ಒಂದೇ ಓವರ್ನಲ್ಲಿ ಬರೋಬ್ಬರಿ 43 ರನ್ ನೀಡುವ ಮೂಲಕ ಇಂಗ್ಲೆಂಡ್ ವೇಗಿ ಒಲೀ ರಾಬಿನ್ಸನ್ (Ollie Robinson) ಅತ್ಯಂತ ಕೆಟ್ಟ ದಾಖಲೆ ಬರೆದಿದ್ದಾರೆ. ಈ ಮೂಲಕ ಕೌಂಟಿ ಚಾಂಪಿಯನ್ಶಿಪ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಕಳಪೆ ದಾಖಲೆ ಅಲೆಕ್ಸ್ ಟ್ಯೂಡರ್ ಹೆಸರಿನಲ್ಲಿತ್ತು. 1998 ರಲ್ಲಿ ಸರ್ರೆ ಪರ ಕಣಕ್ಕಿಳಿದಿದ್ದ ಅಲೆಕ್ಸ್ ಟ್ಯೂಡರ್ ಲಂಕಾಶೈರ್ ವಿರುದ್ದದ ಪಂದ್ಯದಲ್ಲಿ 38 ರನ್ ನೀಡಿದ್ದರು. ಇದೀಗ 43 ರನ್ಗಳನ್ನು ಬಿಟ್ಟುಕೊಡುವ ಮೂಲಕ ಒಲೀ ರಾಬಿನ್ಸನ್ ಅತ್ಯಂತ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ನ ಡಿವಿಷನ್ ಟು ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಮತ್ತು ಸಸೆಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಸೆಕ್ಸ್ ಪರ ಕಣಕ್ಕಿಳಿದಿದ್ದ ಒಲೀ ರಾಬಿನ್ಸನ್ 13ನೇ ಓವರ್ನಲ್ಲಿ ಬರೋಬ್ಬರಿ 43 ರನ್ ನೀಡಿದರು.
ಈ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ನೀಡಿದ ರಾಬಿನ್ಸನ್, ಎರಡನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಹೊಡೆಸಿಕೊಂಡರು. ಆದರೆ ಇದು ನೋಬಾಲ್ ಆಗಿತ್ತು. ಇನ್ನು ಮರು ಎಸೆತದಲ್ಲಿ ಫೋರ್ ನೀಡಿದರು. ಇನ್ನು ಮೂರನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಹೊಡೆಸಿಕೊಂಡರು.
ನಾಲ್ಕನೇ ಎಸೆತದಲ್ಲಿ ಮತ್ತೊಂದು ಫೋರ್ ನೀಡಿದರೆ, 5ನೇ ಎಸೆತದಲ್ಲಿ ಸಿಕ್ಸ್ ಹೊಡೆಸಿಕೊಂಡರು. ಇದು ನೋಬಾಲ್ ಆಗಿತ್ತು. ಮರು ಎಸೆತದಲ್ಲಿ ಮತ್ತೊಂದು ಫೋರ್ ಚಚ್ಚಿಸಿಕೊಂಡರು. ಇನ್ನು ಆರನೇ ಎಸೆತದಲ್ಲಿ ಸಿಕ್ಸ್ ನೀಡಿದರು. ಇದು ಸಹ ನೋಬಾಲ್ ಆಗಿತ್ತು. ಇನ್ನು ಕೊನೆಯ ಎಸೆತದಲ್ಲಿ ಒಂದು ರನ್ ನೀಡುವ ಮೂಲಕ ಒಟ್ಟು 43 ರನ್ಗಳು ಬಿಟ್ಟುಕೊಟ್ಟರು.
ಒಲೀ ರಾಬಿನ್ಸನರ್ ಓವರ್: 6, 6nb, 4, 6, 4, 6nb, 4, 6nb, 1.
LOUIS KIMBER HAS TAKEN 43 OFF AN OVER pic.twitter.com/kQ4cLUhKN9
— Vitality County Championship (@CountyChamp) June 26, 2024
ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೂಡಿಬಂದ 2ನೇ ದುಬಾರಿ ಓವರ್ ಎಂಬುದು ವಿಶೇಷ. ಇದಕ್ಕೂ ಮುನ್ನ ನ್ಯೂಝಿಲೆಂಡ್ನ ರಾಬರ್ಟ್ ವ್ಯಾನ್ಸ್ ಒಂದೇ ಓವರ್ನಲ್ಲಿ ಬರೋಬ್ಬರಿ 77 ರನ್ ನೀಡಿದ್ದರು.
1989 ರಲ್ಲಿ ನಡೆದ ಕ್ಯಾಂಟಬರ್ರಿ ವಿರುದ್ಧದ ಪಂದ್ಯದಲ್ಲಿ ವೆಲ್ಲಿಂಗ್ಟನ್ ಪರ ಕಣಕ್ಕಿಳಿದಿದ್ದ ರಾಬರ್ಟ್ ವ್ಯಾನ್ಸ್ ಹೆಚ್ಚುವರಿ ಎಸೆತಗಳೊಂದಿಗೆ ಬರೋಬ್ಬರಿ 77 ರನ್ ನೀಡಿರುವುದು ಅತ್ಯಂತ ಕೆಟ್ಟ ದಾಖಲೆಯಾಗಿದೆ. ಇದೀಗ ಒಲೀ ರಾಬಿನ್ಸನ್ ಲೀಸೆಸ್ಟರ್‌ಶೈರ್ ವಿರುದ್ಧ 43 ರನ್ ನೀಡುವ ಮೂಲಕ ಈ ಕೆಟ್ಟ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ: South Africa: ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೌತ್ ಆಫ್ರಿಕಾ