
ಐಸಿಸಿ ಪುರುಷರ ಏಕದಿನ ವಿಶ್ವಕಪ್ 2027ರ ವೇಳಾಪಟ್ಟಿಗೆ ಸಂಬಂಧಿಸಿದಂತೆ ಇದೀಗ ಅತ್ಯಂತ ಮಹತ್ವದ ಅಪ್‌ಡೇಟ್ ಒಂದು ಹೊರಬಿದ್ದಿದೆ. ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ಮೆಗಾ ಟೂರ್ನಿಯನ್ನುನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ, ಅಂದರೆ 2027ರ ಅಕ್ಟೋಬರ್ 2 ರಂದು ಜಾಗತಿಕ ಶಾಂತಿಯ ಹರಿಕಾರ ಮಹಾತ್ಮ ಗಾಂಧೀಜಿಯವರ ಜಯಂತಿಯಂದೇ ಆರಂಭಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗಂಭೀರ ಚಿಂತನೆ ನಡೆಸಿದೆ.
ಕ್ರಿಕ್‌ಬಝ್ ವರದಿಯ ಪ್ರಕಾರ, ಈ ಬಾರಿ ಆಫ್ರಿಕಾ ಖಂಡದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ವಿಶೇಷ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ಪರ್ಶ ನೀಡಲು ಐಸಿಸಿ ಮುಂದಾಗಿದೆ. ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಗೆ ಬರುವ ಮುನ್ನ ತಮ್ಮ ಜೀವನದ ಮಹತ್ವದ 21 ವರ್ಷಗಳನ್ನು ಸೌತ್ ಆಫ್ರಿಕಾದಲ್ಲಿ ಕಳೆದಿದ್ದರು.
ಗಾಂಧೀಜಿಯವರ ಸತ್ಯಾಗ್ರಹ ಮತ್ತು ಅಹಿಂಸೆಯ ತತ್ವಗಳು ರೂಪಿತಗೊಂಡಿದ್ದೇ ಆಫ್ರಿಕಾದ ಮಣ್ಣಿನಲ್ಲಿ. ಹೀಗಾಗಿ, ಭಾರತ ಮತ್ತು ಮುಖ್ಯ ಆತಿಥ್ಯ ರಾಷ್ಟ್ರವಾದ ಸೌತ್ ಆಫ್ರಿಕಾ ನಡುವಿನ ಈ ಐತಿಹಾಸಿಕ ಬಾಂಧವ್ಯವನ್ನು ಗೌರವಿಸಲು ಹಾಗೂ ಜಾಗತಿಕವಾಗಿ ಶಾಂತಿಯ ಸಂದೇಶ ಸಾರಲು ಅವರ ಜನ್ಮದಿನವಾದ ಅಕ್ಟೋಬರ್ 2 ರಂದೇ ಟೂರ್ನಿಗೆ ಚಾಲನೆ ನೀಡಲು ಐಸಿಸಿ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ: 1,788 ಪಂದ್ಯಗಳು… ದೇಶೀಯ ಟೂರ್ನಿಗೆ ಡೇಟ್ ಫಿಕ್ಸ್!
ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್ ಕೇವಲ ರನ್ ಮತ್ತು ವಿಕೆಟ್‌ಗಳ ಆಟವಾಗಿ ಉಳಿಯದೆ, ಜಾಗತಿಕ ಇತಿಹಾಸ ಮತ್ತು ಮಾನವೀಯ ಮೌಲ್ಯಗಳನ್ನು ಕೊಂಡಾಡುವ ಮಹಾ ವೇದಿಕೆಯಾಗಲು ಸಜ್ಜಾಗುತ್ತಿದೆ. ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಟೂರ್ನಿಗೆ ಚಾಲನೆ ನೀಡುವ ಐಸಿಸಿಯ ಈ ಐತಿಹಾಸಿಕ ನಿರ್ಧಾರವು ಕ್ರೀಡಾ ಜಗತ್ತಿಗೆ ಹೊಸ ಭಾಷ್ಯ ಬರೆಯಲಿದೆ ಎಂಬುದರಲ್ಲಿ ಸಂಶಯವಿಲ್ಲ.