U19 World Cup: ಐಸಿಸಿ ಅಂಡರ್ 19 ವಿಶ್ವಕಪ್ ತಂಡ ಪ್ರಕಟ; ಭಾರತದ ನಾಲ್ವರಿಗೆ ಸ್ಥಾನ
U19 World Cup 2024: ಟೀಂ ಇಂಡಿಯಾವನ್ನು ಹೊರತುಪಡಿಸಿ ಆಸ್ಟ್ರೇಲಿಯಾದ ಮೂವರು, ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ತಲಾ ಒಬ್ಬರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 12ನೇ ಆಟಗಾರನಾಗಿ ಸ್ಕಾಟಿಷ್ ಆಟಗಾರರೊಬ್ಬರು ಸ್ಥಾನ ಪಡೆದಿದ್ದು, ಆಸ್ಟ್ರೇಯಾದ ನಾಯಕ ಹಗ್ ವೈಬ್‌ಗೆನ್‌ಗೆ ಈ ತಂಡದ ನಾಯಕತ್ವ ನೀಡಲಾಗಿದೆ.
ಭಾರತ ಯುವ ಪಡೆ ಇತ್ತೀಚೆಗೆ ಮುಗಿದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ (ICC U19 World Cup 2024) ಅದ್ಭುತ ಪ್ರದರ್ಶನ ನೀಡಿತ್ತು. ಲೀಗ್ ಹಂತದಿಂದ ಹಿಡಿದು ಸೆಮಿಫೈನಲ್ ಪಂದ್ಯದವರೆಗೂ ಒಂದೇ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ಫೈನಲ್ಗೇರಿತ್ತು. ಆದರೆ ಆಸ್ಟ್ರೇಲಿಯಾ ಎದುರು ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಉದಯ್ ಸಹಾರನ್ ಪಡೆ ಚಾಂಪಿಯನ್ ಪಟ್ಟಕ್ಕೇರುವ ಅವಕಾಶದಿಂದ ವಂಚಿತವಾಯಿತು. ಈ ಸೋಲಿನ ನಡುವೆಯೂ ಭಾರತ ಯುವ ಪಡೆಯ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಅದರಲ್ಲೂ ತಂಡದ ನಾಯಕ ಉದಯ್ ಸಹಾರನ್, ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್, ಸಚಿನ್ ದಾಸ್, ಸೌಮ್ಯ ಪಾಂಡೆ ಸೇರಿದಂತೆ ಹಲವು ಆಟಗಾರರು ಸಹ ಹೆಚ್ಚು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ಐಸಿಸಿ ಕೂಡ ಈ ಆಟಗಾರರಿಗೆ ವಿಶೇಷ ಉಡುಗೊರೆಯನ್ನು ನೀಡಿದೆ. ಅಂದರೆ ಐಸಿಸಿ ಟೂರ್ನಮೆಂಟ್‌ನ ತಂಡವನ್ನು (ICC’s Team of the Tournament) ಆಯ್ಕೆ ಮಾಡಿದ್ದು, ಇದರಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.
ಈ ತಂಡವನ್ನು ಐಸಿಸಿ ಸೋಮವಾರ ಆಯ್ಕೆ ಮಾಡಿದ್ದು ಇದರಲ್ಲಿ ಗರಿಷ್ಠ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾವನ್ನು ಹೊರತುಪಡಿಸಿ ಆಸ್ಟ್ರೇಲಿಯಾದ ಮೂವರು, ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ತಲಾ ಒಬ್ಬರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 12ನೇ ಆಟಗಾರನಾಗಿ ಸ್ಕಾಟಿಷ್ ಆಟಗಾರರೊಬ್ಬರು ಸ್ಥಾನ ಪಡೆದಿದ್ದು, ಆಸ್ಟ್ರೇಯಾದ ನಾಯಕ ಹಗ್ ವೈಬ್‌ಗೆನ್‌ಗೆ ಈ ತಂಡದ ನಾಯಕತ್ವ ನೀಡಲಾಗಿದೆ.
