IPL 2025: ಕಳೆದ 17 ಸೀಸನ್ಗಳಿಂದ ಚಾಂಪಿಯನ್ ಪಟ್ಟ ಅಲಂಕರಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕನಸು ಮುಂದುವರೆದಿದೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಆರಂಭಿಸುವ ಆರ್ಸಿಬಿ ಫೈನಲ್ ಪ್ರವೇಶಿಸದೇ 8 ವರ್ಷಗಳೇ ಕಳೆದಿವೆ.
ಅದರಲ್ಲೂ ಕಳೆದ ಸೀಸನ್ನಲ್ಲಿ ಆರ್ಸಿಬಿ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 7 ಮ್ಯಾಚ್ ಮಾತ್ರ. ಹೀಗಾಗಿ ಮುಂದಿನ ಸೀಸನ್ನಲ್ಲಿ ಆರ್ಸಿಬಿ ತಂಡದ ನಾಯಕತ್ವ ಬದಲಾಗುವುದು ಬಹುತೇಕ ಖಚಿತ ಎನ್ನಬಹುದು. ಏಕೆಂದರೆ ಆರ್ಸಿಬಿ ತಂಡದ ಪ್ರಸ್ತುತ ನಾಯಕ ಫಾಫ್ ಡುಪ್ಲೆಸಿಸ್ಗೆ ಈಗ 39 ವರ್ಷ. ಹೀಗಾಗಿ ಮುಂದಿನ ಸೀಸನ್ನಲ್ಲಿ ಆರ್ಸಿಬಿ ಪರ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.
ಇತ್ತ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದಂತೆ ಮತ್ತೆ ನಾಯಕತ್ವದ ಚರ್ಚೆಗಳು ಶುರುವಾಗಿತ್ತು. ಏಕೆಂದರೆ ಈ ಹಿಂದೆ ಟೀಮ್ ಇಂಡಿಯಾ ನಾಯಕತ್ವದ ಹೊರೆಯ ಕಾರಣ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದರು. ಅಂದರೆ ಭಾರತ ತಂಡವನ್ನು ಹಾಗೂ ಆರ್ಸಿಬಿಯನ್ನು ಮುನ್ನಡೆಸುತ್ತಿರುವುದು ಹೊರೆಯಾಗುತ್ತಿದೆ. ಹೀಗಾಗಿ ಲೀಗ್ ಕ್ರಿಕೆಟ್ನ ನಾಯಕತ್ವನ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ಕೊಹ್ಲಿ ತಿಳಿಸಿದ್ದರು.
RCB ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಅಲ್ಲದೆ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್ಸಿಬಿ 2016 ರಲ್ಲಿ ಫೈನಲ್ಗೆ ಪ್ರವೇಶಿಸಿದರೆ, 3 ಬಾರಿ ಪ್ಲೇಆಫ್ಸ್ ಆಡಿತ್ತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಿಂಗ್ ಕೊಹ್ಲಿಗೆ ಮತ್ತೆ ನಾಯಕನ ಪಟ್ಟ ನೀಡುವ ಸಾಧ್ಯತೆಯಿದೆ.
ಹೀಗಾಗಿ ವಿರಾಟ್ ಕೊಹ್ಲಿ ಮತ್ತೆ ಆರ್ಸಿಬಿ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಅದರಂತೆ ಐಪಿಎಲ್ 2025 ರಿಂದ ಕಿಂಗ್ ಕೊಹ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕ್ರಿಕ್ಇನ್ಫೋ ಮೂಲಗಳು ತಿಳಿಸಿವೆ.
ಈಗಾಗಲೇ ವಿರಾಟ್ ಕೊಹ್ಲಿ ಆರ್ಸಿಬಿ ಫ್ರಾಂಚೈಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇದೇ ವೇಳೆ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಕೂಡ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ. ಹೀಗಾಗಿ ಐಪಿಎಲ್ 2025 ರಲ್ಲಿ ಕಿಂಗ್ ಕೊಹ್ಲಿ ಮತ್ತೆ ಆರ್ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
Published On - 1:07 pm, Tue, 2 July 24