ಕ್ರಿಕೆಟ್ ಆಡುತ್ತಿದ್ದಾಗ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಭಯಂದರ್‌ನ 52 ವರ್ಷದ ಉದ್ಯಮಿ ಜಯೇಶ್ ಚುನ್ನಿಲಾಲ್ ಸಾವ್ಲಾ ಎಂದು ಗುರುತಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸಾವ್ಲಾ ಅವರ ತಲೆಗೆ ಚೆಂಡು ಬಡಿದಿದ್ದು, ಇದರಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಚ್ಚಿ ಸಮುದಾಯವರು ಮಾಟುಂಗಾ ಜಿಮ್ಖಾನಾ ದಾಡ್ಕರ್ ಮೈದಾನದಲ್ಲಿ ಹಿರಿಯರ ಟಿ20 ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಈ ಟೂರ್ನಿಯಲ್ಲಿ ಜಯೇಶ್ ಚುನ್ನಿಲಾಲ್ ಸಾವ್ಲಾ ಕೂಡ ಭಾಗವಹಿಸಿದ್ದರು.
ಒಂದೇ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದವು. ಇದೇ ವೇಳೆ ಜಯೇಶ್ ಸಾವ್ಲಾ ತನ್ನ ತಂಡಕ್ಕಾಗಿ ಫೀಲ್ಡಿಂಗ್ ಮಾಡುತ್ತಿದ್ದರು. ಮತ್ತೊಂದು ಪಂದ್ಯದ ಬ್ಯಾಟ್ಸ್‌ಮನ್ ಹೊಡೆದ ಚೆಂಡು ಇದ್ದಕ್ಕಿದ್ದಂತೆ ಅವರ ತಲೆಗೆ ಬಂದು ಬಿದ್ದಿದೆ. ಇದರಿಂದ ಕುಸಿದು ಬಿದ್ದ ಸಾವ್ಲಾ ಪ್ರಜ್ಞೆ ಕಳೆದುಕೊಂಡಿದ್ದಾರೆ.
ತಕ್ಷಣವೇ ಸಾವ್ಲಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ಅವರು ಅದಾಗಲೇ ಮೃತಪಟ್ಟಿದ್ದಾರೆ ವೈದ್ಯರು ತಿಳಿಸಿದರು ಎಂದು ಮಾಟುಂಗಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಚವಾಣ್ ಮಾಹಿತಿ ನೀಡಿದ್ದಾರೆ.
ನಾವು ಆಕಸ್ಮಿಕ ಸಾವಿನ (ಎಡಿಆರ್) ಪ್ರಕರಣವನ್ನು ದಾಖಲಿಸಿದ್ದೇವೆ. ಈ ಕುರಿತು ಮತ್ತಷ್ಟು ಮಾಹಿತಿಗಾಗಿ ತನಿಖೆಯನ್ನು ನಡೆಸುತ್ತಿದ್ದೇವೆ. ಜಯೇಶ್ ಚುನ್ನಿಲಾಲ್ ಸಾವ್ಲಾ ಉದ್ಯಮಿಯಾಗಿದ್ದು, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Arjuna Award: ಅರ್ಜುನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗದ ಸ್ಟಾರ್ ಆಟಗಾರರು ಯಾರು ಗೊತ್ತಾ?
2014 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಟೂರ್ನಿಯ ಪಂದ್ಯದ ವೇಳೆ ಶಾನ್ ಅಬಾಟ್ ಎಸೆದ ಚೆಂಡು ಫಿಲ್ ಹ್ಯೂಸ್ ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು. ತಕ್ಷಣವೇ ಕುಸಿದು ಬಿದ್ದಿದ್ದ ಹ್ಯೂಸ್ ಕೋಮಾಕ್ಕೆ ಜಾರಿದ್ದರು. ಇದಾಗಿ 2 ದಿನಗಳ ನಂತರ ಆಸ್ಪತ್ರೆಯಲ್ಲಿ ಫಿಲಿಪ್ ಹ್ಯೂಸ್ ನಿಧನರಾಗಿದ್ದರು. ಇದೀಗ ಮುಂಬೈನಲ್ಲಿ ನಡೆದ ಟೂರ್ನಿಯಲ್ಲಿ ವ್ಯಕ್ತಿಯೊಬ್ಬರು ತಲೆಗೆ ಚೆಂಡು ಬಡಿದು ಸಾವನ್ನಪ್ಪುವ ಮೂಲಕ ಫಿಲ್ ಹ್ಯೂಸ್ ನಿಧನದ ಕಹಿ ಘಟನೆಯನ್ನು ನೆನಪಿಸಿದ್ದಾರೆ.