್ಮೀಯತೆಯ ಮೇಲೆ ಆಯ್ಕೆಯಾಗುತ್ತಿದ್ದಾರೆ ಎಂದು ಪಿಸಿಬಿ ವಿರುದ್ಧ ಅತೀಕ್ ಝಮಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅತೀಕ್ ಅವರ ಹೇಳಿಕೆಯು ವೈರಲ್ ಆಗಿದ್ದು, ಪಾಕ್ ಕ್ರಿಕೆಟ್ ಪ್ರೇಮಿಗಳು ಮಾಜಿ ಕ್ರಿಕೆಟಿಗನ ಮಾತುಗಳಿಗೆ ಸಹಮತಿ ವ್ಯಕ್ತಪಡಿಸುತ್ತಿದ್ದಾರೆ.
Published On - 3:14 pm, Tue, 2 July 24