4 ಭಾರತೀಯ ಆಟಗಾರರಿಗೆ ಸ್ಥಾನ
ಟೂರ್ನಮೆಂಟ್ ಟಾಪ್ ಸ್ಕೋರರ್ ಮತ್ತು ಭಾರತದ ನಾಯಕ ಉದಯ್ ಸಹರಾನ್ ಐಸಿಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಎರಡನೇ ಟಾಪ್ ಸ್ಕೋರರ್ ಮುಶೀರ್ ಖಾನ್, ಸ್ಟಾರ್ ಬ್ಯಾಟ್ಸ್‌ಮನ್ ಸಚಿನ್ ದಾಸ್ ಮತ್ತು 2024 ರ ಅಂಡರ್-19 ವಿಶ್ವಕಪ್‌ನ ಎರಡನೇ ಅಗ್ರ ವಿಕೆಟ್ ಟೇಕರ್ ಸೌಮ್ಯ ಪಾಂಡ್ಯ ಕೂಡ ಐಸಿಸಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸೌಮ್ಯ ಪಾಂಡೆ ಈ ಟೂರ್ನಿಯಲ್ಲಿ 18 ವಿಕೆಟ್ ಪಡೆಯುವ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರಲ್ಲದೆ ಟೀಂ ಇಂಡಿಯಾ ನಾಯಕ ಉದಯ್ ಸಹರಾನ್ ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕ ಎನಿಸಿಕೊಂಡರು.
ಭಾರತೀಯರ ಪ್ರದರ್ಶನ
ಇಡೀ ಟೂರ್ನಿಯಲ್ಲಿ ಉದಯ್ ಸಹರಾನ್ ಆಡಿದ 7 ಇನ್ನಿಂಗ್ಸ್‌ಗಳಲ್ಲಿ 397 ರನ್ ಬಾರಿಸಿದರು. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧ ಶತಕಗಳು ಸೇರಿದ್ದವು. ಅವರಂತೆಯೇ ಆಲ್‌ರೌಂಡರ್ ಮುಶೀರ್ ಖಾನ್ ಕೂಡ ಆಡಿದ 7 ಇನ್ನಿಂಗ್ಸ್‌ಗಳಲ್ಲಿ 2 ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 360 ರನ್ ಕಲೆಹಾಕಿದರು. ಸ್ಪಿನ್ನರ್ ಸೌಮ್ಯ ಪಾಂಡೆ 18 ವಿಕೆಟ್ ಪಡೆದು ಸಂಚಲನ ಮೂಡಿಸಿದರು. ಟೂರ್ನಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎನಿಸಿಕೊಂಡರು. ಸೂಪರ್ 6ಸುತ್ತಿನಲ್ಲಿ ಸಚಿನ್ ದಾಸ್ ಸಿಡಿಸಿದ ಅಮೋಘ ಶತಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಐಸಿಸಿ ವಿಶ್ವಕಪ್ ತಂಡ:
ಲಹುವಾನ್ ಡ್ರೆ ಪ್ರಿಟೋರಿಸ್ (ದಕ್ಷಿಣ ಆಫ್ರಿಕಾ, ವಿಕೆಟ್ ಕೀಪರ್), ಹ್ಯಾರಿ ಡಿಕ್ಸನ್ (ಆಸ್ಟ್ರೇಲಿಯಾ), ಮುಶೀರ್ ಖಾನ್ (ಭಾರತ), ಹಗ್ ವೈಬ್‌ಗೆನ್ (ಆಸ್ಟ್ರೇಲಿಯಾ, ನಾಯಕ), ಉದಯ್ ಸಹಾರನ್ (ಭಾರತ), ಸಚಿನ್ ದಾಸ್ (ಭಾರತ), ನಾಥನ್ ಎಡ್ವರ್ಡ್ಸ್ (ವೆಸ್ಟ್ ಇಂಡೀಸ್), ಕಲ್ಲಮ್ ವಿಡ್ಲರ್ (ಆಸ್ಟ್ರೇಲಿಯಾ), ಉಬೈದ್ ಶಾ (ಪಾಕಿಸ್ತಾನ), ಕ್ವೆನಾ ಎಂಫಾಕಾ (ದಕ್ಷಿಣ ಆಫ್ರಿಕಾ), ಸೌಮ್ಯ ಪಾಂಡೆ (ಭಾರತ).
12 ನೇ ಆಟಗಾರ- ಜೇಮೀ ಡಂಕ್ (ಸ್ಕಾಟ್ಲೆಂಡ್).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