ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಗಂಟೆಗಳ ಒಳಗೆ ಮೂರು ಬಾರಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಮುಂಬೈನಿಂದ ಪುಣೆಗೆ ಪ್ರಯಾಣಿಸುವಾಗ ಹಿಟ್ಮ್ಯಾನ್ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದು, ಹೀಗಾಗಿ ಮೂರು ಬಾರಿ ಫೈನ್ ಹಾಕಲಾಗಿದೆ ಎಂದು ವರದಿಯಾಗಿದೆ.
ತಮ್ಮ ನೀಲಿ ಬಣ್ಣದ ಲಂಬೋರ್ಗಿನಿಯಲ್ಲಿ ರೋಹಿತ್ ಶರ್ಮಾ ಮುಂಬೈನಿಂದ ಪುಣೆಗೆ ತೆರಳಿದ್ದರು. ಈ ವೇಳೆ ಗಂಟೆಗೆ 200 ಕಿ.ಮೀ ಕಾರು ಚಲಾಯಿಸಿದ್ದರು. ಇದು ಕೆಲವೊಮ್ಮೆ ಕೆಲವೊಮ್ಮೆ ಗಂಟೆಗೆ 215 ಕಿಮೀ ತಲುಪಿತ್ತು. ಪರಿಣಾಮವಾಗಿ, ಅವರ ವಾಹನದ ನಂಬರ್ ಪ್ಲೇಟ್‌ಗೆ ಮೂರು ಆನ್‌ಲೈನ್ ಟ್ರಾಫಿಕ್ ಚಲನ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ರೋಹಿತ್ ಶರ್ಮಾ ಹೆಲಿಕಾಪ್ಟರ್ ಮೂಲಕ ಅಹಮದಾಬಾದ್‌ನಿಂದ ನೇರವಾಗಿ ಮುಂಬೈಗೆ ತೆರಳಿದ್ದರು. ಕುಟುಂಬದೊಂದಿಗೆ ಎರಡು ದಿನಗಳನ್ನು ಕಳೆದ ನಂತರ, ಭಾರತೀಯ ನಾಯಕ ಪುಣೆಗೆ ತೆರಳಲು ನಿರ್ಧರಿಸಿದ್ದರು. ಅದರಂತೆ ತಮ್ಮ ಕಾರಿನಲ್ಲಿ ಅತೀ ವೇಗವಾಗಿ ಡ್ರೈವ್ ಮಾಡಿ ಇದೀಗ ತೊಂದರೆಗೆ ಸಿಲುಕಿದ್ದಾರೆ.
ಇದಾಗ್ಯೂ ರೋಹಿತ್ ಶರ್ಮಾ ಬಾಂಗ್ಲಾದೇಶ್ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಟ್ರಾಫಿಕ್ ಅಧಿಕಾರಿಯ ಮಾಹಿತಿ ಪ್ರಕಾರ, ಮೂರು ಚಲನ್ಗೆ ವಿಧಿಸಲಾದ ದಂಡವನ್ನು ಮಾತ್ರ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಭಾರತ-ಬಾಂಗ್ಲಾದೇಶ್ ನಡುವಣ ಪಂದ್ಯವು ಅಕ್ಟೋಬರ್ 19 ರಂದು ನಡೆಯಲಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಗೆಲುವಿನ ಸಂಖ್ಯೆಯನ್ನು ನಾಲ್ಕಕ್ಕೇರಿಸುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಅತ್ತ ಆಡಿರುವ 3 ಪಂದ್ಯಗಳಲ್ಲಿ 2 ರಲ್ಲಿ ಸೋತಿರುವ ಬಾಂಗ್ಲಾದೇಶ್ ತಂಡವು ಈ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ.
ಉಭಯ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 40 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 31 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಬಾಂಗ್ಲಾದೇಶ್ ತಂಡ 8 ಬಾರಿ ಗೆಲುವು ಕಂಡಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.