Asia Cup 2025 schedule: ಸೆ. 9 ರಿಂದ ಏಷ್ಯಾಕಪ್ ಆರಂಭ; ಈ ದಿನದಂದು ಭಾರತ- ಪಾಕ್ ನಡುವೆ ಪಂದ್ಯ
Asia Cup 2025 schedule: 2025ರ ಏಷ್ಯಾಕಪ್ ವೇಳಾಪಟ್ಟಿಯ ಬಗ್ಗೆ ಅತಿದೊಡ್ಡ ಮಾಹಿತಿ ಹೊರಬಿದ್ದಿದೆ. ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ಈ ಟೂರ್ನಿ ನಡೆಯಲಿದೆ ಎಂದು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿರುವುದರಿಂದ, ಸೆಪ್ಟೆಂಬರ್ 14 ರಂದು ಅವರ ನಡುವಿನ ಪಂದ್ಯ ನಡೆಯುವ ಸಾಧ್ಯತೆಯಿದೆ.

2025 ರ ಏಷ್ಯಾಕಪ್ (2025 Asia Cup) ಆಯೋಜನೆಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಹೊರಬಿದ್ದಿದೆ. 8 ತಂಡಗಳ ನಡುವೆ ನಡೆಯಲ್ಲಿರುವ ಈ ಟೂರ್ನಿ ಯುಎಇಯಲ್ಲಿ ನಡೆಯಲ್ಲಿದೆ. ಆದಾಗ್ಯೂ ಈ ಟೂರ್ನಿಯ ಆಯೋಜಕತ್ವದ ಹಕ್ಕು ಬಿಸಿಸಿಐ ಬಳಿ ಇರಲಿದ್ದು, ಸೆಪ್ಟೆಂಬರ್ 9 ರಿಂದ ಈ ಪಂದ್ಯಾವಳಿ ಆರಂಭವಾಗಲಿದ್ದು, ಸೆಪ್ಟೆಂಬರ್ 28 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಮೊದಲೇ ವರದಿಯಾದಂತೆ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಈ ಪಂದ್ಯಾವಳಿಯಲ್ಲಿ ಒಂದೇ ಗುಂಪಿನಲ್ಲಿರಲಿದ್ದು, ಬದ್ಧವೈರಿಗಳ ಮೊದಲ ಮುಖಾಮುಖಿ ಸೆಪ್ಟೆಂಬರ್ 14 ರಂದು ನಡೆಯುವ ಸಾಧ್ಯತೆಯಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಜುಲೈ 26 ರ ಶನಿವಾರ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಏಷ್ಯಾಕಪ್ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 9 ರಂದು ಪ್ರಾರಂಭವಾಗಲಿರುವ ಈ ಪಂದ್ಯಾವಳಿಯ ಫೈನಲ್ ಸೆಪ್ಟೆಂಬರ್ 28 ರಂದು ನಡೆಯಲಿದೆ ಎಂದು ನಖ್ವಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

3 ಬಾರಿ ಮುಖಾಮುಖಿ ಸಾಧ್ಯತೆ
ಪ್ರತಿ ಬಾರಿಯಂತೆ ಈ ಬಾರಿಯೂ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ ಎಂದು ವರದಿಯಾಗಿದೆ. ಉಭಯ ತಂಡಗಳ ನಡುವೆ ಗುಂಪು ಹಂತದ ಮೊದಲ ಮುಖಾಮುಖಿ ಸೆಪ್ಟೆಂಬರ್ 14 ರಂದು ನಡೆಯುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ, ಭಾರತ ಮತ್ತು ಪಾಕಿಸ್ತಾನ ಫೈನಲ್ ತಲುಪಿದರೆ, ಎರಡೂ ತಂಡಗಳು ಪರಸ್ಪರ 3 ಬಾರಿ ಮುಖಾಮುಖಿಯಾಗಬಹುದು.. ಒಂದು ವೇಳೆ ಎರಡು ತಂಡಗಳಲ್ಲಿ ಒಂದು ತಂಡ ಫೈನಲ್ಗೇರಲು ವಿಫಲವಾದರೂ, ಕನಿಷ್ಠ ಪಕ್ಷ 2 ಬಾರಿ ಮುಖಾಮುಖಿಯಾಗುವುದಂತೂ ಖಚಿತ. ಗುಂಪು ಹಂತದ ಹೊರತಾಗಿ, ಸೂಪರ್ -4 ರಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯುವ ನಿರೀಕ್ಷೆಯಿದೆ.
Asia Cup 2025: ಏಷ್ಯಾಕಪ್ ಬಗ್ಗೆ ಸಿಗ್ತು ಸಿಹಿ ಸುದ್ದಿ; ಈ ದೇಶದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಿದೆ ಬಿಸಿಸಿಐ
ವಿವಾದಗಳ ನಡುವೆ ಭಾರತ-ಪಾಕಿಸ್ತಾನ ಪಂದ್ಯ
ಕಳೆದ ಕೆಲವು ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ಸಂಬಂಧಗಳು ತೀರಾ ಹದಗೆಟ್ಟಿರುವ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯ ನಡೆಯಲಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ ಮೇ 7 ರಂದು ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ನೀಡಿತು. ಅಂದಿನಿಂದ, ಅಂತರರಾಷ್ಟ್ರೀಯ ಕ್ರಿಕೆಟ್ ಮಟ್ಟದಲ್ಲಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂಬ ಬೇಡಿಕೆ ಇತ್ತು. ಇದು ಮಾತ್ರವಲ್ಲದೆ, ಭಾರಿ ಪ್ರತಿಭಟನೆಗಳ ನಂತರ, ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಸಹ ರದ್ದುಗೊಳಿಸಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Sat, 26 July 25
