The Hundred: ದಿ ಹಂಡ್ರೆಡ್ ಲೀಗ್​ ಆಡಲಿರುವ ಟೀಮ್ ಇಂಡಿಯಾ ಆಟಗಾರ್ತಿಯರು ಯಾರೆಲ್ಲಾ ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Jul 20, 2021 | 9:53 PM

ಟೀಮ್ ಇಂಡಿಯಾ 17 ವರ್ಷದ ಸ್ಪೋಟಕ ಬ್ಯಾಟರ್ ಶಫಾಲಿ ವರ್ಮಾ ದಿ ಹಂಡ್ರೆಡ್ ಲೀಗ್​ನಲ್ಲಿ ಬರ್ನಿಂಗ್​ಹ್ಯಾಮ್ ಫೀನಿಕ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

The Hundred: ದಿ ಹಂಡ್ರೆಡ್ ಲೀಗ್​ ಆಡಲಿರುವ ಟೀಮ್ ಇಂಡಿಯಾ ಆಟಗಾರ್ತಿಯರು ಯಾರೆಲ್ಲಾ ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಜುಲೈ 21 ರಂದು ಹೊಸ ಕ್ರಿಕೆಟ್​ ಲೀಗ್​ಗೆ ಚಾಲನೆ ದೊರೆಯಲಿದೆ. ಟೆಸ್ಟ್, ಏಕದಿನ, ಟಿ20 ಹಾಗೂ ಟಿ10 ಕ್ರಿಕೆಟ್ ನೋಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ದಿ ಹಂಡ್ರೆಡ್ ಲೀಗ್ ಮೂಲಕ ಮನರಂಜನೆ ನೀಡಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಮುಂದಾಗಿದೆ. ಅದರಂತೆ ಜುಲೈ 21 ರಿಂದ ಆಗಸ್ಟ್ 21 ರವರೆಗೆ ಇಂಗ್ಲೆಂಡ್​ನಲ್ಲಿ ಹೊಸ ಮಾದರಿಯ ಕ್ರಿಕೆಟ್ ಲೀಗ್ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳಿದ್ದು, ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಪಂದ್ಯಗಳು ನಡೆಯಲಿದೆ.

ಹೊಸ ಮಾದರಿಯ ಈ ಟೂರ್ನಿಯಲ್ಲಿ ಹಲವು ರಾಷ್ಟ್ರಗಳ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಆದರೆ ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ವಿದೇಶಿ ಲೀಗ್​ನಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿಲ್ಲ. ಇದಾಗ್ಯೂ ಭಾರತದ ಮಹಿಳಾ ಕ್ರಿಕೆಟರುಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡಿದೆ. ಅದರಂತೆ ಕ್ರಿಕೆಟ್​ ಜಗತ್ತಿಗೆ ಪರಿಚಿತವಾಗುತ್ತಿರುವ ಹೊಸ ಲೀಗ್​ನಲ್ಲಿ ಐವರು ಭಾರತೀಯ ಆಟಗಾರ್ತಿಯರು ಕಾಣಿಸಿಕೊಳ್ಳಲಿದ್ದಾರೆ. ಅವರೆಂದರೆ…

ಶಫಾಲಿ ವರ್ಮಾ: ಟೀಮ್ ಇಂಡಿಯಾ 17 ವರ್ಷದ ಸ್ಪೋಟಕ ಬ್ಯಾಟರ್ ಶಫಾಲಿ ವರ್ಮಾ ದಿ ಹಂಡ್ರೆಡ್ ಲೀಗ್​ನಲ್ಲಿ ಬರ್ನಿಂಗ್​ಹ್ಯಾಮ್ ಫೀನಿಕ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಸ್ಮೃತಿ ಮಂಧನಾ: ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಸರ್ದನ್ ಬ್ರೇವ್ ತಂಡದ ಪರ ಆಡಲಿದ್ದಾರೆ.

ಜೆಮಿಮಾ ರೋಡ್ರಿಗಸ್: ಟೀಮ್ ಇಂಡಿಯಾ ಯುವ ಆಟಗಾರ್ತಿ ಜೆಮಿಮಾ ನಾರ್ಥನ್ ಸೂಪರ್‌ಚಾರ್ಜರ್‌ ಪರ ಕಣಕ್ಕಿಳಿಯಲಿದ್ದಾರೆ.

ಹರ್ಮನ್ ಪ್ರೀತ್ ಕೌರ್: ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡದ ಪರ ಆಡಲಿದ್ದಾರೆ.

ದೀಪ್ತಿ ಶರ್ಮಾ: ಟೀಮ್ ಇಂಡಿಯಾ ಆಲ್​ರೌಂಡರ್ ದೀಪ್ತಿ ಶರ್ಮಾ ಲಂಡನ್ ಸ್ಪಿರಿಟ್ ತಂಡ ಪರ ಕಣಕ್ಕಿಳಿಯಲಿದ್ದಾರೆ.

 

ದಿ ಹಂಡ್ರೆಡ್ ಲೀಗ್ ನಿಯಮಗಳೇನು?

– ದಿ ಹಂಡ್ರೆಡ್ ಲೀಗ್​ನಲ್ಲಿ ಒಂದು ಇನ್ನಿಂಗ್ಸ್​ನಲ್ಲಿ 100 ಎಸೆತಗಳನ್ನು ಬೌಲಿಂಗ್ ಮಾಡಲಾಗುತ್ತದೆ. ಅಂದರೆ ಟಿ20 ಕ್ರಿಕೆಟ್​ನಲ್ಲಿ 20 ಓವರ್​ನಂತೆ 120 ಎಸೆತಗಳಾದರೆ ಇಲ್ಲಿ ತಲಾ 100 ಎಸೆತಗಳಿರಲಿವೆ.

