ODI World Cup 2027: ಈ ದಿನದಿಂದ ಆರಂಭವಾಗಲಿದೆ 2027 ರ ಏಕದಿನ ವಿಶ್ವಕಪ್‌; ವೇಳಾಪಟ್ಟಿ ಬಹಿರಂಗ

ODI World Cup 2027 schedule: 2027ರ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಅಕ್ಟೋಬರ್ 4 ರಿಂದ ನವೆಂಬರ್ 21ರವರೆಗೆ ನಡೆಯುವ ಈ ಟೂರ್ನಿಯಲ್ಲಿ 14 ತಂಡಗಳು ಹೊಸ ಸ್ವರೂಪದಲ್ಲಿ ಸ್ಪರ್ಧಿಸಲಿವೆ. 2003ರ ಮಾದರಿಯಲ್ಲಿ ಗುಂಪು ಹಂತ, ಸೂಪರ್ ಸಿಕ್ಸ್ ಮತ್ತು ನಾಕೌಟ್ ಪಂದ್ಯಗಳಿರುತ್ತವೆ. ವೇಳಾಪಟ್ಟಿ ಮತ್ತು ಸ್ವರೂಪದ ಅಂತಿಮ ನಿರ್ಧಾರ ಜುಲೈನಲ್ಲಿ ಪ್ರಕಟವಾಗಲಿದೆ.

ODI World Cup 2027: ಈ ದಿನದಿಂದ ಆರಂಭವಾಗಲಿದೆ 2027 ರ ಏಕದಿನ ವಿಶ್ವಕಪ್‌; ವೇಳಾಪಟ್ಟಿ ಬಹಿರಂಗ
Odi World Cup 2027
Image Credit source: InsideSport x

Updated on: Jun 11, 2026 | 6:37 PM

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ( ODI World Cup 2027) ಈಗಾಗಲೇ ಎಲ್ಲಾ ತಂಡಗಳು ತಮ್ಮ ತಯಾರಿಯನ್ನು ಶುರು ಮಾಡಿವೆ. ಅದರ ಭಾಗವಾಗಿ ಕಳೆದ ಬಾರಿಯ ರನ್ನರ್ ಅಪ್ ಟೀಂ ಇಂಡಿಯಾ (Team India) ಕೂಡ ವಿವಿಧ ತಂಡಗಳ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಮುಂಬರುವ ಏಕದಿನ ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸುತ್ತಿವೆ ಎಂಬ ಸುದ್ದಿ ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೆಗಾ ಟೂರ್ನಿ ಯಾವಾಗ ಆರಂಭವಾಗಿ ಎಲ್ಲಿಯವರೆಗೆ ನಡೆಯಲಿದೆ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಅಕ್ಟೋಬರ್ 4 ರಿಂದ ಆರಂಭ

ESPNcricinfo ವರದಿಯ ಪ್ರಕಾರ, ಏಕದಿನ ವಿಶ್ವಕಪ್ ಅಕ್ಟೋಬರ್ 4, 2027 ರಂದು ಪ್ರಾರಂಭವಾಗಲಿದ್ದು, ನವೆಂಬರ್ 21, 2027 ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 54 ಪಂದ್ಯಗಳು ನಡೆಯಲಿದ್ದು, ಈ ವಿಶ್ವ ಸಮರ ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆಯಲಿದೆ. ಈ ಟೂರ್ನಿಯಲ್ಲಿ ವಿಶ್ವದ ಅಗ್ರ 14 ತಂಡಗಳು ಟ್ರೋಫಿ ಗೆಲುವಿಗಾಗಿ ಪರಸ್ಪರ ಸೆಣಸಾಡಲಿವೆ. ಮೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ವಿಶ್ವಕಪ್‌ ವೇಳಾಪಟ್ಟಿಯ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ. ಆದರೆ ಜುಲೈನಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆಯುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.

2027 ರ ಏಕದಿನ ವಿಶ್ವಕಪ್ ವೇಳಾಪಟ್ಟಿ

2027 ರ ವಿಶ್ವಕಪ್ ಹಿಂದಿನ ಆವೃತ್ತಿಯಾದ 2023 ರ ಆವೃತ್ತಿಗಿಂತ ಗಮನಾರ್ಹವಾಗಿ ಭಿನ್ನವಾಗಿರುತ್ತದೆ. ಅಂದರೆ 2003 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಮಾದರಿಯಲ್ಲಿ ಈ ಬಾರಿಯ ವಿಶ್ವಕಪ್ ನಡೆಸಲು ತೀರ್ಮಾನಿಸಲಾಗಿದೆ. ಆ ಪ್ರಕಾರ, ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ 14 ತಂಡಗಳನ್ನು ತಲಾ ಏಳು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನಂತರ ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಸುತ್ತಿಗೆ ಮುನ್ನಡೆಯುತ್ತವೆ. ನಂತರ ಸೂಪರ್ ಸಿಕ್ಸ್‌ನ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿವೆ. ಈ ಸುತ್ತಿನಲ್ಲಿ ಗೆದ್ದ ಎರಡು ತಂಡಗಳು ನವೆಂಬರ್ 21 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.

ಯಾವ ದೇಶದಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ?

ಮೇಲೆ ಹೇಳಿದಂತೆ ಈ ಪಂದ್ಯಾವಳಿಯು ಮೂರು ದೇಶಗಳಲ್ಲಿ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಪ್ರಮುಖ ಆತಿಥೇಯವಾಗಿದೆ. ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾದ ಎಂಟು ಕ್ರೀಡಾಂಗಣಗಳು ಪಂದ್ಯಾವಳಿಯ ಹೆಚ್ಚಿನ ಪಂದ್ಯಗಳು ಮತ್ತು ನಾಕೌಟ್ ಟೈಗಳನ್ನು ಆಯೋಜಿಸುತ್ತವೆ. ಇವುಗಳಲ್ಲಿ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣ, ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣ ಮತ್ತು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರೀಡಾಂಗಣ ಸೇರಿವೆ. ಜಿಂಬಾಬ್ವೆಯ ಎರಡು ನಗರಗಳಾದ ಹರಾರೆ ಮತ್ತು ಬುಲವಾಯೊದಲ್ಲಿ ಪಂದ್ಯಗಳು ನಡೆಯಲಿವರ. ನಮೀಬಿಯಾದ ಎರಡು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ನಡುವೆ ಫೈಟ್; ಹೇಗಿದೆ ಮುಖಾಮುಖಿ ದಾಖಲೆ?

ಯಾವ 14 ತಂಡಗಳಿಗೆ ಅವಕಾಶ ಸಿಗುತ್ತದೆ?

ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ 2027 ರ ಏಕದಿನ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದಿವೆ. ಇದರ ಜೊತೆಗೆ, ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಎಂಟು ತಂಡಗಳು ಸಹ ನೇರವಾಗಿ ಅರ್ಹತೆ ಪಡೆಯುತ್ತವೆ. ಆತಿಥೇಯ ನಮೀಬಿಯಾ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅರ್ಹತಾ ಸುತ್ತನ್ನು ಆಡಬೇಕಾಗುತ್ತದೆ. ಉಳಿದ ಮೂರರಿಂದ ನಾಲ್ಕು ಸ್ಥಾನಗಳಿಗೆ ಅರ್ಹತಾ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳು ಆಯ್ಕೆಯಾಗಲಿವೆ.

Published On - 6:35 pm, Thu, 11 June 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us