Team India: ಭಾರತದ ವಿರುದ್ದ ಕಣಕ್ಕಿಳಿದ ಟೀಮ್ ಇಂಡಿಯಾ ಆಟಗಾರರು..!

ತಂಡದಲ್ಲಿ ಮಾಯಾಂಕ್ ಅಗರ್ವಾಲ್, ಹನುಮಾ ವಿಹಾರಿ, ಅಕ್ಸರ್ ಪಟೇಲ್, ಉಮೇಶ್ ಯಾದವ್ ಹಾಗೂ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.

Team India: ಭಾರತದ ವಿರುದ್ದ ಕಣಕ್ಕಿಳಿದ ಟೀಮ್ ಇಂಡಿಯಾ ಆಟಗಾರರು..!
Avesh khan

ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಕೌಂಟಿ ಸೆಲೆಕ್ಟ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆರಂಭಿಸಿದೆ. 3 ದಿನದಾಟದಲ್ಲಿ ನಡೆಯಲಿರುವ ಈ ಪಂದ್ಯವು ಇದೀಗ ಹಲವು ಕಾರಣಗಳಿಂದ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿದೆ. ಹೌದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದಾರೆ. ಹಾಗೆಯೇ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಎದುರಾಳಿ ಕೌಂಟಿ ಸೆಲೆಕ್ಟ್ ಇಲೆವೆನ್​ ಪರ ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ.

ಕೌಂಟಿ ಸೆಲೆಕ್ಟ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರು ಕಣಕ್ಕಿಳಿದಿರಲಿಲ್ಲ. ಈ ಎಲ್ಲ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಂಡದಲ್ಲಿ ಮಾಯಾಂಕ್ ಅಗರ್ವಾಲ್, ಹನುಮಾ ವಿಹಾರಿ, ಅಕ್ಸರ್ ಪಟೇಲ್, ಉಮೇಶ್ ಯಾದವ್ ಹಾಗೂ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್​ಗೆ ಸ್ಥಾನ ಲಭಿಸಿರಲಿಲ್ಲ. ಅತ್ತ ಕೌಂಟಿ ಸೆಲೆಕ್ಟ್ ಇಲೆವೆನ್ ತಂಡದಲ್ಲಿ ಆಡುವ ಅವಕಾಶವಿದ್ದ ಕಾರಣ ಅವೇಶ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾ ವಿರುದ್ದ ಕಣಕ್ಕಿಳಿದಿದ್ದಾರೆ.

ಕೌಂಟಿ ಸೆಲೆಕ್ಟ್ ಪರ 9.5 ಓವರ್ ಬೌಲಿಂಗ್ ಮಾಡಿರುವ ಅವೇಶ್ ಖಾನ್ 41 ರನ್​ ನೀಡಿದರೂ, ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟ್ಸ್​ಮನ್​ನನ್ನು ಔಟ್ ಮಾಡಲು ಸಾಧ್ಯವಾಗಿಲ್ಲ. ಇನ್ನು 46 ಓವರ್​ವರೆಗೂ ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡಿಲ್ಲ. ಇನ್ನು ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 33 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ಔಟಾದರು. ಹಾಗೆಯೇ ಆರಂಭಿಕನಾಗಿ ಸ್ಥಾನ ಪಡೆದ ಮಾಯಾಂಕ್ ಅಗರ್ವಾಲ್ (28) ಸಹ ವಿಫಲರಾದರು. ಅಷ್ಟೇ ಅಲ್ಲದೆ ಚೇತೇಶ್ವರ ಪೂಜಾರ 21 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಸುದ್ದಿ ಅಪ್ಡೇಟ್​ ವೇಳೆಗಿನ ಸ್ಕೋರ್ ಬೋರ್ಡ್ ಪ್ರಕಾರ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 144 ರನ್​ಗಳಿಸಿದೆ. ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಕೌಂಟಿ ಸೆಲೆಕ್ಟ್ ಇಲೆವೆನ್: ಹಸೀಬ್ ಹಮೀದ್ , ಜೇಕ್ ಲಿಬ್ಬಿ , ರಾಬರ್ಟ್ ಯೇಟ್ಸ್ , ವಾಷಿಂಗ್ಟನ್ ಸುಂದರ್ , ವಿಲ್ ರೋಡ್ಸ್ (ನಾಯಕ) , ಜೇಮ್ಸ್ ರೆವ್ (ವಿಕೆಟ್ ಕೀಪರ್) , ಲಿಂಡನ್ ಜೇಮ್ಸ್ , ಲಿಯಾಮ್ ಪ್ಯಾಟರ್ಸನ್-ವೈಟ್ , ಜ್ಯಾಕ್ ಕಾರ್ಸನ್ , ಕ್ರೇಗ್ ಮೈಲ್ಸ್ , ಅವೇಶ್ ಖಾನ್

ಟೀಮ್ ಇಂಡಿಯಾ ಇಲೆವೆನ್ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

 

ಇದನ್ನೂ ಓದಿ: ಇದಪ್ಪಾ ಸೇಡು ಅಂದ್ರೆ!; ಶ್ರೀಲಂಕಾ ವಿರುದ್ದ ಭಾರತ ಸೋತು ಎಷ್ಟು ವರ್ಷಗಳಾಗಿವೆ ಗೊತ್ತಾ..?

ಇದನ್ನೂ ಓದಿ: ಕೃನಾಲ್ ಪಾಂಡ್ಯ ವರ್ತನೆಯಲ್ಲಿ ಸಖತ್ ಬದಲಾವಣೆ! ಇದು ರಾಹುಲ್ ದ್ರಾವಿಡ್ ಎಫೆಕ್ಟ್ ಎಂದ ನೆಟ್ಟಿಗರು; ವಿಡಿಯೋ