– ಈ ಲೀಗ್​ನಲ್ಲಿ ಬೌಲರ್​ ಸತತ 5 ಅಥವಾ 10 ಬೌಲ್​ಗಳನ್ನು ಮಾಡಬಹುದು. ಅಂದರೆ ಇಲ್ಲಿ ಓವರ್​ ಲೆಕ್ಕಚಾರವು 5 ಎಸೆತಗಳಿಗೆ ಸೀಮಿತವಾಗಿರುತ್ತದೆ. ಆದರೆ ಇಲ್ಲಿ ಸತತ 10 ಎಸೆತಗಳನ್ನು ಎಸೆಯುವ ಅವಕಾಶ ಇರುವುದು ವಿಶೇಷ.

– ಒಂದು ಇನಿಂಗ್ಸ್​ನಲ್ಲಿ ಒಬ್ಬ ಬೌಲರ್​ಗೆ 20 ಎಸೆತಗಳು ಮಾತ್ರ ಇರಲಿದೆ.

– ಈ ಇಪ್ಪತ್ತು ಎಸೆತಗಳನ್ನು 2 ಬಾರಿ ಬೌಲಿಂಗ್ ಮಾಡಿ ಮುಗಿಸಬಹುದು. ಅಂದರೆ ಮೊದಲ ಓವರ್​ನಲ್ಲಿ ಸತತ 10 ಎಸೆತ ಹಾಗೂ 2ನೇ ಓವರ್​ನಲ್ಲಿ ಸತತ 10 ಎಸೆತ ಎಸೆಯಬಹುದು. ಇದರ ಹೊರತಾಗಿ ಓವರ್​ ಲೆಕ್ಕಚಾರದಲ್ಲಿ 5 ಎಸೆತಗಳಂತೆ ನಾಲ್ಕು ಓವರ್ ಮಾಡಬೇಕಾಗುತ್ತದೆ.

– ಸಾಮಾನ್ಯವಾಗಿ ಕ್ರಿಕೆಟ್​ನಲ್ಲಿ ಒಂದು ಓವರ್​ ಬಳಿಕ ಬ್ಯಾಟ್ಸ್​ಮನ್​ ಸ್ಟ್ರೈಕ್ ಬದಲಿಸಬೇಕು. ಆದರೆ ದಿ ಹಂಡ್ರೆಡ್ ಲೀಗ್​ನಲ್ಲಿ 10 ಎಸೆತಗಳ ಬಳಿಕ ಸ್ಟ್ರೈಕ್ ಬದಲಿಸಿಕೊಳ್ಳಲಾಗುತ್ತದೆ.

– ಪ್ರತಿ ತಂಡಕ್ಕೆ ಪ್ರಾರಂಭದಲ್ಲಿ 25 ಎಸೆತಗಳ ಪವರ್‌ಪ್ಲೇ ನೀಡಲಾಗುತ್ತದೆ. ಈ ವೇಳೆ 30 ಯಾರ್ಡ್ ಹೊರಗೆ ಇಬ್ಬರು ಫೀಲ್ಡರ್​ಗಳಿಗೆ ಮಾತ್ರ ಅವಕಾಶ ಇರಲಿದೆ.

– ಒಟ್ಟಾರೆಯಾಗಿ ಲೀಗ್‌ನಲ್ಲಿ 32 ಪಂದ್ಯಗಳು ನಡೆಯಲಿವೆ. ಅದರಂತೆ ತಂಡವೊಂದಕ್ಕೆ 8 ಪಂದ್ಯಗಳು ಇರಲಿದ್ದು, ಪ್ರತಿ ತಂಡವು ನಾಲ್ಕು ಪಂದ್ಯಗಳನ್ನು ಹೋಮ್​​ಗ್ರೌಂಡ್​ನಲ್ಲಿ ಮತ್ತು ನಾಲ್ಕು ಪಂದ್ಯಗಳನ್ನು ಅವೇ ಗ್ರೌಂಡ್​ನಲ್ಲಿ (ಎದುರಾಳಿ ತಂಡದ ಹೋಮ್​ಗ್ರೌಂಡ್) ಆಡಲಿದೆ.

– ದಿ ಹಂಡ್ರೆಡ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡದಲ್ಲಿ 15 ಮಂದಿಗೆ ಮಾತ್ರ ಅವಕಾಶ ಇರಲಿದೆ.

– 8 ತಂಡಗಳಲ್ಲಿ ಟಾಪ್ 3 ಬರುವ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಅಂದರೆ ಟಾಪ್ 1 ತಂಡದ ಜೊತೆ ಆಡಲು 2ನೇ ಮತ್ತು 3ನೇ ತಂಡ ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್ ಆಡಲಿದೆ.

 

ಇದನ್ನೂ ಓದಿ: ಇದಪ್ಪಾ ಸೇಡು ಅಂದ್ರೆ!; ಶ್ರೀಲಂಕಾ ವಿರುದ್ದ ಭಾರತ ಸೋತು ಎಷ್ಟು ವರ್ಷಗಳಾಗಿವೆ ಗೊತ್ತಾ..?

ಇದನ್ನೂ ಓದಿ: ಕೃನಾಲ್ ಪಾಂಡ್ಯ ವರ್ತನೆಯಲ್ಲಿ ಸಖತ್ ಬದಲಾವಣೆ! ಇದು ರಾಹುಲ್ ದ್ರಾವಿಡ್ ಎಫೆಕ್ಟ್ ಎಂದ ನೆಟ್ಟಿಗರು; ವಿಡಿಯೋ